ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಲಬುರ್ಗಿ–ಬೀದರ್‌ ರೈಲು ಮಾರ್ಗ; ಪ್ರಯಾಣಿಕರ ಪಾಲಿಗೆ ಸ್ಮಾರಕ!

Last Updated 11 ನವೆಂಬರ್ 2020, 2:22 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಮತ್ತು ಬೀದರ್‌ ಮಧ್ಯದ 107 ಕಿ.ಮೀ. ಉದ್ದದ ರೈಲು ಮಾರ್ಗ ಉದ್ಘಾಟನೆಯಾಗಿ ಮೂರು ವರ್ಷ ಉರುಳಿವೆ. ಇಲ್ಲಿ ಒಂದು ಡೆಮು ರೈಲು ಮಾತ್ರ ಸಂಚರಿಸುತ್ತಿತ್ತು. ಕೊರೊನಾ ಕಾರಣದಿಂದಾಗಿ ಆ ರೈಲು ಸೇವೆ ಸಹ ಸ್ಥಗಿತಗೊಂಡಿದ್ದು, ಈ ಮಾರ್ಗ ಈಗ ಪ್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಹೊಸ ಮಾರ್ಗದಿಂದಾಗಿ ಬೀದರ್‌–ಮುಂಬೈ ನಡುವಿನ ಅಂತರ 115 ಕಿ.ಮೀ ಹಾಗೂ ಬೀದರ್‌– ಬೆಂಗಳೂರು ನಡುವಿನ ಅಂತರ 20 ಕಿ.ಮೀ ಕಡಿಮೆ ಆಗಲಿದೆ. ಬೀದರ್‌ನಿಂದ ಕಲಬುರ್ಗಿ– ಪಂಢರಪುರ ಮಾರ್ಗವಾಗಿ ಮಹಾರಾಷ್ಟ್ರದ ಕೊಲ್ಹಾಪುರ ಸಂಪರ್ಕ ಸಾಧ್ಯವಾಗಲಿದೆ. ಕಲಬುರ್ಗಿ–ಬೀದರ್‌ ಮಧ್ಯ ಸಂಚಾರ ಇನ್ನಷ್ಟು ಸಲೀಸಾಗಲಿದೆ ಎಂದು ಈ ಭಾಗದ ಜನ ಹಿರಿಹಿರಿ ಹಿಗ್ಗಿದ್ದರು.ಆದರೆ, ಹಲವು ದಶಕಗಳ ನಂತರ ಹೊಸ ಮಾರ್ಗ ನಿರ್ಮಾಣಗೊಂಡರೂ, ಅದರ ಪೂರ್ಣಪ್ರಯೋಜನ ಮಾತ್ರ ಈ ಭಾಗದವರಿಗೆ ಇನ್ನೂ ದೊರೆಯುತ್ತಿಲ್ಲ.

ಸಿ.ಕೆ. ಜಾಫರ್‌ ಷರೀಫ್‌ ಅವರು ರೈಲ್ವೆ ಸಚಿವರಾಗಿದ್ದಾಗ ಬೀದರ್‌–ಕಲಬುರ್ಗಿ ರೈಲು ಮಾರ್ಗದ ಸಮೀಕ್ಷೆ ನಡೆಸಲಾಗಿತ್ತು. 1999ರಲ್ಲಿಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿತ್ತು. 2000ನೇ ಸಾಲಿನ ಜುಲೈ 29ರಂದು ಅಂದಿನ ರೈಲ್ವೆ ಖಾತೆ ರಾಜ್ಯ ಸಚಿವ ಬಂಗಾರು ಲಕ್ಷ್ಮಣ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಅನುದಾನದ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿತ್ತು. ಕಲಬುರ್ಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾದ ನಂತರ ಅಗತ್ಯ ಅನುದಾನ ನೀಡಿ ಕಾಮಗಾರಿ ವೇಗ ಪಡೆಯುವಂತೆ ಮಾಡಿದ್ದರು.

ಈ ಮಾರ್ಗದ ಆರಂಭಿಕ ಯೋಜನಾ ಮೊತ್ತ ₹ 369 ಕೋಟಿ. ಕಾಮಗಾರಿ ವಿಳಂಬದ ಕಾರಣ ಯೋಜನೆ ಪೂರ್ಣಗೊಳ್ಳಲು ₹ 1,542 ಕೋಟಿ ವ್ಯಯಿಸಲಾಯಿತು. 2017ರ ಅಕ್ಟೋಬರ್ 29ರಂದು ಬೀದರ್‌ನಲ್ಲಿ ನಡೆದಿದ್ದ ಸಮಾರಂಭದಲ್ಲಿ ಈ ಮಾರ್ಗ ಲೋಕಾರ್ಪಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಮಗಾರಿ ವಿಳಂಬದಿಂದ ನಾಲ್ಕು ಪಟ್ಟು ಹಣ ವಿನಿಯೋಗಿಸಬೇಕಾಯಿತು ಎಂದು ಹಿಂದಿನ ಸರ್ಕಾರಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

13 ರೈಲು ನಿಲ್ದಾಣ: ಕಲಬುರ್ಗಿ–ಬೀದರ್‌ ಮಧ್ಯೆ ಸುಲ್ತಾನಪುರ, ಮಹಾಗಾಂವ, ಕುರಿಕೋಟಾದಲ್ಲಿ ಹಾಲ್ಟ್‌ ಸ್ಟೇಷನ್‌, ನಾವದಗಿ, ಹುಮನಾಬಾದ್‌, ನಂದಗಾಂವ ಹಳ್ಳಿ, ಹಳ್ಳಿಖೇಡ (ಕೆ), ಕನಜಿ, ಖಾನಾಪುರ ಡೆಕ್ಕನ್ ಹೀಗೆ ಒಟ್ಟಾರೆ13 ರೈಲು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕಲಬುರ್ಗಿ ಬಳಿಯ ತಾಜಸುಲ್ತಾನಪುರದಲ್ಲಿ ಗೂಡ್ಸ್‌ ಶೆಡ್‌ ನಿರ್ಮಾಣವೂ ಪೂರ್ಣಗೊಂಡಿದೆ.

ಪ್ರಯಾಣಿಕರ ಬೇಡಿಕೆ ಏನು: ಬೀದರ್‌–ಕಲಬುರ್ಗಿ ನಡುವೆ ಎಕ್ಸ್‌ಪ್ರೆಸ್‌ ರೈಲು ಮತ್ತು ಪ್ರತಿ ಗಂಟೆಗೊಂದರಂತೆ ಪ್ಯಾಸೆಂಜರ್‌ ರೈಲು ಓಡಿಸಬೇಕು. ಬೀದರ್‌–ಹುಬ್ಬಳ್ಳಿ, ಪಂಢರಪುರ ಮಾರ್ಗವಾಗಿ ಬೀದರ್‌–ಕೊಲ್ಹಾಪುರ ರೈಲು ಓಡಿಸಬೇಕು. ಬೀದರ್‌–ಕಲಬುರ್ಗಿ–ಬೆಂಗಳೂರು ರೈಲು ಸೇವೆ ಆರಂಭಿಸಬೇಕು ಎಂಬುದು ಈ ಭಾಗದ ಪ್ರಯಾಣಿಕರ ಪ್ರಮುಖ ಬೇಡಿಕೆ.

‘ಕಮಲಾಪುರದಿಂದ ಬೀದರ್‌ ತೆರಳಲು ರೈಲು ಪ್ರಯಾಣ ದರ ₹ 30 ಇದ್ದರೆ, ಬಸ್‌ ಪ್ರಯಾಣ ದರ ₹ 90 ಇದೆ. ಈಗ ಡೆಮು ರೈಲು ಸಹ ಸ್ಥಗಿತಗೊಂಡಿದ್ದರಿಂದ ಬಸ್‌ನ್ನೇ ಅವಲಂಬಿಸಬೇಕಾಗಿದೆ’ ಎನ್ನುತ್ತಾರೆ ಕಲಬುರ್ಗಿ ಜಿಲ್ಲೆ ಕಮಲಾಪುರದ ವ್ಯಾಪಾರಿ ಸಂತೋಷ ಮಾಗಾ.

‘ಕಲಬುರ್ಗಿ–ಬೀದರ್‌ ಎರಡೂ ಕಡೆಯಿಂದ ಬೆಳಿಗ್ಗೆ 7ಕ್ಕೆ ರೈಲು ಹೊರಡುವಂತಾಗಬೇಕು.ಬೀದರ್‌ನಿಂದ ಬೆಂಗಳೂರು, ಚೆನ್ನೈ ಮತ್ತಿತರ ಕಡೆಗೆ ರೈಲು ಸಂಚಾರ ಆರಂಭಿಸಬೇಕು’ ಎನ್ನುವುದು ಕುರಿಕೋಟಾದ ಪ್ರಯಾಣಿಕ ಯೂನುಸ್ ಪಟೇಲ್ ಮಾಲಿಪಾಟೀಲ ಅವರ ಬೇಡಿಕೆ.

1.67 ಕಿ.ಮೀ. ಉದ್ದದ ಸುರಂಗ ಮಾರ್ಗ

ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳ ಗಡಿಯಲ್ಲಿರುವ ಮರಗುತ್ತಿ ಗ್ರಾಮದ ಸಮೀಪ 1.67 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಇದು ಈ ಯೋಜನೆಯ ಪ್ರಮುಖ ಆಕರ್ಷಣೆ. ಇದಕ್ಕೆ ₹ 75 ಕೋಟಿ ವ್ಯಯಿಸಲಾಗಿದೆ. ಈ ಸುರಂಗ ಮಾರ್ಗದಲ್ಲಿ ಸಂಚರಿಸುವ ಅನುಭವ ಪಡೆಯಲಿಕ್ಕಾಗಿಯೇ ಹಲವರು ಹಿಂದೆ ಡೆಮು ರೈಲಿನಲ್ಲಿ ಸಂಚರಿಸಿದ್ದುಂಟು.

ಶ್ರೇಯಕ್ಕಾಗಿ ಜಟಾ ಪಟಿ; ರೈಲಿಗಾಗಿ ಅಲ್ಲ!

ಈ ಮಾರ್ಗ ಲೋಕಾರ್ಪಣೆಮಾಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ಈ ಮಾರ್ಗದ ಶೇ 65ರಷ್ಟು ಕಾಮಗಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. 3 ವರ್ಷಗಳಲ್ಲಿ ಆಗಬೇಕಿದ್ದ ಕೆಲಸಕ್ಕೆ 20 ವರ್ಷ ಹಿಡಿಯಿತು. ಹಿಂದೆ ಅಧಿಕಾರದಲ್ಲಿ ಇದ್ದವರು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದರೆ ಏಳು ವರ್ಷಗಳ ಹಿಂದೆಯೇ ಯೋಜನೆ ಮುಗಿಯುತ್ತಿತ್ತು’ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು.

‘ರಾಜ್ಯ ಸರ್ಕಾರ ಅಗತ್ಯವಿರುವ ಜಮೀನು ನೀಡಿದೆ. ರೈಲ್ವೆ ಇಲಾಖೆ ಅಂದಾಜು ವೆಚ್ಚ ಪರಿಷ್ಕರಣೆ ಮಾಡಿದಾಗಲೆಲ್ಲ ಯೋಜನಾ ಮೊತ್ತದಲ್ಲಿ ಶೇ 50ರಷ್ಟನ್ನು ಭರಿಸಿದೆ. ಈ ಮಾರ್ಗಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುವುದಾಗಿ ರೈಲ್ವೆ ಇಲಾಖೆ ಆರಂಭದಲ್ಲಿ ಹೇಳಿತ್ತು.ಯೋಜನೆಯ ಮಹತ್ವ ಅರಿತ ರಾಜ್ಯ ಸರ್ಕಾರವು ಒಟ್ಟು ವೆಚ್ಚದಲ್ಲಿ ಶೇ 50ರಷ್ಟು ಭರಿಸಲು ಒಪ್ಪಿತ್ತು. ಯೋಜನೆಯಲ್ಲಿ ಕರ್ನಾಟಕದ ಪಾಲು ₹ 771 ಕೋಟಿ. ಹಣವನ್ನು ಆದ್ಯತೆಯ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಅಂದಿನ ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಅವರು ಪ್ರಧಾನಿ ಟೀಕೆಗೆ ಪ್ರತ್ಯುತ್ತರ ನೀಡಿದ್ದರು.

‘ಈ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿದ ಶ್ರೇಯಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಬೇಕು. ಉದ್ಘಾಟನಾ ಸಮಾರಂಭ ಕಲಬುರ್ಗಿಯಲ್ಲಿ ನಡೆಸಿದರೆ ಕಲಬುರ್ಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಬೇಕಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಸಂಸದ ಇರುವ ಬೀದರ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ’ ಎಂದು ಕಾಂಗ್ರೆಸ್ಸಿಗರು ಆಗ ಆರೋಪಿಸಿದ್ದರು.

‘ಉದ್ಘಾಟನಾ ಸಮಾರಂಭದ ವೇಳೆ ಇಷ್ಟೆಲ್ಲ ಆರೋಪ–ಪ್ರತ್ಯಾರೋಪ ನಡೆದಿದ್ದರೂ, ಈಗ ಈ ಯೋಜನೆಯ ಬಗ್ಗೆ ಚಿಂತಿಸುವವರೇ ಇಲ್ಲ’ ಎನ್ನುತ್ತಿದ್ದಾರೆ ಜನ.

12 ರಂದು ಸಭೆ: ಸಂಸದ ಜಾಧವ

ಕಲಬುರ್ಗಿ–ಬೀದರ್‌ ರೈಲು ಮಾರ್ಗದಲ್ಲಿ ಹೆಚ್ಚಿನ ರೈಲುಗಳು ಸಂಚರಿಸುವಂತೆ ಮಾಡುವ ನಮ್ಮ ಪ್ರಯತ್ನ ಮುಂದುವರೆದಿದೆ. ಈ ಕಾರಣಕ್ಕಾಗಿಯೇ ನವೆಂಬರ್‌ 12ರಂದು ನಾನು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲಿದ್ದೇನೆ. ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಆದಷ್ಟು ಬೇಗ ಈ ಮಾರ್ಗದ ಪ್ರಯೋಜನ ನಮ್ಮ ಭಾಗದ ಪ್ರಯಾಣಿಕರಿಗೆ ದೊರೆಯುವಂತೆ ಮಾಡುತ್ತೇವೆ.

–ಡಾ.ಉಮೇಶ ಜಾಧವ, ಕಲಬುರ್ಗಿ ಸಂಸದ

***
ಯೋಜನೆ ವಿವರ

* 107 ಕಿ.ಮೀ. ಉದ್ದ

* 53 ಕೆಳ ಸೇತುವೆ(RUB)

* 12 ಮೇಲ್ಸೇತುವೆ (ROB)

* 183 ಸಣ್ಣ, 14 ದೊಡ್ಡ ಸೇತುವೆಗಳ ನಿರ್ಮಾಣ

***
ಅಂಕಿ ಅಂಶ

₹ 369 ಕೋಟಿ ಆರಂಭಿಕ ಯೋಜನಾ ಮೊತ್ತ

₹ 1,542 ಕೋಟಿ ಪರಿಷ್ಕೃತ ಯೋಜನಾ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT