ಶನಿವಾರ, ಜನವರಿ 28, 2023
16 °C

ಅಪಾರ ಪ್ರಮಾಣದ ಗಾಂಜಾ ವಶ: ಪ್ರಿಯಾಂಕ್ ಖರ್ಗೆ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಕಾಳಗಿಯಲ್ಲಿ ಬೆಂಗಳೂರು ಪೊಲೀಸರು ದಾಳಿ ಮಾಡಿ ಅಂದಾಜು ₹ 6 ಕೋಟಿ ಮೌಲ್ಯದ 1350 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವುದನ್ನು ನೋಡಿದರೆ ಜಿಲ್ಲೆ ಅಕ್ರಮ ಚಟುವಟಿಕೆಗಳ ತಾಣವಾದಂತಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ಅಕ್ರಮ ಚಟುವಟಿಕೆ ಇದಾಗಿದ್ದು ಬಯಲಿಗೆಳೆದ ಬೆಂಗಳೂರು ಪೊಲೀಸರು ಅಭಿನಂದನಾರ್ಹರು’ ಎಂದು ಹೇಳಿದ್ದಾರೆ.

ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾಗಿ ಹೇಳಿರುವ ಶಾಸಕ ಪ್ರಿಯಾಂಕ್, 2019ರ ನಂತರ ಅಕ್ರಮ ಜೂಜು ಅಡ್ಡೆಗಳು ಜಿಲ್ಲೆಯಾದ್ಯಂತ ತಲೆ ಎತ್ತಿದ್ದು ಜಿಲ್ಲೆಯನ್ನು ಅಕ್ರಮ ಚಟುವಟಿಕೆಗಳ ತಾಣವನ್ನಾಗಿ ಪರಿವರ್ತಿಸಿವೆ ಎಂದು ದೂರಿದ್ದಾರೆ.

ಒಡಿಶಾ ರಾಜ್ಯದಿಂದ ಸರಬರಾಜು ಮಾಡಲಾಗಿದೆ ಎನ್ನಲಾದ ಈ ಅಪಾರ ಪ್ರಮಾಣದ ಗಾಂಜಾ ಮೂರು ರಾಜ್ಯಗಳ ಚೆಕ್ ಪೋಸ್ಟ್ ದಾಟಿಕೊಂಡು ಬಂದಿದ್ದಾದರೂ ಹೇಗೆ? ಇಷ್ಟೊಂದು ಸುಲಭವಾಗಿ ಸರಬರಾಜಾಗಲು ರಾಜಕೀಯ ಕೈವಾಡ ಇರುವುದು ಸ್ಪಷ್ಟವಾಗಿದೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಪೊಲೀಸರು ದಾಳಿಯನ್ನು ಉಲ್ಲೇಖಿಸಿರುವ ಅವರು ದಾಳಿಯ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದಿರುವುದು ನೋಡಿದರೆ, ಸ್ಥಳೀಯ ಪೊಲೀಸರ ಮೇಲೆ ಆಡಳಿತ ಪಕ್ಷದ ರಾಜಕೀಯ ಒತ್ತಡ ಇತ್ತೇ ಎನ್ನುವ ಅನುಮಾನ ಮೂಡುತ್ತದೆ. ಅಥವಾ ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು