ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ. 18ರಿಂದ ಬಸವ ಕಲ್ಯಾಣದಲ್ಲಿ ಮೂರು ದಿನಗಳ ಕಲ್ಯಾಣ ಪರ್ವ: ಚನ್ನಬಸವಾನಂದ ಸ್ವಾಮೀಜಿ

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚನ್ನಬಸವಾನಂದ ಸ್ವಾಮೀಜಿ
Last Updated 16 ಅಕ್ಟೋಬರ್ 2021, 8:28 IST
ಅಕ್ಷರ ಗಾತ್ರ

ಕಲಬುರಗಿ: ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಇದೇ 18ರಿಂದ 20ರವರೆಗೆ ಮೂರು ದಿನಗಳ ಕಲ್ಯಾಣ ಪರ್ವ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಕೋವಿಡ್‌ ಸೋಂಕು ಹೆಚ್ಚಾಗಿದ್ದರಿಂದ ಕಲ್ಯಾಣ ಪರ್ವ ನಡೆದಿರಲಿಲ್ಲ. ಈ ಬಾರಿ 20ನೇ ಕಲ್ಯಾಣ ಪರ್ವವನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ. ಕಲಬುರಗಿ ಜಿಲ್ಲೆಯಿಂದ 10 ಸಾವಿರ ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದ ವಿವಿಧ ಜಿಲ್ಲೆಗಳಿಂದ ಮೂರು ದಿನಗಳ ಈ ಕಲ್ಯಾಣ ಪರ್ವಕ್ಕೆ 4 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವುದು, ಜಾತಿರಹಿತ ಸಮಾಜವನ್ನು ನಿರ್ಮಿಸಿ ಬಸವ ಧರ್ಮವನ್ನು ಸ್ಥಾಪಿಸಿದರು. ಕಲ್ಯಾಣ ಕ್ರಾಂತಿಯ ಪೂರ್ವದಲ್ಲಿ ಬಸವಕಲ್ಯಾಣದಲ್ಲಿ ಗಣಪರ್ವ ನಡೆಯುತ್ತಿತ್ತು. ಆದರೆ, ಕಾಲಕ್ರಮೇಣ ಗಣಪರ್ವ ನಿಂತು ಹೋಗಿದ್ದರಿಂದ 21ನೇ ಶತಮಾನದಲ್ಲಿ ಮಾತೆ ಮಹಾದೇವಿಯವರು 2002ರಿಂದ ಕಲ್ಯಾಣ ಪರ್ವವನ್ನು ಆರಂಭಿಸಿದ್ದರು’ ಎಂದು ಹೇಳಿದರು.

ಅ 18ರಂದು ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಧರ್ಮ ಚಿಂತನ ಗೋಷ್ಠಿಗೆ ತೆಲಂಗಾಣದ ಜಹೀರಾಬಾದ್ ಸಂಸದ ಬಿ.ಬಿ. ಪಾಟೀಲ ಚಾಲನೆ ನೀಡುವರು. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್. ಪಾಟೀಲ, ಮಾಜಿ ಸಂಸದ ಸುರೇಶಕುಮಾರ ಶೆಟಕಾರ, ತೆಲಂಗಾಣದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಶಿವರತ್ನಂ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು. ಸಂಜೆ 5ಕ್ಕೆ ರಾಷ್ಟ್ರೀಯ ಬಸವ ದಳದ ಅಧಿವೇಶನ ನಡೆಯಲಿದೆ ಎಂದು ಚನ್ನಬವಸವಾನಂದ ಸ್ವಾಮೀಜಿ ತಿಳಿಸಿದರು.

ಅ 19ರಂದು ಬೆಳಿಗ್ಗೆ 11ಕ್ಕೆ ಕಲ್ಯಾಣ ಪರ್ವದ ಉದ್ಘಾಟನೆ ಜರುಗಲಿದ್ದು, ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಉತ್ಸವವನ್ನು ಉದ್ಘಾಟಿಸುವರು. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಬಸವ ಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಂಶೆಂಪೂರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ. ಅವಿನಾಶ ಜಾಧವ್, ವಿಧಾನಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪೂರೆ, ಶಶೀಲ್ ನಮೋಶಿ, ಚಂದ್ರಶೇಖರ ಪಾಟೀಲ, ವಿಜಯ ಸಿಂಗ್, ಮಾಜಿ ಸಚಿವ ಡಾ. ಶರಣ‍ಪ್ರಕಾಶ ಪಾಟೀಲ, ಕ್ರೆಡೆಲ್ ಅಧ್ಯಕ್ಷ ಚಂದು ಬಿ. ಪಾಟೀಲ, ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಇತರರು ಭಾಗವಹಿಸುವರು ಎಂದು ಹೇಳಿದರು.

19ರಂದು ಮಧ್ಯಾಹ್ನ 3.30ಕ್ಕೆ ಮಹಿಳಾ ಗೋಷ್ಠಿ ಜರುಗಲಿದೆ. ಸಂಜೆ 6.30ಕ್ಕೆ ಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ನಿರಂತರತೆ ಹಾಗೂ ಧರ್ಮವಾರು ಜಾತಿಗಣತಿ ಜಾಗೃತಿ ಗೋಷ್ಠಿ ನಡೆಯಲಿದೆ. 20ರಂದು ಬೆಳಿಗ್ಗೆ 7.30ಕ್ಕೆ ಶೂನ್ಯ ಪೀಠದ 19ನೇ ವಾರ್ಷಿಕೋತ್ಸವ, 11.30ಕ್ಕೆ ಅಕ್ಕ ನಾಗಲಾಂಬಿಕಾ ಸಂಸ್ಮರಣೆ ನಿಮಿತ್ತ ಬಸವ ಧರ್ಮದ ವಿಜಯೋತ್ಸವ ಹಾಗೂ ಸಮಾರೋಪ ಜರುಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆರ್‌.ಜಿ. ಶೆಟಗಾರ, ಅಧ್ಯಕ್ಷ ಆರ್‌.ಜಿ. ಶೆಟಗಾರ, ಕಾರ್ಯದರ್ಶಿ ನಾಗರಾಜ ನಿಂಬರ್ಗಿ, ಸಂಘಟನಾ ಕಾರ್ಯದರ್ಶಿ ಶಾಂತಪ್ಪ ಪಾಟೀಲ, ಸಹಕಾರ್ಯದರ್ಶಿ ಸಿದ್ರಾಮಪ್ಪ ಲದ್ದೆ, ವೀರಣ್ಣ ಜೋಳದ, ವೀರಣ್ಣ ಲೋಡನ ಇದ್ದರು.

‘ಭೂಮಿ ವಶಕ್ಕೆ ಪಡೆಯಲಿ’

ಬಸವಣ್ಣನವರ ಅನುಭವ ಮಂಟಪಕ್ಕೆ ಸಂಬಂಧಿಸಿದ ಪಳಿಯುಳಿಕೆಗಳು, ಸ್ಮಾರಕಗಳು ಇರುವ ಜಾಗ ಕಾಲಾಂತರದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಪಾಲಾಗಿದೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ನಿರ್ಮಿಸಲು ಮುಂದಾಗಿರುವ ಸರ್ಕಾರ ಈ ಭೂಮಿಯನ್ನೂ ವಶಕ್ಕೆ ಪಡೆಯಬೇಕು. ಆ ವ್ಯಕ್ತಿ ಭೂಮಿ ನೀಡಲು ಸಿದ್ಧರಿದ್ದು, ಅದಕ್ಕೆ ಪರಿಹಾರ ನೀಡುವ ಮೂಲಕ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯು ಜಾಗವನ್ನು ತನ್ನ ಸುಪರ್ದಿಗೆ ಪಡೆಯಬೇಕು ಎಂದು ಚನ್ನಬಸವಾನಂದ ಸ್ವಾಮೀಜಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT