ಕಲಬುರಗಿ: ‘ಶಕ್ತಿ’ ಯೋಜನೆ ಜಾರಿಯಿಂದಾಗಿ ಪ್ರಯಾಣಿಕರ ದಟ್ಟಣೆ ನೀಗಿಸಲು ಹೆಚ್ಚುವರಿ ಟ್ರಿಪ್ ಹೋಗಬೇಕು ಎಂಬ ಅಧಿಕಾರಿಗಳ ಸೂಚನೆಯಿಂದ ಬೇಸತ್ತ ಚಾಲಕ ಬೀರಣ್ಣ ಎಂಬುವವರು ಡಿಪೊದಲ್ಲಿ ಬಸ್‌ಗೆ ಡೀಸೆಲ್ ತುಂಬಿಸುವ ವೇಳೆ ಅದೇ ಡೀಸೆಲ್ ಮೈ ಮೇಲೆ ಸುರಿದುಕೊಂಡು ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಡಿಪೊ 2ರ ವ್ಯವಸ್ಥಾಪಕ ಮಂಜುನಾಥ ಮಾಯಣ್ಣವರ ಅವರು ತಮಗೆ ಹೆಚ್ಚುವರಿ ಟ್ರಿಪ್ ಓಡಿಸಬೇಕು ಎಂದು ಒತ್ತಡ ಹೇರಿದ್ದರು. ಟ್ರಿಪ್ ಕಡಿಮೆಯಾದರೆ ಮರುದಿನ ಡ್ಯೂಟಿ ಕೊಡುತ್ತಿರಲಿಲ್ಲ ಎಂದು ಆರೋಪಿಸಿದ ಬೀರಣ್ಣ, ಡೀಸೆಲ್ ಹಾಕುವ ಗನ್ ತೆಗೆದುಕೊಂಡು ಮೈಮೇಲೆ ಸುರಿದುಕೊಂಡರು. ಇದರಿಂದ ಡಿಪೊದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇತರೆ ಸಿಬ್ಬಂದಿ ಬೀರಣ್ಣ ಅವರಿಗೆ ತಿಳಿ ಹೇಳಿದರು.
ಅಫಜಲಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ನಿವಾಸಿಯಾದ ಬೀರಣ್ಣ ನಿತ್ಯ ಆರು ಟ್ರಿಪ್ ಡ್ಯೂಟಿ ಮಾಡುತ್ತಿದ್ದರು. ಹೆಚ್ಚುವರಿಯಾಗಿ ಒಂದು ಅಥವಾ ಎರಡು ಟ್ರಿಪ್ ಹೋಗುವಂತೆ ತಿಳಿಸಲಾಗಿತ್ತು. ಹೀಗಾಗಿ, ಕೆಲಸದ ಒತ್ತಡ ಜಾಸ್ತಿಯಾಗಿದೆ ಎಂದು ಬೇಸರಗೊಂಡ ಬೀರಣ್ಣ ಮೈಮೇಲೆ ಡೀಸೆಲ್ ಸುರಿದುಕೊಂಡರು.
ಘಟನೆ ತಿಳಿದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಪ್ಪ, ‘ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ಸಿಬ್ಬಂದಿಗೆ ಹೆಚ್ಚುವರಿ ಕಾರ್ಯಭಾರವಿದೆ. ನೇಮಕಾತಿ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಗಮಕ್ಕೆ ಸೇರ್ಪಡೆಯಾಗಲಿದ್ದಾರೆ. ಆಗ ಒತ್ತಡ ಕಡಿಮೆಯಾಗಲಿದೆ’ ಎಂದರು.