ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿ ಮಾರುಕಟ್ಟೆ, ಕೆರೆ ಅಭಿವೃದ್ಧಿಗೆ ಶೀಘ್ರ ಚಾಲನೆ

ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯ
Last Updated 6 ಡಿಸೆಂಬರ್ 2020, 7:08 IST
ಅಕ್ಷರ ಗಾತ್ರ

ಕಲಬುರ್ಗಿ: ಎಂಎಸ್‌ಕೆ ಮಿಲ್‌ ಪ್ರದೇಶದಲ್ಲಿ ಕಣ್ಣಿ ಮಾರುಕಟ್ಟೆ ನಿರ್ಮಾಣ, ಶರಣಬಸವೇಶ್ವರ ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರದಲ್ಲಿ ಶನಿವಾರ ನಡೆದ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.‌

ಸಭೆಯಲ್ಲಿ ಮಾತನಾಡಿದ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು, ‘ಎಂಎಸ್‌ಕೆ ಮಿಲ್‌ ಪ್ರದೇಶದಲ್ಲಿ ಪ್ರಾಧಿಕಾರಕ್ಕೆ ಸೇರಿದ 2 ಎಕರೆ ಜಾಗವಿದ್ದು, ಅಲ್ಲಿ ಹೊಸ ವಾಣಿಜ್ಯ ಸಂಕೀರ್ಣ ಹಾಗೂ ಕಣ್ಣಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನೀಡಲಾಗುವುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ದಯಾಘನ್‌ ಧಾರವಾಡಕರ್‌, ‘ಶಾಸಕರು ಈಗಾಗಲೇ ₹ 2 ಕೋಟಿ ಅನುದಾನವನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ಯೋಜನೆಯ ನೀಲಿನಕಾಶೆ ಕೈಸೇರಲಿದ್ದು, ಅಂದಾಜಿನ ಪ್ರಕಾರ ಬೇಡಿಕೆ ಸಲ್ಲಿಸಲಾಗುವುದು. ಶೀಘ್ರದಲ್ಲೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದರು.

‘ಪ್ರಾಧಿಕಾರದ ವ್ಯಾಪ್ತಿಗೆ ಬರುವ ಕೆರೆಗಳ ಅಭಿವೃದ್ಧಿಗಾಗಿ ₹ 20 ಕೋಟಿ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹ ಮಾಡಲಾಗಿದೆ. ಸದ್ಯಕ್ಕೆ ಶರಣಬಸವೇಶ್ವರ ಕೆರೆ ಅಭಿವೃದ್ಧಿಯನ್ನು ₹ 10 ಕೋಟಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ನಿರೀಕ್ಷೆಯಂತೆ, ಕೆರೆಯ ಸೌಂದರ್ಯೀಕರಣ, ಪಾದಚಾರಿ ಮಾರ್ಗ, ಉದ್ಯಾನ, ಪುಷ್ಪವನ, ಪ್ರತಿಮೆಗಳ ನಿರ್ಮಾಣ ಹೀಗೆ ಎಲ್ಲ ಕಾಮಗಾರಿಗಳಿಗೆ ತಂತ್ರಜ್ಞರ ಅಭಿಪ್ರಾಯ ಪಡೆಯಲಾಗುವುದು’ ಎಂದು ತಿಳಿಸಿದರು.

‘ಉಳಿದ ₹ 10 ಕೋಟಿಯಲ್ಲಿ ಬೋಸಗಾ ಹಾಗೂ ಖಾಜಾಕುಸನೂರ ಕೆರೆಗಳನ್ನು ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಆದರೆ, ಸದ್ಯ ಗ್ರಾಮ ಪಂಚಾಯಿತಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಕಾರಣ ಇದನ್ನು ಕೈಗೆತ್ತಿಕೊಳ್ಳುತ್ತಿಲ್ಲ’ ಎಂದೂ ಅವರು ವಿವರಿಸಿದರು.

‘ಕುಸನೂರ ಹಾಗೂ ಹಾಗರಗಾ ಗ್ರಾಮಗಳಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಸನೂರ ಯೋಜನೆಗೆ ಸರ್ಕಾರದ ಅನುಮೋದನೆ ಸಿಕ್ಕಿದೆ. ನೀಲಿನಕಾಶೆ ಕೂಡ ಸಿದ್ಧಗೊಂಡಿದೆ. ಮಂಜೂರಾತಿ ದೊರೆತ ತಕ್ಷಣ ನಿವೇಶನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಹಾಗರಗಾ ಗ್ರಾಮದಲ್ಲಿರುವ 117 ಎಕರೆ ಭೂಮಿ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು 50:50 ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಸದ್ಯ ಕ್ಯಾಬಿನೆಟ್‌ ಅನುಮತಿಗಾಗಿ ಕಾಯುತ್ತಿದ್ದೇವೆ’ ಎಂದು ದಯಾಘನ್‌ ವಿವರಿಸಿದರು.

ಸಭೆಯಲ್ಲಿದ್ದ ಶಾಸಕರಾದ ಖನೀಜ್‌ ಫಾತಿಮಾ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್‌ ಸದಸ್ಯರಾದ ಸುನೀಲ ವಲ್ಯಾಪುರೆ, ಬಿ.ಜಿ. ಪಾಟೀಲ, ಪಾಲಿಕೆ ಆಯುಕ್ತ ಸ್ನೇಹಲ್‌ ಲೋಖಂಡೆ, ಕುಡಾ ಆಯುಕ್ತ ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಹಾಜರಿದ್ದು, ಪ್ರಾಧಿಕಾರಕ್ಕೆ ಸಂಪನ್ಮೂಲ ಕ್ರೂಢೀಕರಣ ಮಾಡಲು ಹಾಕಿಕೊಳ್ಳಬೇಕಾದ ಯೋಜನೆಗಳು ಕುರಿತು ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT