ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್ ಇನ್ | ಪ್ರವಾಸಿ ಸರ್ಕಿಟ್ ಮಾಡಲು ಯೋಜನೆ

ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿಕೆ
Last Updated 1 ಡಿಸೆಂಬರ್ 2022, 13:25 IST
ಅಕ್ಷರ ಗಾತ್ರ

ಕಲಬುರಗಿ: ‘ಜಿಲ್ಲೆಯಲ್ಲಿ ಹಲವು ಐತಿಹಾಸಿಕ ತಾಣಗಳಿವೆ. ಪ್ರವಾಸಿಗರು ಮೂರು ದಿನ ಇಲ್ಲಿದ್ದು ನೋಡಲು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಪ್ರಕಟಿಸಿದರು.

‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಗುರುವಾರ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಪ್ರವಾಸೋದ್ಯಮ ದೃಷ್ಟಿಯಿಂದ ಕಲಬುರಗಿ ಅತ್ಯಂತ ಪ್ರಶಸ್ತ ಜಿಲ್ಲೆ. ಇಲ್ಲಿನ ಸಂಗತಿ, ಸ್ಮಾರಕಗಳನ್ನು ಪ್ರವಾಸಿಗಳಿಗೆ ಮನಗಾಣಿಸಬೇಕು’ ಎಂದರು.

‘ಕಲಬುರಗಿಯ ಬಹಮನಿ ಕೋಟೆ, ಗಾಣಗಾಪುರದ ದತ್ತಾತ್ರೇಯ ಮಂದಿರ, ಚಿತ್ತಾಪುರ ತಾಲ್ಲೂಕಿನ ನಾಗಾವಿಯ ಯಲ್ಲಮ್ಮ ದೇವಸ್ಥಾನ ಸೇರಿ ಹಲವು ಐತಿಹಾಸಿಕ, ಧಾರ್ಮಿಕ ತಾಣಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಹಮನಿ ಕೋಟೆಯಲ್ಲಿರುವ ಮಸೀದಿ ಹಾಗೂ ತೋಪು ಏಷ್ಯಾ ಖಂಡದಲ್ಲಿಯೇ ದೊಡ್ಡದಾಗಿವೆ’ ಎಂದರು.

‘ಮಸೀದಿ ನಿರ್ವಹಣೆಗೆ ಆಗಾಖಾನ್ ಪ್ರತಿಷ್ಠಾನದವರು ಮುಂದೆ ಬಂದಿದ್ದಾರೆ. ಕೋಟೆಯ ಸುತ್ತಲಿನ ನಾಲೆ ಸ್ವಚ್ಛಗೊಳಿಸಿ ಬೋಟಿಂಗ್ ವ್ಯವಸ್ಥೆ ಮಾಡಬಹುದು. ಕೋಟೆ ಆವರಣದಲ್ಲಿ 282 ಕುಟುಂಬಗಳು ಅಕ್ರಮವಾಗಿ ವಾಸ ಇವೆ. ಅವರನ್ನು ಅಲ್ಲಿಂದ ತೆರವುಗೊಳಿಸಿ, ನಗರದ ಹೊರಭಾಗದಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಅಲ್ಲಿನ ಕೆಲ ಪ್ರಭಾವಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ತೆರವು ಪ್ರಕ್ರಿಯೆ ಪೂರ್ಣಗೊಂಡರೆ ಅಲ್ಲಿ ಗೈಡ್‌ಗಳಿಗೆ ಕೆಲಸ ಸಿಗಲಿದೆ’ ಎಂದರು.

ಗಾಣಗಾಪುರಕ್ಕೆ ₹ 40 ಕೋಟಿ: ಕಾಶಿ ಕಾರಿಡಾರ್ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದ್ದ, ಖ್ಯಾತ ವಾಸ್ತುಶಿಲ್ಪಿ ಬಿಮನ್ ಪಟೇಲ್‌ ಎಂಬುವವರನ್ನು ಕೆಲ ತಿಂಗಳ ಹಿಂದೆ ಗಾಣಗಾಪುರಕ್ಕೆ ಕರೆಸಿದ್ದೆವು. ಅವರು ಅಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳಾಗಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಸಿಎಸ್‌ಆರ್‌ ನಿಧಿಯಿಂದ ₹ 40 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದ್ದು, ಅತ್ಯುತ್ತಮ ಪುಣ್ಯಕ್ಷೇತ್ರವಾಗಿ ಬದಲಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಫೋನ್ ಇನ್‌ನಲ್ಲಿ ಕೇಳಿದ ಪ್ರಶ್ನೆಗಳು ಹಾಗೂ ಅವುಗಳಿಗೆ ಜಿಲ್ಲಾಧಿಕಾರಿ ಅವರು ನೀಡಿದ ಉತ್ತರದ ಸಂಕ್ಷಿಪ್ತ ರೂಪ ಇಲ್ಲಿದೆ.

* ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ಯಾವಾಗ ಸಿಗುತ್ತದೆ?
ರಾಜ್ಯದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲಿ ತಾಂಡಾಗಳಲ್ಲಿ ವಾಸಿಸುವ 30 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಯಾದಗಿರಿಯಲ್ಲಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಅವುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ಈಗಾಗಲೇ ತಾಂಡಾಗಳ ಸರ್ವೆ ಕಾರ್ಯ ನಡೆಯುತ್ತಿದ್ದು, ಜನವರಿ ಮೊದಲ ವಾರದಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. 366 ತಾಂಡಾಗಳ ಪೈಕಿ 280 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುವುದು.

* ಆದ್ಯತಾ ಚೀಟಿ ಪಡಿತರಕ್ಕೆ ಅರ್ಜಿ ಸಲ್ಲಿಸಿದರೂ ಇನ್ನೂ ಬಂದಿಲ್ಲ
ಜಿಲ್ಲೆಯಲ್ಲಿ 28,146 ಜನರು ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 15,432 ಚೀಟಿಗಳಿಗೆ ಅನುಮೋದನೆ ಸಿಕ್ಕಿದೆ. ಉಳಿದ ಅರ್ಜಿದಾರರಿಗೂ ಶೀಘ್ರ ಬರುವ ನಿರೀಕ್ಷೆ ಇದೆ.

* ಅಕ್ಕಿ ಕಳ್ಳ ಸಾಗಣೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಯಾಕೆ?
ಅಕ್ಕಿ ಕಳ್ಳ ಸಾಗಣೆ ಪ್ರಕರಣಗಳ ಬಗ್ಗೆ ಜಿಲ್ಲಾಡಳಿತ ಗಂಭೀರ ಕ್ರಮಗಳನ್ನು ಕೈಗೊಂಡಿದೆ. ಪ್ರಸಕ್ತ ವರ್ಷ 78 ಪ್ರಕರಣಗಳನ್ನು ದಾಖಲಿಸಿ ₹ 2.60 ಕೋಟಿ ಮೊತ್ತದ ಅಕ್ಕಿ ವಶಕ್ಕೆ ಪಡೆದಿದ್ದೇವೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಅಕ್ಕಿ ವಿತರಿಸಲಾಗುತ್ತಿದೆ. ಫಲಾನುಭವಿಗಳು ಅಕ್ಕಿ ಮಾರಾಟ ಮಾಡುವುದನ್ನು ನಿಲ್ಲಿಸಿದರೆ, ಅಕ್ರಮ ಅಕ್ಕಿ ಸಾಗಣೆ ಪ್ರಕರಣಗಳು ಕಡಿಮೆಯಾಗುತ್ತವೆ.

* ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಬೆಳೆ ನಷ್ಟ ಪರಿಹಾರ ಬಂದಿಲ್ಲ
ಈಗಾಗಲೇ 2.40 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಆರು ಕಂತುಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನೂ 15 ಸಾವಿರ ರೈತರಿಗೆ ಬರಬೇಕಿದ್ದು, ಏಳನೇ ಕಂತಿನಲ್ಲಿ ಬರಬೇಕಿದೆ.

* ಗ್ರಾಮ ಪಂಚಾಯಿತಿಗಳಲ್ಲಿ ಮನೆ ಹಂಚಿಕೆಯಲ್ಲಿ ಅಕ್ರಮವಾಗಿದೆ
ಈ ಬಗ್ಗೆ ಶಾಸಕರ ನೇತೃತ್ವದ ಆಶ್ರಯ ಸಮಿತಿ ಇದ್ದು, ಅದು ಮನೆ ಹಂಚಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಅಲ್ಲದೇ, ಗ್ರಾಮ ಸಭೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರು ಮೇಲ್ವಿಚಾರಣೆ ಮಾಡುತ್ತಾರೆ. ಅಕ್ರಮ ಕಂಡು ಬಂದಿದ್ದರೆ ಸಿಇಒ ಅವರಿಗೆ ದೂರು ನೀಡಬಹುದು.

* ಎತ್ತಿಗೆ ಹಾವು ಕಚ್ಚಿ ಸಾವಿಗೀಡಾಗಿದೆ. ಪರಿಹಾರ ಸಿಗುವುದೇ?
ಹಾವು ಕಚ್ಚಿ ಸಾವಿಗೀಡಾಗಿದ್ದರೆ ಅದರ ಮರಣೋತ್ತರ ಪರೀಕ್ಷಾ ವರದಿಯೊಂದಿಗೆ ತಹಶೀಲ್ದಾರ್ ಅವರಿಗೆ ಮನವಿ ಕೊಡಿ. ₹ 30 ಸಾವಿರ ಪರಿಹಾರ ದೊರೆಯುತ್ತದೆ.

ಮೂವರು ಗ್ರಾಮ ಲೆಕ್ಕಾಧಿಕಾರಿಗಳು ಅಮಾನತು
‘ಬೆಳೆ ಹಾನಿ ಸಮೀಕ್ಷೆಯ ಅಂದಾಜಿನಲ್ಲಿ ತಪ್ಪಾಗಿದೆ ಎಂದು ಹಲವು ದೂರುಗಳು ಬಂದಿದ್ದವು. ಈ ಸಂಬಂಧ ಮೂವರು ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಗುಲಾಬ್ ನಬಿ ಅವರ ಕರೆಗೆ ಪ್ರತಿಕ್ರಿಯಿಸಿದರು.

‘ಪಾರದರ್ಶಕವಾಗಿ ಸಮೀಕ್ಷೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೂ ಒಬ್ಬರು ತಮ್ಮ ತಂದೆ–ತಾಯಿಯ ಹೆಸರಲ್ಲಿದ ಜಮೀನಿನ ಬೆಳೆ ಹಾನಿಯಾಗಿದೆ ಎಂದು ಹೆಚ್ಚು ಹಣ ಹಾಕಿಸಿದ್ದರು. ಮತ್ತೊಬ್ಬರು, ಒಣ ಬೇಸಾಯ ಜಮೀನನ್ನು ನೀರಾವರಿ ಪ್ರದೇಶ ಎಂದು ತಪ್ಪು ಮಾಹಿತಿ ನೀಡಿ ಪರಿಹಾರ ಕೊಟ್ಟಿದ್ದರು. ಮತ್ತೊಬ್ಬರು ಅಫಜಲಪುರದಲ್ಲಿ ತೊಗರಿ ಬೆಳೆದ ಪ್ರದೇಶದಲ್ಲಿ ಕಬ್ಬಿನ ಬೆಳೆ ನಷ್ಟವಾಗಿದೆ ಎಂದು ತೋರಿಸಿದ್ದರು. ಈ ಮೂವರನ್ನು ಅಮಾನತುಗೊಳಿಸಲಾಗಿದೆ’ ಎಂದರು.

ಬಿಟ್ಟುಹೋದವರ ವಿರುದ್ಧ ಪ್ರಕರಣ
ಗಾಣಗಾಪುರ ದತ್ತ ಮಂದಿರದ ಆವರಣದಲ್ಲಿ ಮಾನಸಿಕ ಅಸ್ವಸ್ಥರನ್ನು ಅವರ ಪಾಡಿಗೆ ಬಿಟ್ಟು ಹೋದವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವಂತೆ ತಿಳಿಸಿದ್ದೇನೆ. ಇಂತಹ ಎರಡು, ಮೂರು ಪ್ರಕರಣಗಳಾದರೆ ಆಗ ಬಿಟ್ಟು ಹೋಗುವವರ ಸಂಖ್ಯೆ ಕಡಿಮೆಯಾಗಬಹುದು. ಜೊತೆಗೆ, ಗಾಣಗಾಪುರದ ಸರ್ವೆ ಮಾಡಿಸಲಾಗುತ್ತಿದ್ದು, ಅಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ನಿರಾಶ್ರಿತರ ಪರಿಹಾರ ಕೇಂದ್ರವನ್ನೂ ತೆರೆಯಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಯಶವಂತ ವಿ. ಗುರುಕರ್ ತಿಳಿಸಿದರು.

‘ಭೂ ಸ್ವಾಧೀನ ವ್ಯಾಜ್ಯ ಸಿವಿಲ್‌ ಕೋರ್ಟ್‌ನಲ್ಲಿ ಪರಿಹರಿಸಿಕೊಳ್ಳಿ’
‘ನಾಲವಾರದ ಗ್ರಾಮದಲ್ಲಿ ಜಮೀನಿನ ಬಹು ಖರೀದಿ ಪತ್ರ, ಮಲ್ಟಿಪಲ್‌ ನಕಲಿ ಸರ್ವೆ ನಂಬರ್‌, ಒತ್ತುವರಿ ಇರುವುದು ನನ್ನ ಗಮನಕ್ಕೆ ಬಂದಿದೆ. 600 ಸರ್ವೆ ನಂಬರ್‌ಗಳು ಎರಡೆರಡು ಹೆಸರುಗಳಲ್ಲಿ ಇದ್ದವು. ಈ ಪೈಕಿ 300 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ’ ಎಂದು ಯಶವಂತ ವಿ. ಗುರುಕರ್ ತಿಳಿಸಿದರು.

ಗ್ರಾಮದ ನಿವಾಸಿ ಶರಣು ವಾರದ್ ಅವರ 20 ಗುಂಟೆ ಜಮೀನು ಒತ್ತುವರಿ ಪರಿಹಾರ ಕ್ರಮಕ್ಕೆ ಉತ್ತರಿಸಿದ ಅವರು, ‘ಗ್ರಾಮದ ಹಲವು ಜಮೀನುಗಳಿಗೆ ಪಹಣಿಗಳೇ ಇರಲಿಲ್ಲ. ಸಹಾಯಕ ಆಯುಕ್ತರು ನಾಲ್ಕು ಬಾರಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕೆಲವು ಕಡೆ ಜಮೀನು ಬಹು ಖರೀದಿ, ಒತ್ತುವರಿ, ಸ್ವಾಧೀನದಂತಹ ತೊಂದರೆ ಇರುವುದು ಕಂಡುಬಂದಿದೆ. ಸ್ವಾಧೀನ ವ್ಯಾಜ್ಯವನ್ನು ಸಂಬಂಧಪಟ್ಟವರು ಸಿವಿಲ್ ಕೋರ್ಟ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದರು.

‘ಸ್ವಾಧೀನ ವ್ಯಾಜ್ಯವನ್ನು ಅಧಿಕಾರಿಗಳು ನಿರ್ಧರಿಸಬಾರದು ಎಂಬ ಸೂಚನೆಯನ್ನು ಹೈಕೋರ್ಟ್ ಕೊಟ್ಟಿದೆ. ಹೀಗಾಗಿ, ಖರೀದಿ ಪತ್ರ, ವಾಟ್ನಿ, ಪೌತಿ ದಾಖಲೆಗಳ ಮೇಲೆ ಸಂಬಂಧಿಸಿದವರ ಹೆಸರಿಗೆ ಪಹಣಿ ಮಾಡಿಕೊಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇದೆ. ಕುಟುಂಬ ಸದಸ್ಯರ ಪೈಕಿ ಯಾರಿಗೆ ಎಷ್ಟು ಜಮೀನು ಹಂಚಿಕೆಯಾಗಬೇಕು ಎಂಬುದನ್ನು ಅಧಿಕಾರಿಗಳು ನಿರ್ಧರಿಸುವಂತಿಲ್ಲ. ತಾಲ್ಲೂಕು ಮಟ್ಟದ ಕೆಲವು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಸ್ವಾಧೀನ ವ್ಯಾಜ್ಯವನ್ನು ಸಿವಿಲ್‌ ಕೋರ್ಟ್‌ನಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಭೂ ಸ್ವಾಧೀನ ವ್ಯಾಜ್ಯಕ್ಕೆ ಸಂಬಂಧ ನ್ಯಾಯಾಲಯದಲ್ಲಿ ಆಸ್ತಿ ಒತ್ತುವರಿ ತಡೆಗೆ ಇಂಜೆಕ್ಷನ್‌ ಹಾಗೂ ಆಸ್ತಿ ನಿಮ್ಮದು ಎಂಬುದಕ್ಕೆ ಡಿಕ್ಲರೈಸೇಷನ್ ದಾವೆ ಹಾಕಬಹುದು. ಈ ಮೂಲಕ ಸ್ವಾಧೀನ ಸಮಸ್ಯೆ ಪರಿಹರಿಸಿಕೊಳ್ಳಬೇಕು’ ಎಂದರು.

‘ಆಕಾರ್ ಬಂದ್ ಪ್ರಕಾರ ಜಮೀನು ಇದ್ದವರಿಗೆ ಪಹಣಿ ಕೊಡಲಾಗುತ್ತದೆ. ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂ ಮಾಪಕರು ಜಮೀನಿಗೆ ಬಂದು ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ಮಾಡುತ್ತಾರೆ. ಬಳಿಕ ಗಡಿ ಭಾಗ ಪತ್ತೆ ಹಚ್ಚಿ, ನಿಖರವಾಗಿ ಗುರುತು ಮಾಡುತ್ತಾರೆ’ ಎಂದು ತಿಳಿಸಿದರು.

‘ಪ್ರತ್ಯೇಕ ಸ್ಮಶಾನ ಜಾಗ ಕೊಡುವಂತಿಲ್ಲ‘
‘ಜಿಲ್ಲೆಯ 879 ಗ್ರಾಮಗಳ ಪೈಕಿ 8 ಗ್ರಾಮಗಳು ಹೊರತುಪಡಿಸಿ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಜಾಗ ಗುರುತಿಸಿ ನೀಡಲಾಗಿದೆ’ ಎಂದು ಯಶವಂತ ಗುರುಕರ್ ತಿಳಿಸಿದರು.

‘ತಮ್ಮ ಸಮಾಜಕ್ಕೆ ಪ್ರತ್ಯೇಕ ಜಾಗ ನೀಡುವಂತೆ ಮನವಿ ಬರುತ್ತಿವೆ. ಹಾಗೇ ನೀಡಬಾರದು ಎಂಬ ನಿಯಮ ಇದೆ. ಪ್ರತಿ ಗ್ರಾಮಕ್ಕೆ ಎರಡು ಎಕರೆಗಿಂತ ಹೆಚ್ಚಾಗಿ ಸ್ಮಶಾನ ಭೂಮಿ ಕೊಡುವಂತಿಲ್ಲ. ಪ್ರತಿ ಸಾವಿರ ಜನಸಂಖ್ಯೆಗೆ 20 ಗುಂಟೆ ಭೂಮಿ ಹಂಚಿಕೆ ಮಾಡಲಾಗುತ್ತಿದೆ’ ಎಂದರು.

‘ಜನ ವಸತಿಯ ಸಮೀಪದಲ್ಲಿ ಶವಗಳನ್ನು ಸುಡುವಂತಿಲ್ಲ. ಚಿತಾಗಾರ, ನಿಗದಿ ಪಡಿಸಿದ ಜಾಗದಲ್ಲಿ ಮಾತ್ರವೇ ಸುಡಬೇಕು. ಈ ಬಗ್ಗೆ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಹೇಳಿದರು.

‘ಜಾತಿ ಪ್ರಮಾಣ ಪತ್ರ; ತಂದೆ ದಾಖಲೆ ಪರಿಶೀಲಿಸಿ’
‘ಅನರ್ಹರಿಗೆ ಮೀಸಲಾತಿ ಪ್ರಮಾಣ ಪತ್ರಗಳು ಕೊಡುತ್ತಿಲ್ಲ. ಗೆಜೆಟ್ ನಿಯಮದ ಪ್ರಕಾರ ವಿತರಣೆ ಮಾಡಲಾಗುತ್ತಿದೆ. ನಾಯಕ ತಳವಾರ ಹೊರತುಪಡಿಸಿ ಒಬಿಸಿಯ ತಳವಾರ ಸಮಾಜಕ್ಕೆ ಮೀಸಲಾತಿ ಪ್ರಮಾಣ ಪತ್ರ ಕೊಡುವಂತಿಲ್ಲ’ ಎಂದು ಯಶವಂತ ಗುರುಕರ್ ಹೇಳಿದರು.

‘ಅರ್ಜಿದಾರರ ತಂದೆಯ ಜಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಬೇಕು ಎಂಬ ನಿಯಮ ಇದ್ದು, ಸಂಬಂಧಿಕರ ಪಂಚನಾಮ ಸಹ ಮಾಡಬೇಕು. ಮಗನ (ಅರ್ಜಿದಾರ) ದಾಖಲೆ ಮಾತ್ರ ಪರಿಗಣಿಸಬಾರದು. ಇದನ್ನು ಎಲ್ಲಾ ಅಧಿಕಾರಿಗಳು ಅನುಸರಿಸಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT