ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಮಳೆಯ ಆರ್ಭಟ: ಮನೆಗಳಿಗೆ ನುಗ್ಗಿದ ನೀರು, ಇಬ್ಬರ ಸಾವು

Published 17 ಆಗಸ್ಟ್ 2024, 23:35 IST
Last Updated 17 ಆಗಸ್ಟ್ 2024, 23:35 IST
ಅಕ್ಷರ ಗಾತ್ರ

ಕಲಬುರಗಿ/ಹುಬ್ಬಳ್ಳಿ: ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಕೆರೆ,ಕಟ್ಟೆ, ಹಳ್ಳಗಳು ಭರ್ತಿಯಾಗುವ ಹಂತ ತಲುಪಿವೆ.

ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾರಿ ಮಳೆಯಾಯಿತು.

ಮಳೆ ನೀರಿಗೆ ನೆನೆದು ಗೋಡೆ ಕುಸಿದು ಬಿದ್ದು ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಕೊಂಡಗುಳಿಯ ಜಗದೇವಿ ಈರಣ್ಣಗೌಡ ಮಾಲಿಪಾಟೀಲ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಚೂರಿನ ದೇವದುರ್ಗ ತಾಲ್ಲೂಕಿನ ಮೂಡಲಗುಂಡದ ರೈತ ಬಸವರಾಜ (30) ಸಿಡಿಲು ಬಡಿದು ಸತ್ತಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಮೂರು ಗ್ರಾಮಗಳ ಹಳ್ಳಗಳು ಉಕ್ಕಿ ಹರಿದು ಸೇತುವೆಗಳು ಮುಳುಗಡೆಯಾದವು. ಮೇದಿನಾಪುರ ಹಾಗೂ ಕೋಠಾ–ಗುಡದನಾಳ ಗ್ರಾಮಸ್ಥರು ಸೇತುವೆಗಳ ಸಂಪರ್ಕ ಕಡಿತದಿಂದ ಪರದಾಡಿದರು.

ಯಾದಗಿರಿ ಜಿಲ್ಲೆಯ ಕಕ್ಕೇರಾ ಸಮೀಪದ ಬೂದನೂರಿನ ಹಿರೇಹಳ್ಳದ ನೀರಿನಲ್ಲಿ ಸಾಮಯ್ಯ ಅವರಿಗೆ ಸೇರಿದ 20ಕ್ಕೂ ಹೆಚ್ಚು ಕುರಿಗಳು ಕೊಚ್ಚಿಕೊಂಡು ಹೋಗಿವೆ.

ಹುಣಸಗಿಯಲ್ಲಿ ಸೇತುವೆಗಳು ಮುಳುಗಡೆಯಾಗಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬೀದರ್‌ ಜಿಲ್ಲೆಯ ಹುಲಸೂರಿನಲ್ಲಿ ಎರಡು ಗಂಟೆಗೂ ಹೆಚ್ಚು ಹೊತ್ತು ಬಿರುಸಿನ ಮಳೆಯಾಗಿದೆ. ಕಲಬುರಗಿ ನಗರವೂ ಸೇರಿ ಚಿಂಚೋಳಿ, ಕಾಳಗಿ, ಅಫಜಲಪುರದಲ್ಲಿ ಮಳೆಯಾಗಿದೆ.

ಕೊಪ್ಪಳದಲ್ಲಿ ರಭಸದ ಮಳೆ ಸುರಿದು, ರೈತಾಪಿಗಳಲ್ಲಿ ಹರ್ಷ ಮೂಡಿದೆ. ಕುಷ್ಟಗಿ, ಕುಕನೂರು ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಸುಮಾರು ಎರಡೂವರೆ ತಾಸು ಗುಡುಗು–ಸಿಡಿಲಿನ ಅಬ್ಬರದೊಂದಿಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಕುಷ್ಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಳ್ಳಕೊಳ್ಳಗಳು ನದಿಯ ಮಾದರಿಯಲ್ಲಿ ಹರಿದಿದ್ದು, ಹೊಲಗದ್ದೆಗಳು ಜಲಾವೃತಗೊಂಡಿವೆ.

ಒಂದೇ ದಿನ 10.02 ಸೆಂ.ಮೀ. ಮಳೆಯಾಗಿರುವುದು ಕುಷ್ಟಗಿಯ ಮಾಪನ ಕೇಂದ್ರದಲ್ಲಿ ದಾಖಲಾಗಿದೆ. ಕುಷ್ಟಗಿ ತಾಲ್ಲೂಕಿನ ಟೆಂಗುಂಟಿ ಬಳಿ ಹಳ್ಳದ ಪ್ರವಾಹ ಊರೊಳಗೆ ನುಗ್ಗಿ ರಾತ್ರಿವೇಳೆ ಜನರು ತೀವ್ರ ತೊಂದರೆ ಅನುಭವಿಸಿದರು. ಕಂದಕೂರು ಗ್ರಾಮದಲ್ಲಿ ಕೆರೆ ಬಿರುಕು ಬಿಟ್ಟು ಊರಿನ ಮಧ್ಯೆ ನೀರು ಪ್ರವಾಹದ ರೀತಿಯಲ್ಲಿ ಹರಿದಿದೆ. 

ಭಾರಿ ಮಳೆ: 

ವಿಜಯನಗರ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಬಿರುಸಿನ ಮಳೆಯಾಗಿದೆ. ಕೊಟ್ಟೂರಿನಲ್ಲಿ 9.2 ಸೆಂ.ಮೀ.ಮಳೆ ದಾಖಲಾಗಿದೆ. ಬಳ್ಳಾರಿ ತಾಲ್ಲೂಕಿನ ಮೋಕಾ ಹೋಬಳಿಯ ಸಿರಿವಾರದಲ್ಲಿ ಶುಕ್ರವಾರ ರಾತ್ರಿ 6.5 ಸೆಂ.ಮೀ ಮಳೆಯಾಗಿದ್ದು, ಹೊಸ ಮೋಕಾ ಪ್ರದೇಶದ ಹೊಲ, ಗದ್ದೆ, ಜನವಸತಿ ಪ್ರದೇಶ, ಸರ್ಕಾರಿ ಕಚೇರಿಗಳಿಗೆ ನೀರು ನುಗ್ಗಿತು.  ಹಗರಿ ನದಿ, ಹಳ್ಳಕೊಳ್ಳಗಳು ತುಂಬಿದ್ದರಿಂದ ಹೋಬಳಿಯ 80 ಮನೆಗಳಿಗೆ ನೀರು ನುಗ್ಗಿ, ಮನೆಗಳಿಗೆ ಹಾನಿ ಆಗಿದೆ.

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಹುನಗುಂದ, ಬಾದಾಮಿ, ಗುಳೇದಗುಡ್ಡ, ಜಮಖಂಡಿಯಲ್ಲಿ ಉತ್ತಮ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾರಿ ಸಿಡಿಲು, ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶಗಳು ಜಲಾವೃತಗೊಂಡ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಲವೆಡೆ ಶುಕ್ರವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು ಜಾಜೂರು ಗ್ರಾಮದಲ್ಲಿ ಸಿಡಿಲಿಗೆ 106 ಕುರಿಗಳು ಬಲಿಯಾಗಿವೆ.

ಆಂಜನೇಯ ಎಂಬುವವರಿಗೆ ಸೇರಿದ 90, ಓಬಣ್ಣ ಎಂಬುವವರ 16 ಕುರಿಗಳು ಮೃತಪಟ್ಟಿವೆ. ಇದರಿಂದ ಇವರಿಗೆ ₹ 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಅನುಗ್ರಹ ಯೋಜನೆಯಡಿ ಕುರಿಗಾಹಿಗಳಿಗೆ ಪರಿಹಾರ ಕೊಡಿಸಲಾಗುವುದು’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೇವಣ್ಣ ತಿಳಿಸಿದರು.

ರಾಯಚೂರಿನ ಹಟ್ಟಿ ಚಿನ್ನದಗಣಿ ಸಮೀಪದ ಕೋಠಾ ಗುಡದನಾಳ ಹಳ್ಳದ ಸೇತುವೆ ಮೇಲೆ ನೀರು ಬಂದರೂ ಜನ ಅಪಾಯ ಲೆಕ್ಕಿಸದೇ ಸಾಗಿದರು
ರಾಯಚೂರಿನ ಹಟ್ಟಿ ಚಿನ್ನದಗಣಿ ಸಮೀಪದ ಕೋಠಾ ಗುಡದನಾಳ ಹಳ್ಳದ ಸೇತುವೆ ಮೇಲೆ ನೀರು ಬಂದರೂ ಜನ ಅಪಾಯ ಲೆಕ್ಕಿಸದೇ ಸಾಗಿದರು
ಕಲಬುರಗಿ ನಗರದಲ್ಲಿ ಶನಿವಾರ ಸುರಿವ ಮಳೆಯಲ್ಲೇ ಸಾಗಿದ ವಾಹನ ಸವಾರರು 
-ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕಲಬುರಗಿ ನಗರದಲ್ಲಿ ಶನಿವಾರ ಸುರಿವ ಮಳೆಯಲ್ಲೇ ಸಾಗಿದ ವಾಹನ ಸವಾರರು  -ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT