ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ: ಬಜೆಟ್‌ನಲ್ಲಿ ಸಿಗಲಿದೆಯೇ ಕೈಗಾರಿಕೆಗೆ ಉತ್ತೇಜನ?

Published 13 ಫೆಬ್ರುವರಿ 2024, 6:15 IST
Last Updated 13 ಫೆಬ್ರುವರಿ 2024, 6:15 IST
ಅಕ್ಷರ ಗಾತ್ರ

ಕಲಬುರಗಿ: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಗದೀಶ ಶೆಟ್ಟರ್ ಅವರು ಕೈಗಾರಿಕಾ ಸಚಿವರಾಗಿದ್ದಾಗ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿಯನ್ನು ರೂಪಿಸಬೇಕು. ಇಲ್ಲಿ ಆರಂಭವಾಗುವ ಕೈಗಾರಿಕೆಗಳಿಗೆ ಹೆಚ್ಚಿನ ಆರ್ಥಿಕ ನೆರವು, ತೆರಿಗೆ ರಿಯಾಯಿತು, ಕಡಿಮೆ ದರದಲ್ಲಿ ಭೂಮಿ ಒದಗಿಸಬೇಕು ಎಂದು ಈ ಭಾಗದ ಉದ್ಯಮಿಗಳು ಒತ್ತಾಯಿಸಿದ್ದರು.

ಬಿಜೆಪಿ ಅಧಿಕಾರವಧಿ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಆ ಬೇಡಿಕೆಗಳಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 16ರಂದು ರಾಜ್ಯದ ಮುಂಗಡಪತ್ರವನ್ನು ಮಂಡಿಸಲು ಸಿದ್ಧರಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಪೂರಕ ಅಂಶಗಳನ್ನು ಪ್ರಕಟಿಸುತ್ತಾರೆಯೇ ಎಂದು ಈ ಭಾಗದ ಜನರು ಕಾದು ಕುಳಿತಿದ್ದಾರೆ. 

ಕಲಬುರಗಿ ನಿವಾಸಿಯಾಗಿರುವ, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಬಳಿ ಸಣ್ಣ ಕೈಗಾರಿಕೆ ಖಾತೆ ಇದೆ. ಪಕ್ಕದ ವಿಜಯಪುರ ಜಿಲ್ಲೆಯವರಾದ ಎಂ.ಬಿ. ಪಾಟೀಲ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದಾರೆ. ಹೀಗಾಗಿ, ಕಂದಾಯ ವಿಭಾಗವಾದ ಕಲಬುರಗಿಗೆ ಉದ್ಯೋಗ ಆಧಾರಿತ ಕೈಗಾರಿಕೆಗಳು ಬರಬೇಕು ಎಂಬುದು ಜಿಲ್ಲೆಯ ಉದ್ಯಮಿಗಳ ಅಪೇಕ್ಷೆ. 

ನಗರದ ಕಪನೂರು, ನಂದೂರು–ಕೆಸರಟಗಿ ಪ್ರದೇಶದಲ್ಲಿ ಕೈಗಾರಿಕೆಗಳಿವೆ. ಆದರೆ, ಅಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಕೈಗಾರಿಕೆಗಳಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದ, ಜಿಲ್ಲಾ ಉಸ್ತುವಾರಿಯನ್ನೂ ಹೊಂದಿದ್ದ ಮುರುಗೇಶ ನಿರಾಣಿ ಅವರು ಕಲಬುರಗಿಯಲ್ಲಿ ಜ್ಯುವೆಲರಿ ಪಾರ್ಕ್ ನಿರ್ಮಿಸುವುದಾಗಿ ಹೇಳಿದ್ದರು. ಜೊತೆಗೆ, ವಿಮಾನ ನಿಲ್ದಾಣದ ರಸ್ತೆಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಪೂರೈಸುವ ನಿಟ್ಟಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಘಟಕವನ್ನು ಆರಂಭಿಸುವ ಬಗ್ಗೆಯೂ ಭರವಸೆ ನೀಡಿದ್ದರು. ಇಸ್ರೇಲ್ ಮಾದರಿಯ ಕೃಷಿಯನ್ನು 1000 ಎಕರೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಇವುಗಳಲ್ಲಿ ಯಾವೊಂದು ಭರವಸೆಯೂ ಈಡೇರಿಲ್ಲ. 

ರಾಜ್ಯದಲ್ಲೇ ಅತಿ ಹೆಚ್ಚು ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗುತ್ತಿದೆ. ತೊಗರಿ ಬೇಳೆ ಸೇರಿದಂತೆ ಇತರ ಆಹಾರ ಉತ್ಪನ್ನಗಳ ಸಂಸ್ಕರಣಾ ಘಟಕವನ್ನು ಆರಂಭಿಸಬೇಕು ಎನ್ನುತ್ತಾರೆ ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ.

ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ಸೇಡಂ, ಅಫಜಲಪುರ ಭಾಗದಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಕೇಂದ್ರ ಸರ್ಕಾರ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಘೋಷಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಗತಿ ಆಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಕುರಿತು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎನ್ನುತ್ತಾರೆ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕೈಗಾರಿಕಾ ಮತ್ತು ವಾಣಿಜ್ಯ ಸಮಿತಿಯ ಜಿಲ್ಲಾ ಅಧ್ಯಕ್ಷ ಅಮರನಾಥ ಪಾಟೀಲ.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಗಮನವಿರಿಸಿಕೊಂಡು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಬೇಕು. ಪ್ರಮುಖ ಕಾಲೇಜುಗಳ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು
ರಬಿಯಾ ಇಪ್ಫತ್ ಗ್ರಂಥಪಾಲಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಬುರಗಿ
ಕಲಬುರಗಿ ನಗರದ 50 ವರ್ಷಗಳ ಮುಂದಿನ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಮೆಟ್ರೊ ರೈಲು ಆರಂಭಿಸಲು ಸರ್ವೆ ನಡೆಸಬೇಕು. ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕ ಉದ್ಯೋಗಾಧಾರಿತ ಕೈಗಾರಿಕೆ ಆರಂಭಿಸಬೇಕು
ಪ್ರೊ. ರಮೇಶ ಲಂಡನಕರ್ ಪ್ರಾಧ್ಯಾಪಕ ಗುಲಬರ್ಗಾ ವಿ.ವಿ.
ಜಿಲ್ಲೆಯಲ್ಲಿ ಕೌಶಲ ವಿಶ್ವವಿದ್ಯಾಲಯ ಆರಂಭಿಸಬೇಕು. ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಬೇಕು. ಎರಡನೇ ವರ್ತುಲ ರಸ್ತೆಗೆ ಹಣ ನಿಗದಿಪಡಿಸಬೇಕು
ಸುನೀಲ ಕುಲಕರ್ಣಿ ಅಧ್ಯಕ್ಷ ಕಲ್ಯಾಣ ಕರ್ನಾಟಕ ಗ್ರಾಹಕ ವೇದಿಕೆ
ಕಲ್ಯಾಣ ಕರ್ನಾಟಕದಲ್ಲಿ ಚಿತ್ರಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರಿಗೆ ಉತ್ತೇಜನ ನೀಡಲು ಕಲಾಗ್ಯಾಲರಿ ಆರಂಭಿಸಬೇಕು. ಎಸ್.ಎಂ. ಪಂಡಿತ್ ರಂಗಮಂದಿರವನ್ನು ಅಭಿವೃದ್ಧಿಪಡಿಸಬೇಕು
ಅಶೋಕ ನೆಲ್ಲಗಿ ಚಿತ್ರಕಲಾವಿದ ಕಲಬುರಗಿ
ಬೇಕಿದೆ ಕಲಬುರಗಿ ಸಮಗ್ರ ಅಭಿವೃದ್ಧಿ ಪ್ಯಾಕೇಜ್
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡ ಕಲಬುರಗಿ ಪ್ರಾದೇಶಿಕ ಕೇಂದ್ರವೂ ಹೌದು. ರಾಜ್ಯದ ಇತರ ಪ್ರಾದೇಶಿಕ ಕೇಂದ್ರಗಳಾದ ಮೈಸೂರು ಮಂಗಳೂರು ಬೆಳಗಾವಿಗೆ ಹೋಲಿಸಿದರೆ ತೀವ್ರ ನಿರಾಸೆ ಕಾಡುತ್ತಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನ ತಗ್ಗು ಗುಂಡಿಗಳ ರಸ್ತೆ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳು ನಗರದ ಸೌಂದರೀಕರಣದ ಬಗ್ಗೆ ವಹಿಸಿರುವ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ. ನಗರದ ಬಹುತೇಕ ಬಡಾವಣೆಗಳಿಗೆ ಪೂರೈಕೆಯಾಗುವ ಕಲುಷಿತ ನೀರು ಕಸ ವಿಲೇವಾರಿ ಘನತ್ಯಾಜ್ಯ ವಿಲೇವಾರಿಯಲ್ಲಿನ ಸಮಸ್ಯೆ ನಗರಗಳು ಬೆಳೆದರೂ ಒಳಚರಂಡಿ ಒಳರಸ್ತೆಗಳು ಸುಧಾರಿಸದಿರುವುದು ಬಡಾವಣೆಗಳ ಉದ್ಯಾನಗಳು ನಿರ್ವಹಣೆಯಿಲ್ಲದೇ ಸೊರಗಿರುವುದು ನಾಗರಿಕರಲ್ಲಿ ತೀವ್ರ ನಿರಾಸೆಯನ್ನೂ ಜುಗುಪ್ಸೆಯನ್ನೂ ಮೂಡಿಸುತ್ತದೆ. ಇನ್ನು ನಗರದ ಕೊಳಚೆಪ್ರದೇಶಗಳ ಜನರ ಗೋಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳದೇ ಇರುವುದು ಸಹ ಜಿಲ್ಲೆಯ ಮಟ್ಟಿಗೆ ಪ್ರಮುಖ ಹಿನ್ನಡೆಯಾಗಿದೆ.  ಹೀಗಾಗಿ ಕಲಬುರಗಿ ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ಒಂದು ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು ಎಂಬುದು ಜನತೆಯ ಹಂಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT