ಕಲಬುರಗಿ: ಇಲ್ಲಿನ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಚೇರಿಯ ಬೀಗ ಮುರಿದ ಕಳ್ಳರು, ಕಚೇರಿಯಲ್ಲಿನ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ.
ಭಾನುವಾರದ ರಜೆಯ ಬಳಿಕ ಸೋಮವಾರ ಬೆಳಿಗ್ಗೆ ನಿಗಮದ ಕಚೇರಿಗೆ ಬಂದು ನೋಡಿದಾಗ ಬೀಗ ಮುರಿದು, ಬಾಗಿಲು ತೆರೆದಿತ್ತು. ಒಳಗಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೇವು ಕಟಾವು ಯಂತ್ರ, ನಿರುಪಯುಕ್ತ ಯುಪಿಎಸ್ ಬ್ಯಾಟರಿ, ಮುರಿದ ಪ್ಲಾಸ್ಟಿಕ್ ಕುರ್ಚಿ ಸೇರಿ ₹ 29,300 ಮೌಲ್ಯದ ಸಾಮಗ್ರಿಗಳು ಕಳುವಾಗಿವೆ ಎಂದು ಬ್ರಹ್ಮಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಜಾಮೀನಿನ ಮೇಲೆ ಬಂದು ಜೀವಬೆದರಿಕೆ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ ಆರೋಪದಡಿ ಅತ್ಯಾಚಾರ ಪ್ರಕರಣದಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಆಪಾದಿತನ ವಿರುದ್ಧ ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವರಾಧ್ಯ ವೀರಣ್ಣ ಎಂಬಾತನ ವಿರುದ್ಧ ಸುಂದರ ನಗರದ ನಿವಾಸಿ ಬಸವರಾಜ ಗೊಬ್ಬೂರ ದೂರು ನೀಡಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ವಿಶ್ವರಾಧ್ಯ ಎಂಬಾತ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿ: ಬೈಕ್ ಮೇಲೆ ಹೋಗುತ್ತಿದ್ದವರನ್ನು ತಡೆದು ಚಾಕು ತೋರಿಸಿ ಅವರ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಾಗನಹಳ್ಳಿ ಸಮೀಪದ ರಸ್ತೆಯಲ್ಲಿ ನಡೆದಿದೆ.
ನಗರದ ನಿವಾಸಿ ಶಿವಮ್ಮ ಶಾಂತಪ್ಪ ಅವರ ಬಳಿಯಿಂದ ಬೈಕ್ ಮೇಲೆ ಬಂದ ಮೂವರು ಕಳ್ಳರು ₹ 72,500 ಮೌಲ್ಯದ ಚಿನ್ನಾಭರಣ, ₹ 16 ಸಾವಿರ ಮೌಲ್ಯದ ಮೊಬೈಲ್, ₹ 8 ಸಾವಿರ ಮೊತ್ತದ ನಗದು, ₹ 2 ಸಾವಿರ ಮೌಲ್ಯದ ಕೈಗಡಿ ಹಾಗೂ ಮಲ್ಲಿಕಾರ್ಜುನ ಅವರ ₹ 15 ಸಾವಿರ ಮೌಲ್ಯದ ಮೊಬೈಲ್ ದೋಚಿದ್ದಾರೆ ಎಂದು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಜೀವಬೆದರಿಕೆ: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜೀವಬೆದರಿಕೆ ಹಾಕಿದ ಆರೋಪದಡಿ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಸೊಹೇಲ್ ಖಾಜಾ ಪಾಶಾ, ಖಾಜಾ ಪಾಶಾ ಸಿರಾಜ್, ಸಮೀರ್ ಮತ್ತು ಅಷ್ಪಾಕ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.