ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಮುಖ್ಯಮಂತ್ರಿ, ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ: ಬಿ. ವೈ ವಿಜಯೇಂದ್ರ

Last Updated 12 ಆಗಸ್ಟ್ 2021, 8:50 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಾನು ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನಗೆ ಸಚಿವ ಸ್ಥಾನ ಕೊಡಿಸಲು ತಂದೆಯವರಾದ ಬಿ.ಎಸ್‌. ಯಡಿಯೂರಪ್ಪ ಹೈಕಮಾಂಡ್‌ ಮೇಲೆ ಒತ್ತಡ ಹೇರಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

ನಗರದಲ್ಲಿರುವ ಪಕ್ಷದ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೇನೂ 77–78 ವರ್ಷ ವಯಸ್ಸಾಗಿಲ್ಲ. ಸದ್ಯಕ್ಕೆ 45 ವರ್ಷಗಳಾಗಿದ್ದು, ಮುಂದೆ ಪಕ್ಷದಲ್ಲಿ ಉನ್ನತ ಹುದ್ದೆಗಳು ದೊರೆಯಬಹುದು. ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ನಮ್ಮ ತಂದೆಯವರೂ ಸೈಕಲ್ ತುಳಿದು ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿ ಆಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನಗೂ ಅಂತಹ ಮಹತ್ವಾಕಾಂಕ್ಷೆಗಳು ಇಲ್ಲ’ ಎಂದರು.

‘ಪ್ರಬಲ ಖಾತೆಗಾಗಿ ಸಚಿವರು ಮುನಿಸಿಕೊಂಡಿರುವುದು ನಿಜ. ಅದನ್ನು ಕೇಂದ್ರದ ವರಿಷ್ಠರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ವಲಸೆ ಬಂದವರಿಗೆ ಪ್ರಮುಖ ಖಾತೆ ಸಿಕ್ಕಿವೆ. ಪಕ್ಷದ ಮೂಲನಿವಾಸಿಗಳಿಗೆ ಸಿಕ್ಕಿಲ್ಲ ಎಂಬ ಅಸಮಾಧಾನಗಳು ಅಲ್ಲಲ್ಲಿ ಕೇಳಿ ಬಂದಿವೆ. ಅವುಗಳ ಬಗ್ಗೆ ಪಕ್ಷದ ಹಿರಿಯ ನಾಯಕರು ಚಿಂತನೆ ನಡೆಸುತ್ತಾರೆ’ ಎಂದು ಹೇಳಿದರು.

‘ಕಲಬುರ್ಗಿ ಜಿಲ್ಲೆಯಲ್ಲಿ ಐವರು ಪಕ್ಷದ ಶಾಸಕರಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಪಕ್ಷದಲ್ಲಿ ಬೇಸರ ವ್ಯಕ್ತವಾಗಿದೆ ಎಂಬುದು ಗಮನದಲ್ಲಿದೆ. ಇನ್ನೂ ನಾಲ್ಕು ಸಚಿವ ಸ್ಥಾನಗಳು ಭರ್ತಿಯಾಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಜಿಲ್ಲೆಯ ಅಳಿಯನಾಗಿ ಇಲ್ಲಿನವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ನನ್ನ ಅಪೇಕ್ಷೆಯೂ ಆಗಿದೆ’ ಎಂದರು.

ಚುನಾವಣಾ ಆಯೋಗವು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದೆ. ಈ ಹಂತದಲ್ಲಿ ಮತ್ತೆ ಮುಂದೂಡಬೇಕು ಎಂದು ಹೇಳಲಾಗುವುದಿಲ್ಲ. ಯುದ್ಧ ಬಂದಿದೆ. ಅದಕ್ಕಾಗಿ ಸಿದ್ಧರಾಗಲೇಬೇಕು. ಕೆಲವೇ ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿಯೂ ಕಮಲ ಅರಳಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಕೃಷ್ಣ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.

ವಿಜಯೇಂದ್ರ ಸಭೆಗೆ ಶಾಸಕರು ಗೈರು: ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿರುವ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ ಅವರು ವಿಜಯೇಂದ್ರ ಸಭೆಯಿಂದ ದೂರ ಉಳಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಿಲ್ಲೆಗೆ ವಿಜಯೇಂದ್ರ ಭೇಟಿ ನೀಡಿದ ಬಹುತೇಕ ಸಂದರ್ಭಗಳಲ್ಲಿ ಇಬ್ಬರೂ ಶಾಸಕರು ಹಾಜರಾಗುತ್ತಿದ್ದರು.

ಪಕ್ಷದ ರಾಜ್ಯ ವಕ್ತಾರರೂ, ವಿಭಾಗೀಯ ಪ್ರಭಾರಿಯೂ ಆಗಿರುವ ರಾಜಕುಮಾರ ಪಾಟೀಲ ಅವರಾದರೂ ವಿಜಯೇಂದ್ರ ನಡೆಸಿದ ಸಭೆಯಲ್ಲಿ ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ‍ಪಕ್ಷದ ಕಾರ್ಯಕರ್ತರಲ್ಲಿ ಇತ್ತು. ಆದರೆ, ಅವರೂ ಭಾಗವಹಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT