ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿ ಸೇರ್ಪಡೆಗೆ ಆಗ್ರಹಿಸಿ ಕೋಲಿ, ಕಬ್ಬಲಿಗ ಸಮಾಜದಿಂದ ಪ್ರತಿಭಟನೆ

Last Updated 20 ಮಾರ್ಚ್ 2023, 13:42 IST
ಅಕ್ಷರ ಗಾತ್ರ

ಕಲಬುರಗಿ: ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಸೇರಿದಂತೆ ಇತರೆ ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ(ಎಸ್‌ಟಿ) ಸೇರ್ಪಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿಯ ಮುಖಂಡರು, ಸಮುದಾಯದ ಮಠಾಧೀಶರು ಮತ್ತು ಸಾವಿರಾರು ಜನರು ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಇಲ್ಲಿನ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಎಸ್‌ಟಿ ಸೇರ್ಪಡೆಗೆ ವಿಳಂಬ ಮಾಡುತ್ತಿರುವ ಕೇಂದ್ರದ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಘೋಷಣೆ ಕೂಗಿದರು. ರ್‍ಯಾಲಿಯಲ್ಲಿ ‘ಮಾತಿಗೆ ತಪ್ಪಿದ ನಾಯಕರು’, ‘ಸುಳ್ಳು ಭರವಸೆ ನಡೆಯುವುದಿಲ್ಲ’, ‘ಸುಳ್ಳು ಭರವಸೆ ನೀಡಿ ಮತ ಪಡೆದ ಬೊಮ್ಮಾಯಿ ಅವರಿಗೆ ಧಿಕ್ಕಾರ’, ‘ಸುಳ್ಳು ಹೇಳುವ ಮೋದಿಗೆ ಧಿಕ್ಕಾರ’, ‘ಕೋಲಿ, ಕಬ್ಬಲಿಗ ಎಸ್‌ಟಿ ಸೇರ್ಪಡೆ ಮಾಡಿ’ ಎಂಬ ನಾಮಫಲಕಗಳನ್ನು ಹಿಡಿದು ರಸ್ತೆ ಉದ್ದಕ್ಕೂ ಸಾಗಿದರು.

ದೇಶದ ಹಲವು ರಾಜ್ಯಗಳಲ್ಲಿ ಕೋಲಿ ಸಮುದಾಯದ ಅನೇಕ ಪರ್ಯಾಯ ಜಾತಿಗಳನ್ನು ಎಸ್‌ಟಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲಿ ಅದೇ ಮಾದರಿಯಲ್ಲಿ ಸೇರಿಸುವಂತೆ ಮೂರು ದಶಕಗಳಿಂದ ಹೋರಾಟ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಅನೇಕ ವರದಿಗಳು ಸಹ ಈ ಬಗ್ಗೆ ಶಿಫಾರಸು ಮಾಡಿವೆ. ಇದ್ಯಾವುದಕ್ಕೂ ಕೇಂದ್ರ ಸರ್ಕಾರ ಬೆಲೆ ಕೊಡುತ್ತಿಲ್ಲ ಎಂದು ಪ್ರತಿಭಟನಾ ನಿರತರು ಬೇಸರ ವ್ಯಕ್ತಪಡಿಸಿದರು.

ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಮಾತನಾಡಿ, ‘ಕುಲಶಾಸ್ತ್ರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಕಳುಹಿಸಿ 10 ವರ್ಷ ಕಳೆದರೂ ಎಸ್‌ಟಿ ಮಾನ್ಯತೆ ಸಿಕ್ಕಿಲ್ಲ. ಚಿಂಚೋಳಿ, ಬಸವಕಲ್ಯಾಣ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆರಿಸಿ ತಂದರೆ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ಕೊಟ್ಟಿದ್ದರು. ಇದುವರೆಗೂ ನುಡಿದಂತೆ ನಡೆಯಲಿಲ್ಲ’ ಎಂದು ದೂರಿದರು.

‘2019ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸಿದಾಗ ಕೋಲಿ, ಕಬ್ಬಲಿಗ ಸಮುದಾಯವನ್ನು ನೆನಪಿನಲ್ಲಿ ಇರಿಸಿಕೊಳ್ಳುವುದಾಗಿ ಹೇಳಿದ್ದರು. ನಾಲ್ಕು ವರ್ಷ ಕಳೆದರೂ ಸಮುದಾಯಕ್ಕೆ ನ್ಯಾಯ ಕೊಡಲಿಲ್ಲ’ ಎಂದರು.

‘ಕೇಂದ್ರ ಸರ್ಕಾರ ನಮಗೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದೆ. ನಾವು ನಿಮ್ಮ ಬಳಿ ಬಿಕ್ಷೆ ಕೇಳುತ್ತಿಲ್ಲ. ಸಾಂವಿಧಾನಿಕ ಹಕ್ಕು ಕೇಳುತ್ತಿದ್ದೇವೆ. ವಿಧಾನಸಭೆಯ ಚುನಾವಣೆ ಘೋಷಣೆಗೂ ಮುನ್ನ ಎಸ್‌ಟಿ ಸೇರ್ಪಡೆ ಆದೇಶ ಹೊರಡಿಸದೆ ಇದ್ದರೇ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ’ ಅವರು ಎಚ್ಚರಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತೊನಸನಹಳ್ಳಿ ಅಲ್ಲಮಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ, ಹೋರಾಟ ಸಮಿತಿ ಮಾರ್ಗದರ್ಶಕರಾದ ತಿಪ್ಪಣ್ಣಪ್ಪ ಕಮಕನೂರ, ಮಾಲಾ ಬಿ.ನಾರಾಯಣರಾವ್, ಭೀಮಣ್ಣ ಸಾಲಿ, ರಾಜಗೋಪಾಲ ರೆಡ್ಡಿ, ಮುಖಂಡರಾದ ಶರಣಪ್ಪ ಮಾನೆಗಾರ್, ಮಹಾಂತೇಶ ಕೌಲಗಿ, ಪಿಂಟು ಜಮಾದಾರ, ಸತೀಶ ಜಮಾದಾರ, ಶಿವು ಯಾಗಾಪೂರ, ವಾಣಿಶ್ರೀ ಸಂಗರಕರ್, ದೇವೀಂದ್ರ ಜಮಾದಾರ, ಅಂಬರಾಯ ಜವಳಗಿ, ಶಿವಕುಮಾರ ಫಿರೋಜಾಬಾದ್ ಇದ್ದರು.

ಹೋರಾಟಕ್ಕೆ ಬಂಜಾರ ಸಮುದಾಯ ಬೆಂಬಲ

‘ಇದೇ ಸಮುದಾಯದವರಿಗೆ ಬೇರೆ ರಾಜ್ಯದಲ್ಲಿ ಎಸ್‌ಟಿ ಮೀಸಲಾತಿ ಸಿಗುತ್ತಿದೆ. ಅದು ಕರ್ನಾಟಕಕ್ಕೂ ಅನ್ವಯಿಸಬೇಕು. ಇದಕ್ಕೆ ಬಂಜಾರ ಸಮುದಾಯ ಬೆಂಬಲ ನೀಡುತ್ತದೆ’ ಎಂದು ಕಾಂಗ್ರೆಸ್ ಮುಖಂಡ ರೇವುನಾಯಕ ಬೆಳಮಗಿ ಭರವಸೆ ನೀಡಿದರು.

‘ಒಂದು ವೇಳೆ ಸಮುದಾಯಕ್ಕೆ ನ್ಯಾಯ ಕೊಡದಿದ್ದರೆ ಎಲ್ಲ ಸಮಾಜಗಳು ಒಗ್ಗೂಡಿ ಹೋರಾಟ ಮಾಡಿ, ಎಸ್‌ಟಿ ಸಿಗುವವರೆಗೂ ಬಿಡುವುದಿಲ್ಲ’ ಎಂದರು.

‘ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ಕೊಡಿಸಲು ನನ್ನ ಆಪ್ತನಾಗಿದ್ದ ದಿ. ವಿಠ್ಠಲ ಹೇರೂರ ಮೂರು ದಶಕಗಳ ಕಾಲ ಹೋರಾಡಿದ್ದರು. ಆದರೂ ಅವರ ಆಸೆ ಈಡೇರಲಿಲ್ಲ. ಪ್ರಧಾನಿ ಮೋದಿ ಅವರು ಅವಕಾಶ ವಂಚಿತ ಸಮುದಾಯಕ್ಕೆ ನ್ಯಾಯಕೊಟ್ಟು, ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು’ ಎಂದರು.

ದೂರ ಉಳಿದ ಸಮುದಾಯದ ಬಿಜೆಪಿ ಮುಖಂಡರು

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸಮುದಾಯದ ಮುಖಂಡರೂ ಆಗಿರುವ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರು ರ್‍ಯಾಲಿಯಿಂದ ದೂರ ಉಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT