ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಗೊಂದಲದಲ್ಲಿ ಹೋಟೆಲ್ ಮಾಲೀಕರು

ಜಿಲ್ಲಾಧಿಕಾರಿ- ಪಾಲಿಕೆ ಆಯುಕ್ತರ ಮಧ್ಯೆ ಸಮನ್ವಯ ಕೊರತೆ
Last Updated 5 ಮೇ 2020, 7:53 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಗೊಂದಲಕಾರಿ ನಿರ್ಧಾರಗಳಿಂದಾಗಿ ಇಲ್ಲಿನ ಹೋಟೆಲ್ ಮಾಲೀಕರು ತೀವ್ರ ಗೊಂದಲಕ್ಕೀಡಾಗಿದ್ದಾರೆ. ಮಂಗಳವಾರ ಪಾರ್ಸಲ್ ನೀಡಲು ಸಿದ್ಧತೆ ಮಾಡಿಕೊಂಡಿದ್ದರೂ ಬಾಗಿಲು ತೆರೆಯಲು ಹಿಂದೇಟು ಹಾಕಿದರು.

ಜಿಲ್ಲೆಯನ್ನು ಕಿತ್ತಳೆ ವಲಯ (ಆರೇಂಜ್ ಝೋನ್) ಎಂದು ಪರಿಗಣಿಸಿದ್ದರಿಂದ ಲಾಕ್‌ಡೌನ್ ತುಸು ಸಡಿಲಿಕೆ ಮಾಡಲಾಗುವುದು. ಹೋಟೆಲುಗಳಿಂದ ಊಟ, ಉಪಾಹಾರ ಮುಂತಾದ ತಿನಿಸುಗಳನ್ನು ಪಾರ್ಸಲ್ ಕೊಡಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ, ರಾತ್ರಿ ನೀಡಲಾದ ಆದೇಶ ಪ್ರತಿಯಲ್ಲಿ ಹೋಟೆಲ್, ಲಾಡ್ಜ್ ತೆರೆಯಲು ಅನುಮತಿ ಇಲ್ಲ ಎಂದು ನಮೂದಿಸಿದ್ದರು. 'ಹೋಟೆಲ್ ತೆರೆದರೆ ಹೆಚ್ಚು ಜನ ಸೇರುತ್ತಾರೆ. ಹಾಗಾಗಿ, ಏನು ಇರುತ್ತದೆ, ಏನು ಇರುವುದಿಲ್ಲ ಎಂಬ ಪಟ್ಟಿಯಲ್ಲಿ ಹೋಟೆಲ್ ಸೇರಿಸಿಲ್ಲ. ಆದರೆ, ಕ್ಯಾಟ್ರಿಂಗ್ ಮಾದರಿಯಲ್ಲಿ ಪಾರ್ಸಲ್ ನೀಡಬಹುದು' ಎಂದು ಕಚೇರಿಯ ಮೂಲಗಳು ಸ್ಪಷ್ಟಪಡಿಸಿದ್ದವು.

ಇದರಿಂದ ನಗರದ ಹಲವು ದೂಡ್ಡ ಹೋಟೆಲುಗಳ ಮಾಲೀಕರು ರಾತ್ರಿಯಿಂದಲೇ ಸ್ವಚ್ಛತೆ, ಅಡುಗೆ ತಯಾರಿ ಮಾಡಿಕೊಂಡಿದ್ದರು.

ಮಂಗಳವಾರ ಬೆಳಿಗ್ಗೆ ಹೋಟೆಲ್ ತೆರೆಯದಂತೆ ಪಾಲಿಕೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಮುಚ್ಚುವಾಗ ಪಾಲಿಕೆಯಿಂದ ಲಿಖಿತ ಆದೇಶ ನೀಡಲಾಗಿತ್ತು. ತೆರೆಯುವುದಕ್ಕೂ ಲಿಖಿತ ಆದೇಶ ನೀಡಲಾಗುವುದು. ಅಲ್ಲಿಯವರೆಗೆ ಪಾರ್ಸಲ್ ಕೊಡುವುದಕ್ಕೂ ಅವಕಾಶವಿಲ್ಲ ಎಂದು ಅಧಿಕಾರಿಗಳು ತಕರಾರು ಮಾಡಿದರು.

ಮಧ್ಯಾಹ್ನ 1ರವರೆಗೆ ಕಾದರೂ ಪಾಲಿಕೆಯಿಂದ ಸ್ಪಷ್ಟ ಸೂಚನೆ ಬಾರದ ಕಾರಣ ಮತ್ತೆ ಎಲ್ಲ ಹೋಟೆಲ್ ಬಾಗಿಲು ಹಾಕಿದರು.

ಜಿಲ್ಲಾಧಿಕಾರಿ ಮಾಧ್ಯಮಗೋಷ್ಠಿಯಲ್ಲಿ ಪಾಲಿಕೆ ಆಯುಕ್ತ ಹಾಜರಿದ್ದರೂ ಏನನ್ನೂ ಮಾತನಾಡಲಿಲ್ಲ.

'ಹೋಟೆಲ್ ವ್ಯಾಪಾರಕ್ಕೆ ಜಿಲ್ಲಾಧಿಕಾರಿ ಮಾಧ್ಯಮಗಳ ಮುಂದೆ ಒಪ್ಪಿದ್ದಾರೆ. ಆದರೆ ನಮಗೆ ಇನ್ನೂ ಆದೇಶ ಕೊಟ್ಟಿಲ್ಲ. ಆದೇಶ ಬಂದ ನಂತರ ನಿಯಮಾವಳಿ ರೂಪಿಸಿ ಅವಕಾಶ ನೀಡುತ್ತೇವೆ' ಎಂದು ಪಾಲಿಕೆ ಆಯುಕ್ತ ರಹುಲ ಪಾಂಡ್ವೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

'ನಗರ ಹಾಗೂ ಜಿಲ್ಲೆಯಲ್ಲಿ 21 ಕಂಟೈನ್ಮೆಂಟ್ ಝೋನ್ ಇದ್ದು, ಅಲ್ಲಿ ಯಾವುದಕ್ಕೂ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಆದರೆ ಆ ವಲಯಗಳು ಯಾವುವು? ನಮ್ಮ ಹೋಟೆಲ್ ಅದರೊಳಗೆ ಬರತ್ತದೆಯೇ? ಎಂಬ ಬಗ್ಗೆ ಬಹಳಷ್ಟು ವ್ಯಾಪಾರಿಗಳಲ್ಲಿ ಗೊಂದಲವಿದೆ. ಹಾಗಾಗಿ ಜಿಲ್ಲೆಯ ಎಲ್ಲ ಹೋಟೆಲ್ ಉದ್ಯಮಿಗಳು ಮಂಗಳವಾರ ಚರ್ಚಿಸಿದ ಬಳಿಕ, ಇನ್ನೊಂದು ದಿನ ಸುಮ್ಮನಿರಲು ನಿರ್ಧರಿಸಿದ್ದೇವೆ' ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ನರಸಿಂಹ ಮೆಂಡನ್ ತಿಳಿಸಿದರು.

ಬಸ್ ಓಡಾಟವೂ ಗೊಂದಲ: ಜನರ ಬೇಡಿಕೆ ಆಧರಿಸಿ ಜಿಲ್ಲೆಯ ಒಳಗೇ ಶೇ 50ರಷ್ಟು ಸರ್ಕಾರಿ ಬಸ್ ಓಡಾಟ ಆರಂಭಿಸುವುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ, ಮಂಗಳವಾರ ಮಧ್ಯಾಹ್ನದವರೆಗೂ ನಗರ ಅಥವಾ ಜಿಲ್ಲೆಯ ಯಾವ ದಿಕ್ಕಿಗೂ ಒಂದೇ ಒಂದು ಬಸ್ ಓಡಲಿಲ್ಲ. ಕಾರ್ಮಿಕರಿಗಾಗಿ ಬಿಟ್ಟ ವಿಶೇಷ ಬಸ್ಸುಗಳು ಮಾತ್ರ ಸೀಮಿತ ರೂಟಿನಲ್ಲಿ ಸಂಚರಿಸಿದವು.

'ಬಸ್ ಸಂಚಾರ ಆರಭಿಸಲು ಇದುವರೆಗೆ ನಿರ್ದೆಶನ ಬಂದಿಲ್ಲ' ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT