ಚಿಂಚೋಳಿ (ಕಲಬುರಗಿ ಜಿಲ್ಲೆ): ಸತತ ಮಳೆಯಿಂದಾಗಿ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ಒಳ ಹರಿವು ಹೆಚ್ಚಳವಾಗಿದ್ದು, 4 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸುತ್ತಿರುವುದು ಸೋಮವಾರವೂ ಮುಂದುವರೆದಿದೆ.
ಜಲಾಶಯದ ಗರಿಷ್ಠ ಮಟ್ಟ 491 ಮೀಟರ್ ಇದ್ದು, ಪ್ರಸ್ತುತ ನೀರಿನ ಮಟ್ಟ 490.30 ಮೀಟರ್ ಆಗಿದೆ. 3600 ಕ್ಯುಸೆಕ್ ಒಳ ಹರಿವು ಇದ್ದು, 4 ಸಾವಿರ ಕ್ಯುಸೆಕ್ ಹೊರ ಹರಿವು ಬಿಡಲಾಗುತ್ತಿದೆ ಎಂದು ಯೋಜನಾಧಿಕಾರಿ ಅಮೃತ ಪವಾರ ಮತ್ತು ವಿನಾಯಕ ಚವ್ಹಾಣ ತಿಳಿಸಿದ್ದಾರೆ.
ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಚಿಮ್ಮನಚೋಡ, ಗಾರಂಪಳ್ಳಿ, ತಾಜಲಾಪುರ ಸೇತುವೆ ಸೇರಿದಂತೆ ಹಲವು ಬಾಂದಾರು, ಸೇತುವೆಗಳು ಮುಳುಗಡೆಯಾಗಿವೆ.
ಚಂದ್ರಂಪಳ್ಳಿ ಜಲಾಶಯಕ್ಕೆ 4,288 ಕ್ಯುಸೆಕ್ ಒಳ ಹರಿವಿದ್ದು, ಸೋಮವಾರ ಹೊರ ಹರಿವು ನಿಲ್ಲಿಸಲಾಗಿದೆ. ಜಲಾಶಯದ ನೀರಿನಮಟ್ಟ 1,614.5 ಅಡಿಯಿದೆ ಎಂದು ಯೋಜನಾಧಿಕಾರಿ ಚೇತನ ಕಳಸ್ಕರ ತಿಳಿಸಿದರು.
ಬಿಡುವು ಕೊಟ್ಟ ಮಳೆ: ತಾಲ್ಲೂಕಿನಲ್ಲಿ ಭಾನುವಾರ ಇಡೀ ರಾತ್ರಿ ಜೋರು ಮಳೆ ಸುರಿದಿದ್ದು, ಸೋಮವಾರ ಬೆಳಿಗ್ಗೆಯಿಂದ ಬಿಡುವು ನೀಡಿದೆ. ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಇದರಿಂದ ಹೆಸರು, ಉದ್ದು ರಾಶಿ ಮಾಡಲು ಕೊಯ್ಲು ಮಾಡಿದ ಗಿಡಗಳನ್ನು ರಸ್ತೆಗಳ ಬದಿಯಲ್ಲಿ ಗುಡ್ಡೆ ಹಾಕಿ ಪ್ಲಾಸ್ಟಿಕ್ ಮತ್ತು ತಾಡಪತ್ರಿ ಹೊದಿಸಲಾಗಿದೆ.