ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣಕ್ಕೆ ಟಿಕೆಟ್ ಘೋಷಿಸದ ಕಾಂಗ್ರೆಸ್

Last Updated 25 ಮಾರ್ಚ್ 2023, 6:50 IST
ಅಕ್ಷರ ಗಾತ್ರ

ಕಲಬುರಗಿ: ತನ್ನ ಮೊದಲ ಪಟ್ಟಿಯನ್ನು ಶನಿವಾರ ಘೋಷಿಸಿರುವ ಕಾಂಗ್ರೆಸ್ ಪಕ್ಷವು ಜಿಲ್ಲೆಯ ಅಫಜಲಪುರ, ಕಲಬುರಗಿ ಗ್ರಾಮೀಣ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸದಿರುವ ಮೂಲಕ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಅಫಜಲಪುರದಲ್ಲಿ ಕಾಂಗ್ರೆಸ್ ನ ಹಾಲಿ ಶಾಸಕರಿದ್ದರೂ ಟಿಕೆಟ್ ಘೋಷಿಸದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿಯೂ ಶಾಸಕ ಎಂ.ವೈ. ಪಾಟೀಲ ಅವರಿಗೇ ಟಿಕೆಟ್ ನೀಡಲು ಹೈಕಮಾಂಡ್ ಒಲವು ತೋರಿತ್ತು. ಆದರೆ, ಅವರ ಪುತ್ರ ಅರುಣಕುಮಾರ್ ಎಂ‌. ಪಾಟೀಲ ಹಾಗೂ ಇನ್ನೋರ್ವ ಪುತ್ರ ಡಾ.ಸಂಜೀವ ಪಾಟೀಲ ಅವರ ಮಧ್ಯೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ. ಜೊತೆಗೆ ಕುರುಬ ಸಮಾಜದ ಮುಖಂಡ ಜೆ.ಎಂ. ಕೊರಬು, ರಾಜೇಂದ್ರ ಪಾಟೀಲ ರೇವೂರ, ಮತಿನ್ ಪಟೇಲ್, ಅಫ್ತಾಬ್ ಪಟೇಲ್, ಮತಿನ್ ಪಟೇಲ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಲಿಂಗಾಯತ ಸಮುದಾಯ ಹೊರತುಪಡಿಸಿ ಕ್ಷೇತ್ರದಲ್ಲಿ ಈಡಿಗರು, ಕುರುಬರು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಟಿಕೆಟ್ ಗಾಗಿ ಪೈಪೋಟಿಯೂ ಹೆಚ್ಚಾಗಿದೆ. ಹೀಗಾಗಿ ಎರಡನೇ ಹಂತದಲ್ಲಿ ಟಿಕೆಟ್ ಘೋಷಿಸಬಹುದು ಎನ್ನಲಾಗಿದೆ.

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಈಚೆಗೆ ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ರೇವು ನಾಯಕ ಬೆಳಮಗಿ ಹಾಗೂ ಮುಖಂಡ ವಿಜಯಕುಮಾರ್ ಜಿ. ರಾಮಕೃಷ್ಣ ಮಧ್ಯೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ. ಹೀಗಾಗಿ ಅಲ್ಲಿಯೂ ಟಿಕೆಟ್ ಪ್ರಕಟಿಸಿಲ್ಲ.

ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ಅವರ ಎದುರು ಕಾಂಗ್ರೆಸ್ ನಿಂದ ಸ್ಪರ್ಧಿಸಲು ಬಯಸಿರುವವರ ದೊಡ್ಡ ಪಟ್ಟಿಯೇ ಇದೆ.

ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಉದ್ಯಮಿ, ಎಚ್ ಕೆ ಇ ಸೊಸೈಟಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅವರ ಪುತ್ರ ಸಂತೋಷ ಬಿಲಗುಂದಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಮೇಯರ್ ಶರಣಕುಮಾರ ಮೋದಿ, ನೀಲಕಂಠರಾವ್ ಮೂಲಗೆ ಸ್ಪರ್ಧಿಸಲು ಬಯಸಿದ್ದಾರೆ.

ಅಲ್ಲಮಪ್ರಭು ಪಾಟೀಲ ಹಾಗೂ ಸಂತೋಷ ಬಿಲಗುಂದಿ ಮಧ್ಯೆ ನೇರ ಪೈಪೋಟಿ ಇದೆ.

ತಕ್ಷಣ ಟಿಕೆಟ್ ಘೋಷಿಸಿದರೆ ಬಂಡಾಯ ಕಾಣಿಸಿಕೊಳ್ಳಬಹುದು ಎಂಬ ಆತಂಕದಿಂದ ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ತಡವಾಗಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ‌ಮುಖಂಡರೊಬ್ಬರು ತಿಳಿಸಿದ್ದಾರೆ.

ಹೆಚ್ಚು ಪೈಪೋಟಿ ಇಲ್ಲದ ಚಿಂಚೋಳಿ ‌ಕ್ಷೇತ್ರಕ್ಕೆ ಸುಭಾಷ್ ರಾಠೋಡ ಅವರಿಗೆ ಟಿಕೆಟ್ ನೀಡಲಾಗಿದೆ.

ನಿರೀಕ್ಷೆಯಂತೆ ಚಿತ್ತಾಪುರ ‌ಕ್ಷೇತ್ರಕ್ಕೆ ಹಾಲಿ ಶಾಸಕ, ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಕಲಬುರಗಿ ಉತ್ತರ ಕ್ಷೇತ್ರಕ್ಕೆ ಹಾಲಿ ಶಾಸಕಿ ಖನೀಜ್ ಫಾತಿಮಾ, ಆಳಂದ ಕ್ಷೇತ್ರಕ್ಕೆ ಮಾಜಿ ಶಾಸಕ ಬಿ.ಆರ್. ಪಾಟೀಲ, ಸೇಡಂ ಕ್ಷೇತ್ರಕ್ಕೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ‌ಸಾಧಿಸುವ ಗುರಿ ಹೊಂದಲಾಗಿದೆ. ಅದ್ದರಿಂದ ಅಭ್ಯರ್ಥಿಗಳನ್ನು ಅಳೆದೂ ತೂಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT