ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಅನ್ನ, ಆಸರೆ, ಅರಿವಿನ ಭಾಷೆಯಾಗಲಿ’

Last Updated 10 ಮಾರ್ಚ್ 2023, 6:19 IST
ಅಕ್ಷರ ಗಾತ್ರ

ಆಳಂದ: ‘ಸಾವಿರಾರು ವರ್ಷಗಳ ಇತಿಹಾಸದ ಕನ್ನಡ ಭಾಷೆ ತನ್ನದೇ ಆದ ಹಿರಿಮೆ–ಗರಿಮೆ ಹೊಂದಿದೆ. ಇದು ಕೇವಲ ಓದಿನ ಭಾಷೆಯಾಗದೆ ಅನ್ನ, ಆಸರೆ ಮತ್ತು ಅರಿವಿನ ಭಾಷೆಯಾಗಬೇಕು’ ಎಂದು ಸಾಹಿತಿ ಕಲ್ಯಾಣರಾವ ಜಿ. ಪಾಟೀಲ ಅವರು ಸಮ್ಮೇಳನ ಅಧ್ಯಕ್ಷರ ಭಾಷಣದಲ್ಲಿ ಪ್ರತಿಪಾದಿಸಿದರು.

ಜಿಲ್ಲೆಯ ಆಳಂದ ತಾಲ್ಲೂಕಿನ ಗಡಿ ಪ್ರದೇಶ ಜಿಡಗಾ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ತಮ್ಮ ವಿಚಾರಗಳನ್ನು ಅವರು ಮಂಡಿಸಿದರು.

‘ರಾಜ್ಯ ಸರ್ಕಾರ ಕನ್ನಡದಲ್ಲಿ ಓದಿದವರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕೊಡಬೇಕು. ಔದ್ಯೋಗಿಕ, ಕೈಗಾರಿಕೆ, ತಾಂತ್ರಿಕ, ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಭಾಷೆ ದೃಢವಾದ ನೆಲೆ ದೊರಕಿಸಿಕೊಡಬೇಕು’ ಎಂದು ಸಲಹೆ ನೀಡಿದರು.

‘ಕಲಬುರಗಿಗೆ 371(ಜೆ) ವಿಶೇಷ ಸ್ಥಾನಮಾನದ ಬಲ ಇದ್ದರೂ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬರಲು ಆಗುತ್ತಿಲ್ಲ. ಇದರಿಂದ ಹೊರಬರಲು ನಮ್ಮ ಮನಸ್ಥಿತಿ ಬದಲಾಗಬೇಕು. ನಮ್ಮ ಅಸ್ಮಿತೆಗಾಗಿ ನಿರಂತರ ಹೋರಾಟ, ಸಮರ್ಪಣಾ ಮನೋಭಾವ, ಪರಿಶ್ರಮ. ಪ್ರಾಮಾಣಿಕತೆ, ಪಾರದರ್ಶಕತೆ ಅಳವಡಿಸಿಕೊಳ್ಳಬೇಕು. ಆಧುನಿಕ ಆವಿಷ್ಕಾರಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು’ ಎಂದರು.

‘ರಾಜಕಾರಣದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆದವರು ತಮ್ಮ ಮಟ್ಟದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಧ್ವನಿ ಎತ್ತಬೇಕು. ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲ ಸಮುದಾಯಗಳೊಂದಿಗೆ ಸಮಾನತೆ, ಸೌಹಾರ್ದತೆ, ಸಮನ್ವಯದಿಂದ ಬಾಳುವುದು ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ನಮ್ಮದು ಸರ್ವಧರ್ಮಗಳ ಸಮನ್ವಯದ ನೆಲ. ಧಾರ್ಮಿಕ ಸೌಹಾರ್ದತೆಯ ಪರಂಪರೆಗೆ ಧಕ್ಕೆ ಆಗದಂತೆ ಮುಂದಿನ ಪೀಳಿಗೆಗೆ ಮಾದರಿ ಆಗುವಂತೆ ಬದುಕಬೇಕು’ ಎಂದರು.

‘ಜನ ಸಮುದಾಯಕ್ಕೆ ಹಿತಕಾರಿಯಾಗುವ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸಿ, ಆರ್ಥಿಕ ಕ್ಷೇತ್ರವನ್ನು ಬಲಪಡಿಸಬೇಕು. ಇಲ್ಲಿನ ಶಿಕ್ಷಣ ಸಂಸ್ಥೆಗಳು ಸಮಗ್ರ ಗುಣಮಟ್ಟದ ವಿದ್ಯೆ ನೀಡಲು ಗಮನಹರಿಸಬೇಕು. ನೆಲದ ಫಲವತ್ತತೆಯ ಕುರುಹುಗಳಾದ ಕೆಂಪು ಬಾಳೆಹಣ್ಣು, ತೊಗರಿ, ಬಿಳಿಜೋಳ, ಸಜ್ಜೆಯಂತಹ ಬೆಳೆಗಳ ಕೃಷಿ ಬಲಪಡಿಸಬೇಕು. ಹೊಸ ತಲೆಮಾರಿನ ಸಾಹಿತಿಗಳಿಗೆ ಅವಕಾಶ ನೀಡಿ, ಸಮಕಾಲಿನ ತಲ್ಲಣಗಳಿಗೆ ಸ್ಪಂದಿಸುವ ಮಾನವೀಯತೆ ಮಿಡಿಯುವ ಸಾಹಿತ್ಯ ಹೊರಬರಬೇಕಿದೆ’ ಎಂದು ಅವರು ಆಶಿಸಿದರು.

ತಡವಾದ ಮೆರವಣಿಗೆ: ಇದಕ್ಕೂ ಮುನ್ನ ಆಯೋಜಿಸಲಾಗಿದ್ದ ಮೆರವಣಿಗೆಯು ಎರಡು ಗಂಟೆ ತಡವಾಗಿ ಶುರುವಾಯಿತು. ಬೆಳಿಗ್ಗೆ 9.30ರ ಬದಲು 11.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಶುರುವಾಯಿತು. ಇದರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಿಸಿಲಿನಲ್ಲೇ ಕಾಯಬೇಕಾಯಿತು. ಜನರಿಗಿಂತ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು ಕಂಡು ಬಂತು.

ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರು ಜಿಡಗಾ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ, ಹಾರಕೂಡ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು ಹಾಗೂ ಸಮ್ಮೇಳನಾಧ್ಯಕ್ಷ ಕಲ್ಯಾಣರಾವ ಜಿ. ಪಾಟೀಲ ಅವರಿದ್ದ ರಥದ ಮೆರವಣಿಗೆಗೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹನ, ನಾಡಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಜಾರೋಹಣ ನೆರವೇರಿತು. ವಿಜಯ ಕಲ್ಯಾಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಶಾಸಕ ಸುಭಾಷ ಗುತ್ತೇದಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಣಮಂತ ಶೇರಿ, ಖಜೂರಿಯ ಮುರುಘೇಂದ್ರ ಕೋರಣೇಶ್ವರ ಶಿವಯೋಗಿ, ಪುರಸಭೆಯ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ಧರಾಮ ಯಾದವಾಡ, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವರಾಜ ಎಸ್‌. ಅಂಡಗಿ, ಪದಾಧಿಕಾರಿಗಳು ಇದ್ದರು.

‘ಮಾಹಿತಿ, ಪ್ರಚಾರದ ಕೊರತೆ’

‘ಗಡಿ ಭಾಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗಡಿ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಿದ್ದು ಒಳ್ಳೆಯ ನಡೆ. ಆದರೆ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಜೊತೆ ಚರ್ಚಿಸಬೇಕಿತ್ತು. ಸಾಕಷ್ಟು ಪೂರ್ವಸಿದ್ಧತೆ ನಡೆಸಬೇಕಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಇದ್ಯಾವುದೂ ನಡೆಯಲಿಲ್ಲ’ ಎಂದು ಗ್ರಾಮದ ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಕನ್ನಡಪರ ಸಂಘಟನೆಗಳನ್ನು ಕನ್ನಡದ ಕೆಲಸಕ್ಕೆ ಜೊತೆ ಸೇರಿಸಿಕೊಳ್ಳಲಿಲ್ಲ. ಕಲಾವಿದರಿಗೂ ಕರೆಯಲಿಲ್ಲ. ಪ್ರಚಾರವೂ ಮಾಡಿಲ್ಲ. ಬಹುತೇಕರಿಗೆ ಜಿಡಗಾ ಗ್ರಾಮದಲ್ಲಿನ ಸಮ್ಮೇಳನದ ಬಗ್ಗೆ ಮಾಹಿತಿ ಇಲ್ಲ’ ಎಂದರು.

ಅಧ್ಯಕ್ಷರ ಪರಿಚಯವೇ ಇಲ್ಲ!
ಸಮ್ಮೇಳನಾಧ್ಯಕ್ಷ ಕಲ್ಯಾಣರಾವ ಪಾಟೀಲ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಬರೆದ ಕೃತಿಗಳ ಬಗ್ಗೆ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆ ಅಲ್ಲಿ ಸಮ್ಮೇಳನದಲ್ಲಿ ನೆರೆದಿದ್ದ ಜನರಿಗೆ ಇತ್ತು. ಆದರೆ, ಸಮ್ಮೇಳನಾಧ್ಯಕ್ಷರ ಪರಿಚಯ ಮಾಡುವ ಮತ್ತು ಮಾಹಿತಿ ನೀಡುವ ಕಾರ್ಯ ನೆರವೇರಲಿಲ್ಲ.

ಡಾ. ಚನ್ನವೀರ ಶಿವಾಚಾರ್ಯಯರು, ಪ್ರೊ. ದಯಾನಂದ ಅಗಸರ ತಮ್ಮ ಭಾಷಣದಲ್ಲಿ ಕಲ್ಯಾಣರಾವ ಪಾಟೀಲರ ಸಂಶೋಧನಾ ಬರಹ, ಸಂಪಾದಕತ್ವದ ಹಾಗೂ ಬೋಧನೆಯ ಬಗ್ಗೆ ಮಾತಾಡಿದರು.

ಜೀವನ–ಸಾಧನೆ: ಕಮಲಾಪುರ ತಾಲ್ಲೂಕಿನ ಸರಪೋಷ್ ಕಿಣಗಿ ಗ್ರಾಮದಲ್ಲಿ ಜನಿಸಿದ ಕಲ್ಯಾಣರಾವ ಪಾಟೀಲ ಅವರು ಸ್ವಗ್ರಾಮದಲ್ಲಿ ಪ್ರಾಥಮಿ ಶಿಕ್ಷಣ ಮುಗಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಶರಣಬಸವೇಶ್ವರ ವಿ.ವಿ.ಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ
ಮುಖ್ಯಸ್ಥರಾಗಿದ್ದಾರೆ.

‘ಆಯ್ದ ಹಳಗನ್ನಡ ಪಠ್ಯಗಳು’, ’ಪ್ರಾಚೀನ ಕಾವ್ಯ’, ‘ನಡುಗನ್ನಡ ಕಾವ್ಯ ಸಂಗ್ರಹ’, ‘ಶಬ್ದಮಣಿದರ್ಪಣ ಸಂಗ್ರಹ’, ‘ಸರಳ ಛಂದಸ್ಸು’, ‘ಜನಪರ ಜಂಗಮ’, ‘ಅಪ್ಪಟ್ಟ ಕನ್ನಡತಿ’, ‘ಶಾಸ್ತ್ರೀಯ ಕನ್ನಡ ಸಾಹಿತ್ಯ ಸಂಪದ’, ’ಡಾ. ಎಂ.ಎಂ.ಕಲಬುರ್ಗಿಯವರ ಶೋಧಗಳು’ ಪುಸ್ತಕ ಸೇರಿದಂತೆ ಹಲವು ಮಹನೀಯರ ಜೀವನ ಚರಿತ್ರೆ ಒಳಗೊಂಡ 54 ಕೃತಿಗಳನ್ನು ರಚಿಸಿದ್ದಾರೆ.

ಮಳಿಗೆಗಳು ಖಾಲಿ.. ಖಾಲಿ...

ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಸಮ್ಮೇಳನ ಸ್ಥಳದ ಸಮೀಪದಲ್ಲೇ ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಯಾವ ಮಳಿಗೆಗೂ ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರು ಬರಲಿಲ್ಲ. ಹೀಗಾಗಿ ಖಾಲಿ ಮಳಿಗೆಗಳನ್ನು ಶಾಸಕ ಸುಭಾಷ ಆರ್. ಗುತ್ತೇದಾರ ಅವರು ಉದ್ಘಾಟಿಸಲಿಲ್ಲ.

‘ಎರಡು ವರ್ಷಗಳಿಂದ ಸಮ್ಮೇಳನಕ್ಕೆ ಪುಸ್ತಕ ಪ್ರಕಾಶಕರನ್ನು ಆಹ್ವಾನಿಸುತ್ತಿಲ್ಲ. ಕೋವಿಡ್‌ಗೂ ಮುನ್ನ ಸೇಡಂ, ಕಲಬುರಗಿಯಲ್ಲಿ ನಡೆದ ಸಮ್ಮೇಳನದಲ್ಲಿ ದಿನಕ್ಕೆ ₹3 ರಿಂದ ₹ 4 ಸಾವಿರ ವ್ಯಾಪಾರ ಆಗುತ್ತಿತ್ತು. ನಗರದಲ್ಲಿ ಆಯೋಜಿಸಿದ್ದರೆ ದಿನಕ್ಕೆ ₹10 ರಿಂದ ₹ 15 ಸಾವಿರ ಪುಸ್ತಕ ಮಾರಾಟ ನಿರೀಕ್ಷಿಸಬಹುದು’ ಎಂದು ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನದ ಮಾಲೀಕ ಬಸವರಾಜ ಕೊನೆಕ್ ಹೇಳಿದರು.
ಯಾರು, ಏನಂದರು?

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಭಕ್ತರು ಸಾಹಿತ್ಯ ಸಮ್ಮೇಳನದಲ್ಲೂ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಪ್ರಸಿದ್ಧ ಸಾಹಿತಿಗಳಿಗೆ ತಲಾ 51 ಸಾವಿರ ನಗದು, 1 ತೊಲೆ ಬಂಗಾರ ನೀಡಲಾಗುವುದು -ಡಾ. ಮುರುಘರಾಜೇಂದ್ರ ಸ್ವಾಮೀಜಿ,

ಜಿಡಗಾ-ಮುಗಳಖೋಡ-ಕೊಟನೂರ (ಡಿ) ಮಠಗಳ ಪೀಠಾಧಿಪತಿ

ಕನ್ನಡ ಭಾಷೆಯು ಹೃದಯದ ಭಾಷೆಯಾಗಬೇಕು. ಭಾಷೆಯನ್ನು ದೇವರಂತೆ ಪೂಜಿಸಿ ಆರಾಧಿಸಬೇಕು. ಕನ್ನಡಕ್ಕೆ ಆಡಳಿತದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು

-ಡಾ. ಚನ್ನವೀರ ಶಿವಾಚಾರ್ಯರು, ಹಾರಕೂಡ ಹಿರೇಮಠ

ದಕ್ಷಿಣ ಕರ್ನಾಟಕದ ಜನಪ್ರತಿನಿಧಿಗಳ ಆಲೋಚನಾ ಕ್ರಮದಲ್ಲಿ ನಮ್ಮ ಭಾಗದ ಜನನಾಯಕರು ಮುನ್ನಡೆದಿದ್ದಾರೆಯೇ ಎಂಬುದನ್ನು ಯೋಚಿಸಬೇಕಿದೆ -ಟಿ.ಎಂ ಭಾಸ್ಕರ್, ಹಾವೇರಿಯ ಕರ್ನಾಟಕ
ಜಾನಪದ ವಿಶ್ವವಿದ್ಯಾಲಯ ಕುಲಪತಿ

ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಸಂಘಟನೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾದಾಗ ದೇಶದ ಪ್ರಗತಿ ಸಾಧ್ಯವಾಗುತ್ತದೆ

-ಪ್ರೊ. ದಯಾನಂದ ಅಗಸರ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ

ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆಯನ್ನು ಕಟ್ಟುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗ್ರಾಮಗಳಲ್ಲಿ ಆಯೋಜಿಸುತ್ತಿದೆ

-ವಿಜಯಕುಮಾರ ಪಾಟೀಲ ತೇಗಲತಿಪ್ಪಿ,
ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT