ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಬುರ್ಗಿ ಪಾಲಿಕೆ ಚುಕ್ಕಾಣಿ ಬಿಜೆಪಿಯ ತಿರುಕನ ಕನಸು’

ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟಕ್ಕೆ ಪಾಲಿಕೆ: ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಹೇಳಿಕೆ
Last Updated 12 ಸೆಪ್ಟೆಂಬರ್ 2021, 13:57 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನ ಕೆಲ ಸದಸ್ಯರನ್ನು ಖರೀದಿಸುತ್ತೇವೆ, ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಅವರ ತಿರುಕನ ಕನಸು. ಈಗಾಗಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯೇ ಪಾಲಿಕೆ ಚುಕ್ಕಾಣಿ ಹಿಡಿಯುವುದು ಖಾತ್ರಿಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

‘ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಈಗಾಗಲೇ ಮಾತನಾಡಿದ್ದಾರೆ. ಎರಡೂ ಪಕ್ಷಗಳ ಮಧ್ಯೆ ಮೈತ್ರಿ ನಿಯಮಗಳ ಚರ್ಚೆ ನಡೆದಿದೆ. ಅದು ಮುಗಿದ ಬಳಿಕ ಮೇಯರ್, ಉಪಮೇಯರ್‌ ಯಾರಿಗೆ ಎಂಬುದು ಗೊತ್ತಾಗಲಿದೆ. ಬಿಜೆಪಿ ಮುಖಂಡರು ವಿನಾಕಾರಣ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ರಾಜಕೀಯದ ಕನಿಷ್ಠ ಜ್ಞಾನವೂ ಇಲ್ಲ. ಮಕ್ಕಳಿಗೆ ಇರುವಷ್ಟು ಅಂಕಿ–ಸಂಖ್ಯೆಗಳ ಅರಿವೂ ಅವರಿಗೆ ಇಲ್ಲ. 55 ಸ್ಥಾನಗಳ ಪೈಕಿ ಕಾಂಗ್ರೆಸ್‌ 27 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿದೆ. ಕೇವಲ 23 ಸ್ಥಾನ ಗೆದ್ದ ಬಿಜೆಪಿಯನ್ನೇ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೊಂದು ರೀತಿ ತಕ್ಷಗಾನದ ಡೈಲಾಗ್‌ನಂತಿದೆ’ ಎಂದು ಅವರು ಮೂದಲಿಸಿದರು.

‘ಕಳೆದ ಬಾರಿ ಕಾಂಗ್ರೆಸ್‌ 23 ಸ್ಥಾನ ಗೆದ್ದಿತ್ತು. ಈ ಬಾರಿ 4 ಸ್ಥಾನ ಹೆಚ್ಚಾಗಿವೆ. ನಮಗೆ ಶೇ 38ರಷ್ಟು ಮತಗಳು ಬಂದಿವೆ, ಬಿಜೆಪಿಗೆ ಶೇ 31ರಷ್ಟು ಬಂದಿವೆ. ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಮತ ನಾವು ಪಡೆದರೆ ಕೇವಲ 45 ಸಾವಿರ ಮತ ಅವರಿಗೆ ಹೋಗಿವೆ. ಬಿಜೆಪಿ ಶಾಸಕರಿರುವ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ 37 ಸಾವಿರ ಮತ ಕಾಂಗ್ರೆಸ್‌ಗೆ, 34 ಸಾವಿರ ಬಿಜೆಪಿಗೆ ಬಂದಿವೆ. ಇದರ ಜ್ಞಾನವೂ ಇಲ್ಲದವರಂತೆ ಕಟೀಲ್‌ ಮಾತನಾಡುತ್ತಿದ್ದಾರೆ. ಯಾವ ನೈತಿಕತೆ ಇದೆ ಎಂದು ಪಾಲಿಕೆ ಅಧಿಕಾರಿ ತಮ್ಮದೇ ಎಂದು ಹೇಳಿಕೊಳ್ಳುತ್ತಾರೆ?’ ಎಂದೂ ಶರಣಪ್ರಕಾಶ ಪ್ರಶ್ನಿಸಿದರು.

‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಹುರುಪಿನಲ್ಲಿ ಕಲಬುರ್ಗಿ ಪಾಲಿಕೆ ಚುನಾವಣೆಗೆ ಸಾಕಷ್ಟು ಹಣ ಸುರಿದಿದ್ದಾರೆ. ಬಿಜೆಪಿಯಿಂದಲೇ ಅವರ ಪ್ರತಿಯೊಬ್ಬ ಅಭ್ಯರ್ಥಿಗೂ ಕನಿಷ್ಠ ₹ 20 ಲಕ್ಷ ಚುನಾವಣಾ ಖರ್ಚು ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷದಿಂದ ಯಾವ ಅಭ್ಯರ್ಥಿಗೂ ವೆಚ್ಚಕ್ಕೆ ಹಣ ನೀಡಿಲ್ಲ. ಕೆಲವರು ಅವರ ವೈಯಕ್ತಿಕ ಖರ್ಚು ಮಾಡಿಕೊಂಡಿರಬಹುದು’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಗರದ ಜನ ಕಾಂಗ್ರೆಸ್‌ಗೆ ನೈತಿಕ ಬಲ ತಂದುಕೊಟ್ಟಿದ್ದಾರೆ. ಎಐಎಂಐಎಂ ಪಕ್ಷವನ್ನೂ ಧಿಕ್ಕರಿಸಿ ಮುಸ್ಲಿಮರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಸತ್ಯ ಅರ್ಥ ಮಾಡಿಕೊಳ್ಳದ ಬಿಜೆಪಿ ಮುಖಂಡರು ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಇದು ಈಡೇರಲು ಕಾಂಗ್ರೆಸ್‌ ಬಿಡುವುದಿಲ್ಲ’ ಎಂದು ಪುನರುಚ್ಚರಿಸಿದರು.‌

ಶಾಸಕಿ ಖನೀಜ್‌ ಫಾತಿಮಾ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಸುಭಾಷ ಗುತ್ತೇದಾರ, ಶರಣಕುಮಾರ ಮೋದಿ ಹಲವರು ಇದ್ದರು.

‘ವಾಜಪೇಯಿ, ಅಡ್ವಾನಿ ಕೂಡ ಸೋತಿಲ್ಲವೇ?’

’ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕಟೀಲ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಂಥ ಹಿರಿಯ, ಧೀಮಂತ ನಾಯಕರ ಬಗ್ಗೆ ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ನಿಮ್ಮ ಮಾತಿನ ವಿಕೃತಿಗೆ ಖರ್ಗೆ ಅವರಂಥ ಹೆಸರು ಬಳಸಿಕೊಳ್ಳಬೇಡಿ’‌ ಎಂದು ಕಾಂಗ್ರೆಸ್‌ ಮುಖಂಡ ಬಿ.ಆರ್‌. ಪಾಟೀಲ ಕಿಡಿಕಾರಿದರು.

‘ಖರ್ಗೆ ಅವರನ್ನು ನಾವು ಸೋಲಿಸಿದ ಮೇಲೆ ಅವರು ಕಲಬುರ್ಗಿಗೆ ಬಂದು ಮುಖ ಕೂಡ ತೋರಿಸುತ್ತಿಲ್ಲ ಎಂದು ಕಟೀಲ್‌ ಹೇಳಿದ್ದಾರೆ. ಸೋಲು– ಗೆಲುವು ಯಾರಿಗೂ ಶಾಶ್ವತವಲ್ಲ ಎಂಬ ಸತ್ಯ ಅವರಿಗೆ ಅರ್ಥವಾಗಿಲ್ಲ. ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾನಿ ಕೂಡ ಪದೇಪದೇ ಸೋತಿದ್ದಾರಲ್ಲ. ಅದಕ್ಕೇನು ಹೇಳುತ್ತೀರಿ?’ ಎಂದು ತಿರುಗುಬಾಣ ಬಿಟ್ಟರು.

‘ಖರ್ಗೆ ಅವರು ಕಲಬುರ್ಗಿಗೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡುವ ನೀವು; ಗೋವಿಂದ ಕಾರಜೋಳ ಅವರನ್ನು ಏಕೆ ಮಾತನಾಡಲಿಲ್ಲ? ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಕೋವಿಡ್ ಸಂಕಷ್ಟದಲ್ಲೂ ಒಮ್ಮೆಯೂ ಜಿಲ್ಲೆಗೆ ಬರಲಿಲ್ಲ. ಅವರ ಅರ್ಹತೆ ಕಂಡು ಸ್ವತಃ ಬಿಜೆಪಿ ಮುಖಂಡರೇ ಉಸ್ತುವಾರಿ ಸ್ಥಾನ ಬದಲಾಯಿಸಿದರಲ್ಲ; ಆವಾಗ ಕಟೀಲ್‌ ನಾಲಿಗೆ ಏನಾಗಿತ್ತು?’ ಎಂದೂ ಕಿಡಿ ಕಾರಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT