ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ತಾಯಿ, ಮಗಳು ಸಾವು

Last Updated 11 ಜುಲೈ 2021, 17:40 IST
ಅಕ್ಷರ ಗಾತ್ರ

ಕಲಬುರ್ಗಿ/ಹುಬ್ಬಳ್ಳಿ: ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಖುದಾವಂದಪುರ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ತಾಯಿ ಭಾಗ್ಯಶ್ರೀ ಭೀಮರಾವ್‌ ಮೇತ್ರೆ (32) ಮತ್ತು ಅವರ ಮಗಳು ವೈಶಾಲಿ ಮೇತ್ರೆ (9) ಮೃತಪಟ್ಟಿದ್ದಾರೆ.

ಹೊಲದಲ್ಲಿ ಕೆಲಸ ಮುಗಿಸಿಕೊಂಡು ಅವರು ಮನೆಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಮೇಹಕರ ಠಾಣೆ ಪೊಲೀಸರು ತಿಳಿಸಿದ್ದಾರೆ. ಉಳಿದಂತೆ ರಾಜ್ಯದ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದೆ.

ವಾರಾಂತ್ಯದ ನಿಮಿತ್ತ ಹೊಸಪೇಟೆಯ ವಿಶ್ವಪ್ರಸಿದ್ಧ ಹಂಪಿಗೆ ಅಸಂಖ್ಯ ಪ್ರವಾಸಿಗರು ಬಂದಿದ್ದರು. ಮಳೆಯಲ್ಲೇ ನೆನೆದುಕೊಂಡೇ
ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಭಾನುವಾರ ಕಲಬುರ್ಗಿ ಮತ್ತು
ಬೀದರ್ ಜಿಲ್ಲೆಯ ಕೆಲ ಕಡೆ ಮಳೆಯಾಯಿತು.

ಬೆಳಗಾವಿ, ಉತ್ತರ ಕನ್ನಡ, ಹೊಸಪೇಟೆ ನಗರ, ವಿಜಯನಗರ ಜಿಲ್ಲೆಯಾದ್ಯಂತ ಭಾನುವಾರ ದಿನವಿಡೀ ಉತ್ತಮ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿಯ ಕೆಲವೆಡೆ ಮಳೆಯಾಗಿದೆ. ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ ಬಿದ್ದಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಬಳಿಕ ಮಳೆ ಮತ್ತೆ ಚುರುಕಾಗಿದ್ದು, ಕರಾವಳಿಯಾದ್ಯಂತ ದಿನವಿಡೀ ಆಗಾಗ ಜೋರಾಗಿ ಮಳೆಯಾಯಿತು. ಭಟ್ಕಳ, ಕುಮಟಾ, ಗೋಕರ್ಣ ಭಾಗದಲ್ಲಿ ರಾತ್ರಿಯಿಂದಲೇ ಮಳೆಯಾಗುತ್ತಿದೆ. ಶಿರಸಿ, ಸಿದ್ದಾಪುರ, ಜೊಯಿಡಾ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧೆಡೆ ಸಾಧಾರಣ ಮಳೆಯಾಗಿದ್ದರೆ, ಉಡುಪಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆ ಬಿರುಸುಗೊಂಡಿದೆ. ಕುಂದಾಪುರ ತಾಲ್ಲೂಕಿನ ಕೋಣಿಯಲ್ಲಿ ಅತಿ ಹೆಚ್ಚು 12.6 ಸೆಂ.ಮೀ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಆಗಾಗ ಬಿಡುವುಕೊಟ್ಟು ಬಿರುಸಿನ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಲಿಂಗನಮಕ್ಕಿಗೆ 20 ಅಡಿ ಹೆಚ್ಚು ನೀರು

ಕಾರ್ಗಲ್: ‘ಇಲ್ಲಿನ ಲಿಂಗನಮಕ್ಕಿ ಜಲಾಶಯದಲ್ಲಿ, ಕಳೆದ ಸಾಲಿಗಿಂತ ಈ ಬಾರಿ 20 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ’ ಎಂದು ಕೆಪಿಸಿ ಅಧೀಕ್ಷಕ ಎಂಜಿನಿಯರ್ ಆರ್.ಶಿವಕುಮಾರ್ ತಿಳಿಸಿದರು.

‘ಜಲಾಶಯದ ಒಟ್ಟು ಸಾಮರ್ಥ್ಯ 1,819 ಅಡಿ ಆಗಿದ್ದು, ಭಾನುವಾರ 1,784.05 ಅಡಿ ನೀರಿತ್ತು. ಕಳೆದ ಸಾಲಿನಲ್ಲಿ ಇದೇ ದಿನ 1,765 ಅಡಿ ನೀರು ಸಂಗ್ರಹವಾಗಿತ್ತು.

ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಜಲಾನಯನ ಪ್ರದೇಶದಲ್ಲಿ 107.1 ಸೆಂ.ಮೀ. ಮಳೆ ಸುರಿದಿದೆ. ಪುನರ್ವಸು ಮಳೆ ಮತ್ತೆ ಉತ್ತಮ ಆರಂಭ ಹೊಂದಿದ್ದು, ಆಶಾದಾಯಕ ಬೆಳವಣಿಗೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT