ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪುತ್ರನ ಭವಿಷ್ಯಕ್ಕಾಗಿ ಮತ್ತೆ ‘ಕೈ’ ಹಿಡಿದರೇ ಮಾಲೀಕಯ್ಯ ಗುತ್ತೇದಾರ?

Published 20 ಏಪ್ರಿಲ್ 2024, 6:29 IST
Last Updated 20 ಏಪ್ರಿಲ್ 2024, 6:29 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ವರ್ಣರಂಜಿತ ರಾಜಕಾರಣಿ, ಈಡಿಗ ಸಮುದಾಯದ ಪ್ರಭಾವಿ ನಾಯಕ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ನಿರೀಕ್ಷೆಯಂತೆ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಸೇರಿದ್ದಾರೆ. ಆ ಮೂಲಕ ಪುತ್ರ ರಿತೇಶ್ ಗುತ್ತೇದಾರ ರಾಜಕೀಯ ಜೀವನ ರೂಪಿಸಲು ಈ ನಿರ್ಧಾರ ತೆಗೆದುಕೊಂಡರೇ ಎಂಬ ಚರ್ಚೆ ಜಿಲ್ಲೆಯಾದ್ಯಂತ ನಡೆಯತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ತಮ್ಮ ಸೋಲಿಗೆ ಕಾರಣವಾಗಿದ್ದ ಸಹೋದರ ನಿತಿನ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಧೋರಣೆಯ ವಿರುದ್ಧ ಮಾಲೀಕಯ್ಯ ಅವರು ಸಿಡಿದೆದ್ದು ಶುಕ್ರವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರಿದರು. 

ಕೆಲವೇ ದಿನಗಳ ಹಿಂದೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಾಲೀಕಯ್ಯ ಗುತ್ತೇದಾರ ಅವರು, ‘2019ರಲ್ಲಿ ಹುಲಿಯನ್ನೇ (ಮಲ್ಲಿಕಾರ್ಜುನ ಖರ್ಗೆ) ಹೊಡೆದಿದ್ದೇವೆ. ಈಗ ಇಲಿ (ರಾಧಾಕೃಷ್ಣ ದೊಡ್ಡಮನಿ)ಯನ್ನು ಹೊಡೆಯುವುದು ಯಾವ ಲೆಕ್ಕ’ ಎಂದು ಅಬ್ಬರಿಸಿದ್ದರು. ಇದು ಸಾಕಷ್ಟು ಸದ್ದೂ ಮಾಡಿತ್ತು. ಆದರೆ, ಕೆಲವೇ ದಿನಗಳಲ್ಲಿ ಮಾಲೀಕಯ್ಯ ಅವರು ತಮ್ಮ ಮಾತುಗಳನ್ನು ನುಂಗಬೇಕಾದ ಪರಿಸ್ಥಿತಿ ಬಂದಿದೆ. ತಾವೇ ಮೂದಲಿಸಿದ್ದ ‘ಇಲಿ’ಯನ್ನು ಗೆಲ್ಲಿಸಲು ಅನಿವಾರ್ಯವಾಗಿ ಟೊಂಕಕಟ್ಟಿ ನಿಲ್ಲಬೇಕಿದೆ.

2019ರ ಲೋಕಸಭಾ ಚುನಾವಣೆಗೂ ಮುನ್ನ ಜಿಲ್ಲೆಯಲ್ಲಿ ಬಹುದೊಡ್ಡ ರಾಜಕೀಯ ವಿಪ್ಲವ ಸಂಭವಿಸಿತ್ತು. ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ ಜಾಧವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡು ಮುಂದಿನ ರಾಜಕೀಯ ಹಾದಿಗಾಗಿ ಅಖಾಡ ಸಜ್ಜುಗೊಳಿಸಿದ್ದರು. ಮತ್ತೊಂದೆಡೆ 17 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಮಾಲೀಕಯ್ಯ ಗುತ್ತೇದಾರ ಅವರು ದಿಢೀರ್ ಬಣ ಬದಲಿಸಿ ಬಿಜೆಪಿಗೆ ಜಿಗಿದಿದ್ದರು. ರಾಷ್ಟ್ರಮಟ್ಟದ ನಾಯಕರು ಆ ಚುನಾವಣೆಯಲ್ಲಿ ಖರ್ಗೆ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಭಾರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರಿಂದ ಹಾಗೂ ಕ್ಷೇತ್ರದಲ್ಲಿ ಹಲವು ತಂತ್ರಗಳನ್ನು ರೂಪಿಸಿದ್ದರಿಂದ ಖರ್ಗೆ ಅವರು ಪರಾಭವಗೊಂಡು ಡಾ.ಉಮೇಶ ಜಾಧವ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ಇದರಲ್ಲಿ ಮಾಲೀಕಯ್ಯ ಅವರ ಕೊಡುಗೆಯೂ ಇತ್ತು ಎಂಬುದನ್ನು ಬಿಜೆಪಿಯವರು ಒಪ್ಪುತ್ತಾರೆ.

ಅದಾದ ಬಳಿಕ 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೀಕಯ್ಯ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಅಲ್ಲದೇ, ಕೆಲ ಕಾಲ ಪಕ್ಷದ ಉಪಾಧ್ಯಕ್ಷ ಸ್ಥಾನವನ್ನೂ ನೀಡಲಾಗಿತ್ತು. ಆದರೆ, ಅಫಜಲಪುರ ಕ್ಷೇತ್ರದಲ್ಲಿ ಪಕ್ಷದ ಸೂಚನೆಯ ಹೊರತಾಗಿಯೂ ನಿತಿನ್ ಗುತ್ತೇದಾರ ಸ್ಪರ್ಧಿಸಿದ್ದರು. ನಮ್ಮ ಕುಟುಂಬವನ್ನೇ ಒಡೆದ ತಮ್ಮ ನಿತಿನ್‌ನನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವಂತಿಲ್ಲ. ಒಂದೊಮ್ಮೆ ಸೇರಿಸಿಕೊಂಡರೆ ಮರುಕ್ಷಣವೇ ನಾನು ಬಿಜೆಪಿ ಬಿಡುತ್ತೇನೆ’ ಎಂದು ಮಾಲೀಕಯ್ಯ ಅವರು ಗುಟುರು ಹಾಕಿದ್ದರು. ಆದರೆ, ಇದಾವುದನ್ನು ಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಿತಿನ್ ಗುತ್ತೇದಾರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಇದರಿಂದ ಕೆರಳಿದ ಮಾಲೀಕಯ್ಯ ಅವರು ಅದರ ಬೆನ್ನಲ್ಲಿಯೇ ಪುತ್ರ ರಿತೇಶ್ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಗೆ ಅಖಾಡ ಸಜ್ಜುಗೊಳಿಸಿದರು.

ಮಾಲೀಕಯ್ಯ ಸೇರ್ಪಡೆಯಿಂದ ಅಫಜಲಪುರ ಸೇರಿದಂತೆ ಜಿಲ್ಲೆಯ ಈಡಿಗ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯಬಹುದು ಎಂಬ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಬೆಂಗಳೂರಿನಲ್ಲಿ ಬೆಂಬಲಿಗರ ಸಮ್ಮುಖದಲ್ಲಿ ಮಾಲೀಕಯ್ಯ ಅವರು ಶುಕ್ರವಾರ ಕಾಂಗ್ರೆಸ್‌ ಸೇರಿದರು.

ಡಾ. ಉಮೇಶ ಜಾಧವ
ಡಾ. ಉಮೇಶ ಜಾಧವ
‘ರಾಧಾಕೃಷ್ಣ ಗೆಲ್ಲಿಸಲು ಪಣ’
‘ಬಿಜೆಪಿಯವರು ಇತ್ತೀಚಿನ ದಿನಗಳಲ್ಲಿ ನನ್ನ ಯಾವ ಮಾತಿಗೂ ಕಿಮ್ಮತ್ತು ಕೊಡುತ್ತಿರಲಿಲ್ಲ. ಮಣಿಕಂಠನಂತಹ ಅಪರಾಧ ಹಿನ್ನೆಲೆಯ ವ್ಯಕ್ತಿಗೆ ಟಿಕೆಟ್ ನೀಡಿದರು. ನನ್ನ ವಿರೋಧದ ಹೊರತಾಗಿಯೂ ತಮ್ಮ ನಿತಿನ್‌ನನ್ನು ಬಿಜೆಪಿಗೆ ಸೇರಿಸಿಕೊಂಡರು. ಒಂದು ವೇಳೆ ಎಂ.ವೈ. ಪಾಟೀಲ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೂ ನಾನು ಒಪ್ಪುತ್ತಿದ್ದೆ. ಆದರೆ ಕುತಂತ್ರ ಬುದ್ಧಿಯ ನಿತಿನ್ ನನ್ನ ಸಹೋದರರು ಸಹೋದರಿಯರ ತಲೆ ಕೆಡಿಸಿ ತನ್ನತ್ತ ಸೆಳೆದ. ಆತನನ್ನು ಪಕ್ಷಕ್ಕೆ ಕರೆದುಕೊಂಡಿದ್ದು ದೊಡ್ಡ ತಪ್ಪು’ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕೂತು ಮಾತನಾಡಿ ಎಲ್ಲ ಕಹಿ ಘಟನೆಗಳನ್ನು ಮರೆತಿದ್ದೇನೆ. ಈ ಬಾರಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಸುತ್ತೇವೆ. ಮರಳಿ ನನ್ನ ಪಕ್ಷಕ್ಕೆ ಬಂದಿದ್ದು ಖುಷಿಯಾಗಿದೆ’ ಎಂದರು. ‘ಯಾವ ನಿರೀಕ್ಷೆ ಇಲ್ಲದೆಯೇ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನನ್ನ ಮಗ ತಾನೇ ಜನರ ಮಧ್ಯೆ ನಿಂತು ಕೆಲಸ ಮಾಡುವ ಮೂಲಕ ಜನ ತನ್ನನ್ನು ಒಪ್ಪುವಂತೆ ಮಾಡಬೇಕು’ ಎಂದು ಹೇಳಿದರು. 

‘ಪ್ಲಸ್ ಮೈನಸ್ ಇದ್ದೇ ಇರುತ್ತದೆ’

‘ಮಾಲೀಕಯ್ಯ ಅವರು ಬಿಜೆಪಿ ಬಿಟ್ಟು ಹೋಗಿದ್ದರ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ. ನಾಯಕರೊಬ್ಬರು ಪಕ್ಷ ಬಿಟ್ಟು ಹೋದಾಗ ಒಂದಷ್ಟು ಪ್ಲಸ್ ಮೈನಸ್ ಅಂಶಗಳು ಇದ್ದೇ ಇರುತ್ತದೆ. ಆದರೆ ಅವರು ಪಕ್ಷ ಬಿಟ್ಟು ಹೋಗಿದ್ದರಿಂದ ನನ್ನ ಗೆಲುವಿನ ಓಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ’ ಸಂಸದ ಡಾ.ಉಮೇಶ ಜಾಧವ ಸ್ಪಷ್ಟಪಡಿಸಿದರು. ‘ಈಚೆಗೆ ನಡೆದ ಸಭೆಯಲ್ಲಿ ಮಾಲೀಕಯ್ಯ ಅವರು ಅಫಜಲಪುರದಲ್ಲಿ ನನ್ನ ಬೀಗರು ಅವರ ವಿರುದ್ಧ ಇದ್ದರು ಎಂದು ಟೀಕಿಸಿದ್ದಾರೆ. ಸ್ಥಳೀಯವಾಗಿ ಕೆಎಂಎಫ್‌ ಚುನಾವಣೆಯಲ್ಲಿ ಹಾಗೆ ಆಗಿರಬಹುದು. ದೊಡ್ಡ ನಾಯಕರು ಇಂತಹ ಸಣ್ಣ ಸಂಗತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT