ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಬಾರದ ಪದವಿ ಫಲಿತಾಂಶ, ವಿದ್ಯಾರ್ಥಿಗಳು ಅತಂತ್ರ

ಎಲ್‌ಎಲ್‌ಬಿ ಪ್ರವೇಶ ಮುಕ್ತಾಯ; ಬಿ.ಇಡಿ ಪ್ರವೇಶದಿಂದಲೂ ವಂಚಿತರಾಗುವ ಭೀತಿ
Published : 2 ಅಕ್ಟೋಬರ್ 2024, 4:50 IST
Last Updated : 2 ಅಕ್ಟೋಬರ್ 2024, 4:50 IST
ಫಾಲೋ ಮಾಡಿ
Comments

ಕಲಬುರಗಿ: ಪದವಿ ಅಂತಿಮ ವರ್ಷದ ಪರೀಕ್ಷೆಗಳು ನಡೆದು ಒಂದೂವರೆ ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಫಲಿತಾಂಶ ಬಾರದೇ ಇರುವುದರಿಂದ ಬೇರೆ ಉನ್ನತ ಹಂತದ ಕೋರ್ಸ್‌ಗಳಿಗೆ ಹೋಗಬೇಕಿದ್ದ ವಿದ್ಯಾರ್ಥಿಗಳು ಆ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. 

ಫಲಿತಾಂಶ ವಿಳಂಬವಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಹಿಂದೆಯೂ ಅಂತಹ ಪ್ರಕರಣಗಳು ನಡೆದಿದ್ದವು. ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಆಡುವುದು ವಿಶ್ವವಿದ್ಯಾಲಯಕ್ಕೆ ಅಭ್ಯಾಸವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ವಿಳಂಬ ಖಂಡಿಸಿ ಇತ್ತೀಚೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು. ಆದರೂ, ವಿ.ವಿ.ಯ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಒಂದೆಡೆ ಫಲಿತಾಂಶ ಪ್ರಕಟವಾಗುವುದು ವಿಳಂಬವಾದರೆ ಮತ್ತೊಂದು ಕಡೆ ‘ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ’ (ಯುಯುಸಿಎಂಎಸ್‌)ಯಲ್ಲಿನ ದೋಷದಿಂದಾಗಿ ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಬಿಎ, ಬಿಎಸ್ಸಿ, ಬಿಕಾಂನಂತಹ ಪದವಿ ಕೋರ್ಸ್‌ಗಳ ಆರನೇ ಸೆಮಿಸ್ಟರ್ ಮುಕ್ತಾಯವಾದರೂ ಹಲವು ವಿದ್ಯಾರ್ಥಿಗಳಿಗೆ ಮೊದಲ ಹಾಗೂ ಎರಡನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಬಂದಿಲ್ಲ. ಇದರಿಂದಾಗಿ ಮುಂದೆ ಯಾವ ಕೋರ್ಸ್ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ ವಿದ್ಯಾರ್ಥಿಗಳು.

ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಜಾರಿಗೆ ತಂದ ಬಳಿಕ ಇಷ್ಟೆಲ್ಲ ಗೊಂದಲಗಳು ಉಂಟಾಗಿವೆ. ಈಗ ಪದವಿ ಮುಗಿಸುವವರು ಎನ್‌ಇಪಿ ಮೊದಲ ಬ್ಯಾಚಿನ ವಿದ್ಯಾರ್ಥಿಗಳು. ಪಠ್ಯಕ್ರಮ ಬದಲಾಗಿದ್ದರಿಂದ ಅಂಕಗಳಲ್ಲಿಯೂ ವ್ಯತ್ಯಾಸವಾಗಿದ್ದರಿಂದ ಅಂಕಪಟ್ಟಿ ಹೇಗಿರಬೇಕು ಎಂಬುದೇ ಇನ್ನೂ ಅಂತಿಮವಾಗಿಲ್ಲ.

‘ಬರೀ ಆನ್‌ಲೈನ್‌ನಲ್ಲಿನ ಅಂಕಗಳನ್ನು ನೋಡಿ ನಾವು ವಿದ್ಯಾರ್ಥಿಗಳಿಗೆ ಪ್ರವೇಶ ಕೊಡುತ್ತಿದ್ದೇವೆ. ಆಗಸ್ಟ್ 1ರಿಂದಲೇ ಸ್ನಾತಕೋತ್ತರ ತರಗತಿಗಳು ಶುರುವಾಗಬೇಕಿತ್ತು. ಆದರೆ, ಇದುವರೆಗೂ ಪ್ರವೇಶ ಪ್ರಕ್ರಿಯೆ ಮುಕ್ತಾಯವಾಗಿಲ್ಲ. ಡಿಸೆಂಬರ್ ವೇಳೆಗೆ ತರಗತಿಗಳು ಶುರುವಾದರೆ ಅದೇ ದೊಡ್ಡ ಸಾಧನೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗುಲಬರ್ಗಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು.

ಅಂಕಪಟ್ಟಿಗಳ ಮುದ್ರಣಕ್ಕೆ ಟೆಂಡರ್ ನೀಡಲು ಇತ್ತೀಚೆಗೆ ಮುಕ್ತಾಯವಾದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನವಾಗಿದೆ. ಇನ್ನು ಟೆಂಡರ್ ಪ್ರಕಟಣೆಯಾಗಿ, ಟೆಂಡರ್ ಅಂತಿಮಗೊಂಡು ಅಂಕಪಟ್ಟಿ ಬರಲು ವರ್ಷಗಳೇ ಬೇಕಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪರೀಕ್ಷೆ ಮುಗಿದು ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಮಾರ್ಚ್‌ನಲ್ಲಿ ನಡೆದ 5ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವೂ ಬಂದಿಲ್ಲ. ಹೀಗಾದರೆ ಮುಂದಿನ ಕೋರ್ಸ್‌ಗೆ ಹೋಗುವುದು ಹೇಗೆ?
ಮಹೇಶ್ವರಿ ಜೈನಾಪುರ ವಿದ್ಯಾರ್ಥಿನಿ ಜೇವರ್ಗಿ

‘ಸ್ಕ್ಯಾನ್ ಮಾಡಬೇಕಿರುವುದರಿಂದ ವಿಳಂಬ’

ಮೌಲ್ಯಮಾ‍ಪನ ಮಾಡಿದ ಎಲ್ಲ ಉತ್ತರ ಪತ್ರಿಕೆಗಳನ್ನು ಯುಯುಸಿಎಂಎಸ್ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಿರುವುದರಿಂದ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಿದೆ. ಈಗಾಗಲೇ ಬಿಎಸ್ಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಬಿಬಿಎ ಫಲಿತಾಂಶ ಶೀಘ್ರ ಪ್ರಕಟವಾಗಲಿದೆ ಎಂದು ಗುಲಬರ್ಗಾ ವಿ.ವಿ. ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ ತಿಳಿಸಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ರಾಜ್ಯದ ಐದು ವಿವಿಗಳ ಸರ್ಕಾರಿ ಪದವಿ ಕಾಲೇಜುಗಳಿಗೆ ಕೌಶಲ ಸಂಬಂಧಿತ ಹೊಸ ಕೋರ್ಸ್ ಅಳವಡಿಸಿದ್ದರಿಂದ ಅದರ ಮೌಲ್ಯಮಾಪನ ವಿಳಂಬವಾಗಿದೆ. ಆದಷ್ಟು ಬೇಗನೇ ಎಲ್ಲ ಪದವಿ ಫಲಿತಾಂಶ ಪ್ರಕಟಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕೈತ‍ಪ್ಪಿದ ಎಲ್‌ಎಲ್‌ಬಿ ಪ್ರವೇಶ

ಬಿಎ ಬಿಕಾಂ ಬಿಬಿಎ ಸೇರಿದಂತೆ ವಿವಿಧ ಪದವಿ ಪಾಸಾದ ವಿದ್ಯಾರ್ಥಿಗಳು ಎಲ್‌ಎಲ್‌ಬಿ ಪದವಿ ಪಡೆಯುವ ಅವಕಾಶವೂ ಕೈತಪ್ಪಿ ಹೋಗಿದೆ. ಇದೇ ಸೆ. 29ರಂದು ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆ ಮುಕ್ತಾಯವಾಗಿದೆ. ಅಲ್ಲದೇ ಪ್ರೌಢಶಾಲಾ ಶಿಕ್ಷಕರ ಅರ್ಹತೆ ಪಡೆಯಲು ಪಡೆಯಬೇಕಾದ ಬಿ.ಇಡಿ. ಕೋರ್ಸ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ ಅಕ್ಟೋಬರ್ 15ರಿಂದ ಆರಂಭವಾಗಲಿವೆ. ಅಷ್ಟರೊಳಗಾಗಿ ಫಲಿತಾಂಶ ಪ್ರಕಟಿಸದಿದ್ದರೆ ಮುಂದೇನು ಎಂಬ ಚಿಂತೆಯಲ್ಲಿ ವಿದ್ಯಾರ್ಥಿಗಳು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT