ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವ ಸುನೀಲ್ ಕುಮಾರ್ ಸೂಚನೆ

Last Updated 22 ಆಗಸ್ಟ್ 2022, 10:28 IST
ಅಕ್ಷರ ಗಾತ್ರ

ಕಲಬುರಗಿ: ರಂಗ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲಿ ರಂಗಮಂದಿರಗಳು ಅವಶ್ಯಕತೆಯಿದ್ದು, ಕಲಬುರಗಿ ವಿಭಾಗದ ರಂಗಮಂದಿರ ಇಲ್ಲದ ಜಿಲ್ಲೆಗಳಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಇಲ್ಲಿನ ಜೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರಂಗಮಂದಿರ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಆರ್ಥಿಕ ನೆರವು ಪಡೆಯೋಣ ಎಂದರು.

ಕಳೆದ ರಾಜ್ಯೋತ್ಸವ ಸಂದರ್ಭದಲ್ಲಿ ಮಾತಾಡ್ ಮಾತಾಡ್ ಕನ್ನಡ ಮತ್ತು ಲಕ್ಷಕಂಠ ಗಾಯನ ಕಾರ್ಯಕ್ರಮಗಳು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈ ವರ್ಷವೂ ಆಕ್ಟೋಬರ್ ತಿಂಗಳಿಂದಲೇ ಇದೇ ಮಾದರಿಯ ಇನ್ನೂ ಹೆಚ್ಚಿನ ಜನಸಂಖ್ಯೆಯೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮಗಳ ಆಯೋಜನೆಗೆ ಚಿಂತನೆ ನಡೆದಿದೆ. ಈ ಕುರಿತಂತೆ ಜಿಲ್ಲೆಯ ಐತಿಹಾಸಿ, ಪಾರಂಪರಿಕ, ಧಾರ್ಮಿಕ ಹಾಗೂ ಪ್ರವಾಸಿ ತಾಣದಲ್ಲಿ ಕಾರ್ಯಕ್ರಮ ಆಯೋಜಿಸಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚಿಸಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕಲಾವಿದರಿಗೆ ಸರ್ಕಾರ ವಿವಿಧ ಸವಲತ್ತು ಪಡೆಯಲು ಗುರುತಿನ ಚೀಟಿ ನೀಡಲು ಉದ್ದೇಶಿಸಿದೆ. ಕೂಡಲೇ ದತ್ತಾಂಶ ಕಾರ್ಯ ಕೈಗೊಳ್ಳಬೇಕು. ಸೇವಾ ಸಿಂಧು ಮೂಲಕ ಅರ್ಜಿ ಪಡೆಯಬೇಕು. ಹೆಚ್ಚಿನ ಪ್ರಚಾರ ನೀಡುವ ಮೂಲಕ ಅರ್ಹ ಕಲಾವಿದರು ಇದರಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು. ಗಣೇಶೋತ್ಸವ ಮುಗಿದ ಕೂಡಲೇ ಜಿಲ್ಲೆಗಳಲ್ಲಿ ಕಲಾವಿದರಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ಇನ್ನು ಮುಂದೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಯನ್ನು ಪಡೆಯುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಅರ್ಹರನ್ನು ಹುಡುಕಿ ಹೆಸರು ಶಿಫಾರಸು ಮಾಡಬಹುದಾಗಿದೆ. ಶೀಘ್ರವೇ ಆಯ್ಕೆ ಸಮಿತಿ ಸಹ ರಚಿಸಲಾಗುತ್ತಿದ್ದು, ಸಮಿತಿಯು ಜಿಲ್ಲಾ ಪ್ರವಾಸ ಕೈಗೊಂಡು ಅರ್ಹ ಸಾಧಕರನ್ನು ಆಯ್ಕೆಗೆ ಪರಿಗಣಿಸಲಿದೆ ಎಂದರು.

ಕಲಬುರಗಿ ರಂಗಾಯಣದಿಂದ ವಿಭಾಗದಲ್ಲಿ ನಾಟಕೋತ್ಸವ ಕಾರ್ಯಕ್ರಮ ಆಯೋಜಿಸಬೇಕು. 5 ರಂಗಾಯಣದ ಕಲಾವಿದರನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಕಳುಹಿಸಿ ನಾಟಕೋತ್ಸವ ಆಯೋಜನೆ ಮಾಡುವುದರ ಮೂಲಕ ಪ್ರದೇಶದ ಸಂಸ್ಕೃತಿ ಬಿಂಬಿಸಬೇಕು. ರಂಗ ಚಟುವಟಿಕೆ ತೀವ್ರಗೊಳಿಸಬೇಕು ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರಿಗೆ ಸಚಿವರು ತಿಳಿಸಿದರು.

ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ:
ಪರಿಶಿಷ್ಟ ಜಾತಿ ಸಮುದಾಯದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆ, ಹಾಡು, ಲಮಾಣಿ ನೃತ್ಯ, ಡೊಳ್ಳು ಕುಣಿತ, ಕೊಳಲು, ಅವರ ತಿಂಡಿ-ತಿನುಸು, ಉಡುಗೆ-ತೊಡುಗೆ, ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪ್ರತಿ ವಿಧಾನಸಬಾ ಕ್ಷೇತ್ರದ ಎರಡು ಮೂರು ಎಸ್ಸಿ ಕಾಲೊನಿಗಳಲ್ಲಿ ತಳ ಸಮುದಾಯದ ಸಂಸ್ಕೃತಿ ಬಿಂಬಿಸುವ 'ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ' ಹೆಸರಿನಡಿ ಉತ್ಸವವನ್ನು ಆಯೋಜಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಚಿವ ವಿ.ಸುನೀಲ್ ಕುಮಾರ್ ನಿರ್ದೇಶನ ನೀಡಿದರು.

ಜಿಲ್ಲಾ ಉತ್ಸವ ಆಯೋಜಿಸಿ: ಕಲಬುರಗಿ ವಿಭಾಗದ 7 ಜಿಲ್ಲೆಗಳಲ್ಲಿ ಪ್ರತಿ ವರ್ಷ ಜಿಲ್ಲಾ ಉತ್ಸವ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿಯೇ ಉತ್ಸವ ಮಾಡಬೇಕೆಂದಿಲ್ಲ. ಶಾಸಕರು ಆರ್ಥಿಕವಾಗಿ ನೆರವು ನೀಡಲು ಮುಂದೆ ಬಂದಲ್ಲಿ ಯಾವುದೇ ತಾಲ್ಲೂಕಿನಲ್ಲಿ ಉತ್ಸವ ಆಯೋಜಿಸಬಹುದು. ಇದಕ್ಕೆ ಇಲಾಖೆಯಿಂದ ಕೋಟಿಗಟ್ಟಲೇ ಅನುದಾನ ನೀಡಲು ಸಾಧ್ಯವಾಗುವುದಿಲ್ಲ. ಬದಲಾಗಿ ಅಲ್ಪ ಪ್ರಮಾಣದ ಅನುದಾನ ನೀಡಲಾಗುವುದು. ಉಳಿದ ಅನುದಾನವನ್ನು ಸಿಎಸ್ಆರ್ ನಿಧಿ ಮತ್ತು ಪ್ರಾಯೋಜಕತ್ವದಿಂದ ಸ್ಥಳೀಯವಾಗಿ ಸಂಪನ್ಮೂಲ ಕ್ರೋಡೀಕರಿಸಬಹುದಾಗಿದೆ ಎಂದರು.

ಸಭೆಯಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪೂರೆ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಜೆಸ್ಕಾಂ ಎಂ.ಡಿ. ರಾಹುಲ್ ಪಾಂಡ್ವೆ, ಪ್ರಧಾನ ವ್ಯವಸ್ಥಾಪಕಿ ಪ್ರಮಿಳಾ ಎಂ.ಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ, ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ, ಸುಮಂಗಲಾ ನಾಯಕ್, ಕೊಟ್ರೇಶ ಮರಬನಳ್ಳಿ, ಸಿದ್ರಾಮ ಶಿಂಧೆ, ಸಿದ್ಧಲಿಂಗ ಕೆ. ರಂಗಣ್ಣನವರ, ಉತ್ತರಾದೇವಿ ಎನ್. ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT