ಮಂಗಳವಾರ, ಜನವರಿ 19, 2021
21 °C
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೆಡಿಪಿ ಸಭೆ

ತಪ್ಪು ಮಾಹಿತಿ ನೀಡಿದವರ ಬೆವರಿಳಿಸಿದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿ.ವಿ. ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ನಡೆಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಬೆವರಿಳಿಸಿದರು.

ತಮ್ಮ ಎಂದಿನ ಶೈಲಿಯಲ್ಲಿ ಪ್ರತಿಯೊಂದು ಇಲಾಖೆಗಳ ಪ್ರಗತಿ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ಕಾರಜೋಳ ಸೂಕ್ತ ಸಿದ್ಧತೆ ಮಾಡಿಕೊಳ್ಳದೇ ಬಂದ ಹಾಗೂ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶರಣಪ್ಪ ಅವರು ಗೊಬ್ಬೂರ (ಬಿ)–ಭೈರಾಮಡಗಿ ಗ್ರಾಮದ ಮಧ್ಯದ ರಸ್ತೆಯನ್ನು ಒಂದು ಬಾರಿ ಪಿಆರ್‌ಇ ಹಾಗೂ ಮತ್ತೊಂದು ಬಾರಿ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಣೆ ಮಾಡಲಾಗಿದೆ ಎಂದರು. ಇದಕ್ಕೆ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ ಕಾರಜೋಳ, ‘ಒಂದು ರಸ್ತೆಯನ್ನು ಎರಡು ಇಲಾಖೆಗಳು ಏಕಕಾಲಕ್ಕೆ ನಿರ್ವಹಣೆ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕೆಲ ತಿಂಗಳ ಹಿಂದೆ 28 ಸಾವಿರ ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದ್ದೇನೆ. ಅದಿನ್ನೂ ಕಾರ್ಯರೂಪಕ್ಕೆ ಬರುವ ಹಂತದಲ್ಲಿದೆ. ಅಷ್ಟರಲ್ಲೇ ಈ ರಸ್ತೆ ಲೋಕೋಪಯೋಗಿ ಇಲಾಖೆಯ ನಿರ್ವಹಣೆಗೆ ಒಳಪಟ್ಟಿದ್ದು ಹೇಗೆ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಶರಣಪ್ಪ ಅವರ ಉತ್ತರದಿಂದ ಬೇಸರಗೊಂಡ ಉಪಮುಖ್ಯಮಂತ್ರಿ, ‘ಶರಣಪ್ಪ ಅವರ ಅಮಾನತಿಗೆ ಶಿಫಾರಸು ಮಾಡಿ’ ಎಂದು  ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ನಿರ್ದೇಶನ ನೀಡಿದರು.

ಸಣ್ಣ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಂಡ ಎಸ್‌ಸಿಪಿ–ಟಿಎಸ್‌ಪಿ ಯೋಜನೆಗಳನ್ನು ಸಕಾಲಕ್ಕೆ ಪೂರ್ಣಗೊಳಿಸಲು ವಿಫಲರಾದ ಹಾಗೂ ಎಲ್ಲ ಕಾಮಗಾರಿಗಳನ್ನು 2019–20ರಲ್ಲೇ ಆರಂಭವಾಗಿವೆ ಎಂಬ ಅರ್ಥ ಬರುವಂತೆ ತಪ್ಪು ವರದಿ ನೀಡಿದ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಾಶಿನಾಥ ಅಂಬಲಗೆ ಅವರನ್ನೂ ತರಾಟೆಗೆ ತೆಗೆದುಕೊಂಡ ಕಾರಜೋಳ, ‘ಪರಿಶಿಷ್ಟರ ಬಡಾವಣೆಗಳಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು ಆಯಾ ವರ್ಷವೇ ಮುಗಿಯಬೇಕು ಎಂಬ ನಿಯಮವಿದೆ. ಇಲ್ಲದಿದ್ದರೆ 2013ರಲ್ಲಿ ಜಾರಿಯಾದ ಕಾಯ್ದೆ ಪ್ರಕಾರ ನಿಮ್ಮನ್ನು ಜೈಲಿಗೆ ಕಳಿಸಬಹುದಾಗಿದೆ. ಜೈಲಿಗೆ ಕಳಿಸಲು ಶಿಫಾರಸು ಮಾಡಬೇಕೇ’ ಎಂದು ಗುಡುಗಿದರು.

ಮೂರು ವರ್ಷಗಳ ಹಿಂದೆ ಕೈಗೆತ್ತಿಕೊಂಡ ಕಾಮಗಾರಿಗಳು ಇನ್ನೂ ಮುಕ್ತಾಯವಾಗದಿರುವ ಬಗ್ಗೆ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಗಮನ ಸೆಳೆದರು.

ಶುದ್ಧ ಕುಡಿಯುವ ನೀರಿನ ಘಟಕಗಳು, ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಸುಸ್ಥಿತಿಯಲ್ಲಿರುವ ಕೈಪಂಪ್‌ಗಳ ಮಾಹಿತಿ ನೀಡಲು ವಿಫಲರಾದ ಗ್ರಾಮೀಣ ಕುಡಿಯುವ ನೀರು ಯೋಜನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಜೀಜುದ್ದೀನ್ ಅವರನ್ನೂ ತರಾಟೆಗೆ ತೆಗೆದುಕೊಂಡರು.

‘ಕೆಲಸವನ್ನೇ ಮಾಡದ, ಸರಿಯಾಗಿ ಸಭೆಗಳನ್ನೂ ನಡೆಸದ ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡು ಹೇಗೆ ಕೆಲಸ ಮಾಡಿಸುತ್ತೀರಿ’ ಎಂದು ಸಿಇಒ ಡಾ. ಪಿ. ರಾಜಾ ಅವರನ್ನು ಪ್ರಶ್ನಿಸಿದರು. ಆಗಾಗ ಸಭೆಗಳನ್ನು ನಡೆಸಿ ಕೆಲಸ ಮಾಡುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸಿ ಎಂದು ಸೂಚನೆ ನೀಡಿದರು.

ಗೇಟು ತೆಗೆಯದ್ದಕ್ಕೆ ತನಿಖೆಗೆ ಸೂಚನೆ: ಸೊನ್ನ ಭೀಮಾ ಬ್ಯಾರೇಜಿಗೆ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಹರಿದು ಬಂದ ನೀರನ್ನು ಹೊರಕ್ಕೆ ಬಿಡುವ ನಿಟ್ಟಿನಲ್ಲಿ ಸಕಾಲಕ್ಕೆ ಗೇಟು ತೆರೆಯದಿರುವ ಕುರಿತು ಬಂದ ದೂರುಗಳನ್ನು ಪ್ರಸ್ತಾಪಿಸಿದ ಕಾರಜೋಳ ಅವರು, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

3.16 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಬ್ಯಾರೇಜಿಗೆ 29 ಗೇಟುಗಳಿದ್ದು, ಆ ಪೈಕಿ 26 ಗೇಟುಗಳನ್ನು ತೆರೆಯಲಾಗಿತ್ತು. ಉಳಿದವು ತೆಗೆದಿರಲಿಲ್ಲ. ಹೀಗಾಗಿ ಪ್ರವಾಹವುಂಟಾಯಿತು ಎಂದು ನದಿಪಾತ್ರದ ಗ್ರಾಮಸ್ಥರು ಆರೋಪಿಸಿದ್ದರು. ಸೂಕ್ತ ನಿರ್ವಹಣೆ ಮಾಡದ್ದರಿಂದ ಗೇಟು ತೆಗೆಯಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸೊನ್ನ ಭೀಮಾ ಬ್ಯಾರೇಜಿನ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಕಲಾಲ, ನೀರಿನ ಒಳ  ಹರಿವು  ನೋಡಿಕೊಂಡು ಗೇಟುಗಳನ್ನು ಸಕಾಲಕ್ಕೆ ತೆರೆದಿದ್ದೇವೆ. ಆದರೆ, ಬ್ಯಾರೇಜಿನಿಂದ ಅರ್ಧ ಕಿ.ಮೀ. ದೂರದಲ್ಲಿರುವ ದೇವಣಗಾಂವ ಸೇತುವೆಯಿಂದ ನೀರು ಹೊರಹೋಗಲು ಸಾಕಷ್ಟು ಸಮಯ ತೆಗೆದುಕೊಂಡಿತು ಎಂದು ಸಮಜಾಯಿಷಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಪಾಲಿಕೆ ಕಮಿಷನರ್ ಸ್ನೇಹಲ್ ಲೋಖಂಡೆ ವೇದಿಕೆಯಲ್ಲಿದ್ದರು.

‘7 ಸಾವಿರ ಪಡಿತರ ಚೀಟಿ ಏಕೆ ಕೊಟ್ಟಿಲ್ಲ?’

2020ರ ಏಪ್ರಿಲ್‌ನಿಂದ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ 7,318 ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಿಸದಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಗೋವಿಂದ ಕಾರಜೋಳ ಅವರು ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಇದ್ದುದರಿಂದ ಪರಿಶೀಲನೆ ನಡೆದಿಲ್ಲ. ಒಂದು ತಿಂಗಳೊಳಗಾಗಿ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ಇಲಾಖೆ ಉಪನಿರ್ದೇಶಕ ದಯಾನಂದ ಪಾಟೀಲ ಹೇಳಿದರು.

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಾರ್ಡ್‌ ಇಲ್ಲದಿದ್ದರೂ ದವಸ ಧಾನ್ಯಗಳನ್ನು ವಿತರಿಸಲಾಗಿದೆ ಎಂದರು.

‘ದವಸ ಧಾನ್ಯ ವಿತರಿಸಲಷ್ಟೇ ಈ ಕಾರ್ಡ್‌ ಬಳಕೆಯಾಗುವುದಿಲ್ಲ. ಇಲ್ಲಿಂದ ಗುಳೆ ಹೋಗುವವರು ಜಾಸ್ತಿ ಇದ್ದು, ಬೇರೆ ರಾಜ್ಯಕ್ಕೆ ತೆರಳಿದಾಗ ಈ ಕಾರ್ಡ್‌ ತೋರಿಸಿದರೆ ಅಲ್ಲಿಯೂ ಪಡಿತರ ಸಿಗುತ್ತದೆ. ಹಾಗಾಗಿ ತಕ್ಷಣ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಿ’ ಎಂದು ಕಾರಜೋಳ ಸೂಚನೆ ನೀಡಿದರು.

‘ವಿದ್ಯುತ್ ಗ್ರಿಡ್: ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ’

ಕಲಬುರ್ಗಿ ತಾಲ್ಲೂಕಿನ ಫಿರೋಜಾಬಾದ್ ಬಳಿ 50 ಎಕರೆ ಪ್ರದೇಶದಲ್ಲಿ 400 ಕೆ.ವಿ. ವಿದ್ಯುತ್ ಸ್ಟೇಶನ್ ಆರಂಭಿಸಲು ಟೆಂಡರ್ ಕರೆಯಲಾಗಿದೆ ಎಂದು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದರು.

50 ಎಕರೆಯಲ್ಲಿ 400 ಕೆ.ವಿ. ಸ್ಟೇಶನ್ ಅಳವಡಿಕೆ ಅಸಾಧ್ಯ. ಅದಕ್ಕೆ ಕನಿಷ್ಠ 100 ಎಕರೆ ಬೇಕು. ಈ ಬಗ್ಗೆ ಕೇಂದ್ರ ಇಂಧನ ಸಚಿವಾಲಯದ ‘ಗ್ರೀನ್ ಎನರ್ಜಿ ಕಾರಿಡಾರ್‌’ ಯೋಜನೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ. ಅವರು ₹ 800 ಕೋಟಿ ಬಿಡುಗಡೆ ಮಾಡುತ್ತಾರೆ. ಪ್ರಸ್ತಾವದ ಒಂದು ಪ್ರತಿಯನ್ನು ಸಂಸದ ಡಾ.ಉಮೇಶ ಜಾಧವ್ ಹಾಗೂ ನನಗೆ ಕೊಡಿ. ರಾಜ್ಯ ಸರ್ಕಾರ ಭೂಮಿ ನೀಡಲು ಒಪ್ಪಿಗೆ ನೀಡಿದ ತಕ್ಷಣ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಕೇಂದ್ರದ ಈ ಯೋಜನೆ ಇರುವಾಗ ಅದನ್ನೇ ಬಳಸಿಕೊಳ್ಳೋಣ ಎಂದರು.

ಕಟ್ಟಡಗಳ ಉದ್ಘಾಟನೆಗೆ ಸಿ.ಎಂ. ಜಿಲ್ಲೆಗೆ

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನ, ನ್ಯೂ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಸೇರಿದಂತೆ ಪೂರ್ಣಗೊಂಡ ಕಟ್ಟಡಗಳ ಮಾಹಿತಿಯನ್ನು ಸಂಗ್ರಹಿಸಿ ಕಳಿಸಿಕೊಡಿ. ಅವುಗಳನ್ನು ಉದ್ಘಾಟಿಸಲು ಮುಖ್ಯಮಂತ್ರಿ ಅವರ ದಿನಾಂಕ ಪಡೆದುಕೊಳ್ಳುತ್ತೇನೆ ಎಂದು ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಸೂಚನೆ ನೀಡಿದರು.

ಇದರಲ್ಲಿ ನ್ಯಾಯಾಂಗಕ್ಕೆ ಸೇರಿದ ಕಟ್ಟಡಗಳನ್ನು ಸೇರಿಸಬೇಡಿ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ‘ದಯವಿಟ್ಟು ನ್ಯಾಯಾಂಗದ ಕಟ್ಟಡಗಳನ್ನೂ ಸೇರಿಸಿಕೊಳ್ಳಿ. ಸರ್ಕಾರದ ಅನುದಾನದಿಂದಲೇ ನ್ಯಾಯಾಲಯ ಕಟ್ಟಡಗಳನ್ನು ಕಟ್ಟಿಸಿಕೊಡುವಾಗ ಜನಪ್ರತಿನಿಧಿಗಳನ್ನು ಅವರು ಕರೆಯುವುದೇ ಇಲ್ಲ. ಎಲ್ಲ ಕಡೆ ಶಿಷ್ಟಾಚಾರ ಪಾಲಿಸುವಾಗ ನ್ಯಾಯಾಲಯಕ್ಕೆ ಸಂಬಂಧಪಟ್ಟವರು ಏಕೆ ಪಾಲಿಸುವುದಿಲ್ಲ’ ಎಂದರು.

ಇದಕ್ಕೆ ದನಿಗೂಡಿಸಿದ ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರೆ, ‘ನಾವೇ (ಸರ್ಕಾರ) ನೀರು, ಕಟ್ಟಡ ಎಲ್ಲವನ್ನೂ ಕಲ್ಪಿಸಿಕೊಡುವಾಗ ಅದರ ಉದ್ಘಾಟನೆಗೆ ನಮ್ಮನ್ನೇಕೆ ಕರೆಯುವುದಿಲ್ಲ’ ಎಂದು ಪ್ರಶ್ನಿಸಿದರು.

ಈ ವಿಚಾರವನ್ನು ಹೆಚ್ಚು ಬೆಳೆಸಲು ಮುಂದಾಗದ ಕಾರಜೋಳ, ‘ನ್ಯಾಯಾಧೀಶರ ಸಮಯ, ದಿನಾಂಕ, ನಮ್ಮ ಸಮಯಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ, ನ್ಯಾಯಾಂಗದ ಕಟ್ಟಡ ಸೇರಿಸಬೇಡಿ ಎಂದೆ. ಜನಪ್ರತಿನಿಧಿಗಳನ್ನು ಉದ್ಘಾಟನೆಗೆ ಕರೆಯುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವೆ’ ಎಂದರು.

ಒಗ್ಗಟ್ಟು ಪ್ರದರ್ಶಿಸಿದ ಶಾಸಕರು

ಜಿಲ್ಲೆಯಲ್ಲಿ ಒಡೆದು ಹೋದ ಕೆರೆಗಳನ್ನು ದುರಸ್ತಿ ಮಾಡುವ ವಿಚಾರದಲ್ಲಿ ಜನಪ್ರತಿನಿಧಿಗಳು ಇದೇ ಮೊದಲ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಎದುರು ಒಗ್ಗಟ್ಟು ಪ್ರದರ್ಶಿಸಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕ ಪ್ರಿಯಾಂಕ್ ಖರ್ಗೆ, ಈ ಬಾರಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಕೆರೆಗಳು ಒಡೆದು ಹೋಗಿದ್ದು, ಅವುಗಳ ನಿರ್ವಹಣೆಗೆ ಕೇಳಿದರೆ ಹಣ ಇಲ್ಲ ಎನ್ನುತ್ತಿದ್ದಾರೆ. ಹಣ ಇಲ್ಲ ಎಂದರೆ ಹೇಗೆ? ಅಗತ್ಯವಿರುವಷ್ಟು ಹಣವನ್ನು ಬಿಡುಗಡೆ ಮಾಡಬೇಕಲ್ಲ ಎಂದರು.

ಇದಕ್ಕೆ ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರೆ, ಶಾಸಕರಾದ ಎಂ.ವೈ. ಪಾಟೀಲ, ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ. ಅವಿನಾಶ್ ಜಾಧವ್ ದನಿಗೂಡಿಸಿದರು. ಹೆಚ್ಚಿನ ಹಣ ಕೊಡಿಸುವ ಕುರಿತು ಸಣ್ಣ ನೀರಾವರಿ ಸಚಿವರ ತಮನಕ್ಕೆ ತರುವೆ ಎಂದು ಕಾರಜೋಳ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು