ಶನಿವಾರ, ಜೂನ್ 12, 2021
24 °C
ಆ.24ಕ್ಕೆ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ

ಕಲಬುರ್ಗಿ: ಪಾರದರ್ಶಕ ಪರೀಕ್ಷೆ ನಡೆಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ 35 ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 24ರಂದು 2017–18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ (ಕೆ.ಎ.ಎಸ್) ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಪಾರದರ್ಶಕವಾಗಿ ನಡೆಸಬೇಕು ಮತ್ತು ಯಾವುದೇ ದೂರಿಗೆ ಅವಕಾಶ ನೀಡಬಾರದು ಎಂದು ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲಬುರ್ಗಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಒಟ್ಟಾರೆ 14,340 ವಿದ್ಯಾರ್ಥಿಗಳು ಕಲಬುರ್ಗಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ ನಗರದಲ್ಲಿ 34 ಸಾಮಾನ್ಯ ಪರೀಕ್ಷಾ ಕೇಂದ್ರಗಳು ಮತ್ತು ಕೋವಿಡ್–19 ಪಾಸಿಟಿವ್ ಹೊಂದಿರುವ ವಿದ್ಯಾರ್ಥಿಗಳಿಗೆ ಏಷ್ಯನ್ ಮಾಲ್ ಹಿಂಬದಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಪರೀಕ್ಷಾ ಕೇಂದ್ರದಲ್ಲಿ ಬರೆಯಲು ಅವಕಾಶ ನೀಡಲಾಗಿದೆ ಎಂದರು.

ಇದಲ್ಲದೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಕೋಣೆಗಳನ್ನು ಕಂಟೇನ್‍ಮೆಂಟ್ ವಲಯದಿಂದ ಬಂದಿರುವ, ಕೋವಿಡ್‌ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಬಂದ ಅಥವಾ ಕೋವಿಡ್‌ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮೀಸಲಿರಿಸಬೇಕು ಎಂದರು.

ಪರೀಕ್ಷೆ ಸುಸೂತ್ರವಾಗಿ ನಡೆಯಲು 14 ಮಾರ್ಗಾಧಿಕಾರಿಗಳು, 35 ಕೇಂದ್ರಗಳಿಗೂ ಸ್ಥಳೀಯ ಪರಿವೀಕ್ಷಣಾಧಿಕಾರಿ ಹಾಗೂ 2–3 ಕೇಂದ್ರಗಳಿಗೆ ತಲಾ ಒಬ್ಬ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಎಲ್ಲಿಯಾದರೂ ನಕಲು ಕಂಡುಬಂದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರೇ ಜವಾಬ್ದಾರರಾಗುತ್ತಾರೆ. ಡಿಡಿಪಿಐ ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ.ಶಂಕರ ವಣಿಕ್ಯಾಳ ತಿಳಿಸಿದರು.

ಮುಂಜಾಗ್ರತೆ ಇರಲಿ: ಕೋವಿಡ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷೆ ನಡೆಯುವ ಮುನ್ನ ಪರೀಕ್ಷಾ ಕೋಣೆ ಸ್ಯಾನಿಟೈಸ್ ಮಾಡಿಸಬೇಕು. ವಿದ್ಯಾರ್ಥಿಗಳನ್ನು ಡಿಜಿಟಲ್ ಥರ್ಮೋಮೀಟರ್‌ನಿಂದ ಪರೀಕ್ಷಿಸಬೇಕು. ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರದೊಂದಿಗೆ ಪರೀಕ್ಷೆ ಬರೆಯಲು ಆಸನ ನಿಗದಿಪಡಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಜನಸಂದಣಿಯಾಗದಂತೆ ಎಚ್ಚರವಹಿಸಬೇಕು. ಪರೀಕ್ಷಾ ಕೇಂದ್ರದಲ್ಲಿ 300 ವಿದ್ಯಾರ್ಥಿಗಳಿದಲ್ಲಿ ಒಂದು ಮತ್ತು ಅದಕ್ಕು ಹೆಚ್ಚಿದಲ್ಲಿ ಎರಡು ಆರೋಗ್ಯ ತಂಡಗಳು ಕಾರ್ಯನಿರ್ವಹಿಸಬೇಕು.

ಸಿ.ಸಿ.ಟಿ.ವಿ. ಕಣ್ಗಾವಲು: ಪರೀಕ್ಷೆ ಸಂಪೂರ್ಣವಾಗಿ ಸಿ.ಸಿ.ಟಿ.ವಿ. ಕಣ್ಗಾವಲಿನಲ್ಲಿ ನಡೆಯಲಿದೆ. ಇದಲ್ಲದೆ ಪರೀಕ್ಷೆ ಆರಂಭದಿಂದ ಹಿಡಿದು ಮುಕ್ತಾಯದವರೆಗೆ ಪ್ರತಿ ಚಟುವಟಿಕೆಯ ವಿಡಿಯೊಗ್ರಫಿ ಮಾಡಬೇಕು ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಖಡಕ್ ಸೂಚನೆ ನೀಡಿದ ಡಾ. ಶಂಕರ ವಣಿಕ್ಯಾಳ ಅವರು ಯಾವುದೇ ಅಕ್ರಮಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊಬೈಲ್ ಹಾಗೂ ಸ್ಮಾರ್ಟ್ ಫೋನ್‍ ನಿಷೇಧ: ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಮೊಬೈಲ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಬ್ಲ್ಯೂಟೂತ್ ಡಿವೈಸ್, ಪೇಜರ್, ವೈರಲೆಸ್, ಕ್ಯಾಲ್ಕುಲೇಟರ್ ಇತರೆ ಮೊದಲಾದ ಉಪಕರಣಗಳು, ಸ್ಲೈಡರೂಲ್, ಮಾರ್ಕರ್, ಲಾಗ್ ಟೇಬಲ್, ವೈಟ್ ಫ್ಲೂಯಿಡ್, ಬ್ಲೇಡ್, ಎರೆಸರ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ, ನಕಲು ಚೀಟಿಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗುರುತಿನ ಚೀಟಿ ಕಡ್ಡಾಯ: ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ಜೊತೆಗೆ ಚುನಾವಣಾ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಸಕರಿ ನೌಕರರ ಐಡಿ ಇವುಗಳಲ್ಲಿ ಯಾವುದಾದರು ಒಂದು ಮೂಲ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ.
ಡಿಡಿಪಿಐ ಎಸ್.ಪಿ.ಬಾಡಗಂಡಿ ಅವರು ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು. ಸಭೆಯಲ್ಲಿ ಕೆ.ಪಿ.ಎಸ್.ಸಿ. ಕಲಬುರಗಿ ಕಚೇರಿಯ ಹಿರಿಯ ಸಹಾಯಕಿ ಅನ್ನಪೂರ್ಣ, ಸಹಾಯಕ ನಟರಾಜ್ ಸೇರಿದಂತೆ ತಾಲೂಕುಗಳ ತಹಶೀಲ್ದಾರರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಮತ್ತು ಮಾರ್ಗಾಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು