ಸೋಮವಾರ, ಸೆಪ್ಟೆಂಬರ್ 27, 2021
21 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಒಪ್ಪಿಕೊಂಡ ಸಿಬ್ಬಂದಿ

ಚಿತ್ತಾಪುರ: ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ ಮಾಡಿದ್ದು ನಿಜ. ಬೇಸಿಗೆಯಲ್ಲಿ ಕೆಲವು ಮೊಟ್ಟೆಗಳು ಕೊಳೆತ ಸ್ಥಿತಿಯಲ್ಲಿ ಬಂದಿದ್ದವು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಶಿವಶರಣಪ್ಪ ನಂದಗಿರಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಮಾತನಾಡಿ ಕೊಳೆತ ಮೊಟ್ಟೆ ವಿತರಣೆ ಕುರಿತು ದೂರುಗಳು ಬಂದಿವೆ. ಏಕೆ ಹೀಗಾಗಿದೆ ಎಂದು ಪ್ರಶ್ನಿಸಿದರು.

‘ಕೊಳೆತ ಮೊಟ್ಟೆ ಕೊಟ್ಟಿದ್ದು ನಿಜ. ಬೇಸಿಗೆಯಲ್ಲಿ ಸಮಸ್ಯೆ ಆಗಿತ್ತು. ನಂತರ ಆ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದು ಸಿಡಿಪಿಒ ಕಚೇರಿ ಸಿಬ್ಬಂದಿ ಹೇಳಿದರು. ಮಳೆಗಾಲವಾದ್ದರಿಂದ ಕುಡಿಯುವ ನೀರು ಪೂರೈಕೆ ಕುರಿತು ಎಚ್ಚರಿಕೆ ವಹಿಸಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಪಟ್ಟಣದ ಚರಂಡಿಗಳನ್ನು ಸ್ವಚ್ಛ ಮಾಡಿಸಬೇಕು. ತ್ಯಾಜ್ಯವನ್ನು ಸ್ಥಳದಲ್ಲಿಯೇ ಬಿಡದೆ ಬೇಗ ವಿಲೇವಾರಿ ಮಾಡಬೇಕು. ಪುರಸಭೆಯ ಪ್ರತಿ ವಾರ್ಡ್‌ನ ಕೊಳಚೆ ಪ್ರದೇಶದಲ್ಲಿ ಕಡ್ಡಾಯವಾಗಿ ಫಾಗಿಂಗ್ ಮಾಡಬೇಕು ಎಂದು ಆಡಳಿತಾಧಿಕಾರಿ ನಂದಗಿರಿ ಅವರು ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಅವರಿಗೆ ತಾಕೀತು ಮಾಡಿದರು.

ತಾಲ್ಲೂಕಿನ ಎಲ್ಲಾ ವಸತಿ ನಿಲಯಗಳಲ್ಲಿ ಕೊರೊನಾ ನಿಯಮ ಪಾಲನೆ ಕಡ್ಡಾಯ. ವಸತಿ ನಿಲಯಕ್ಕೆ ಬರುವ ವಿದ್ಯಾರ್ಥಿಗಳು ನೆಗೆಟಿವ್ ವರದಿ ತರಬೇಕು. ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು. ಬಯೊಮೆಟ್ರಿಕ್ ಹಾಜರಾತಿ ಕಡ್ಡಾಯ. ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ವಿಶೇಷ ತರಗತಿ, ತರಬೇತಿ ವ್ಯವಸ್ಥೆ ಮಾಡಬೇಕು ಎಂದು ಅವರು ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಗಳಲ್ಲಿ ಮೂಲ ಸೌಲಭ್ಯ ವ್ಯವಸ್ಥೆ ಹಾಗೂ ಕೊರತೆ ಕುರಿತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ಅವರು ಮುತುವರ್ಜಿ ವಹಿಸಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಶಾಲಾ ಆವರಣ, ಪರಿಸರದಲ್ಲಿ ಸಸಿ ನೆಡುವ ಮೂಲಕ ಗಿಡ–ಮರ ಮಾಡಬೇಕು ಎಂದು ಅವರು ಹೇಳಿದರು.

ಚಿತ್ತಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇರುವ ಹಾಗೂ ಸ್ವಂತ ಕಟ್ಟಡ ಇಲ್ಲದಿರುವ ಕುರಿತು ಸಮಗ್ರ ಮಾಹಿತಿ ನೀಡಬೇಕು. ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಜಾಗದ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಂದಗಿರಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಸೂಚಿಸಿದರು. ಯೋಜನಾಧಿಕಾರಿ ಮುಬಾಶಿರ್ ಅಲಿ, ಅಧಿಕಾರಿಗಳಾದ ಡಾ.ಅಮರದೀಪ ಪವಾರ್, ಡಾ.ಬಸಲಿಂಗಪ್ಪ ಡಿಗ್ಗಿ, ಶ್ರೀಧರ್, ಪ್ರಕಾಶ ನಾಯಕೋಡಿ, ಗಂಗಾಧರ, ಸಿದ್ದವೀರಯ್ಯ ರುದ್ನೂರ, ಸಂತೋಷಕುಮಾರ, ಗುರುಪಾದ ಹಾಗೂ ವ್ಯವಸ್ಥಾಪಕ ಅಮೃತ ಕ್ಷೀರಸಾಗರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.