ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದ | ಸರ್ಕಾರಿ ಶಾಲೆಗಳ ದುಸ್ಥಿತಿ: ಮಕ್ಕಳ ಕಲಿಕೆಗೆ ಅಡ್ಡಿ

ಆಳಂದ ತಾಲ್ಲೂಕಿನಲ್ಲಿ ಕಾಯಂ ಶಿಕ್ಷಕರ ಕೊರತೆ: ಅತಿಥಿ ಶಿಕ್ಷಕರೇ ಆಸರೆ
Published : 22 ಆಗಸ್ಟ್ 2024, 5:14 IST
Last Updated : 22 ಆಗಸ್ಟ್ 2024, 5:14 IST
ಫಾಲೋ ಮಾಡಿ
Comments

ಆಳಂದ: ತಾಲ್ಲೂಕಿನ ಶೈಕ್ಷಣಿಕ ಸಾಧನೆಯು ಜಿಲ್ಲೆಯಲ್ಲಿ ಉತ್ತಮವಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಲಭ್ಯಗಳ ದುಸ್ಥಿತಿ ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ಇದರಿಂದ ದಿನೇದಿನೆ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಆಳಂದ ತಾಲ್ಲೂಕಿನಲ್ಲಿ ಒಟ್ಟು 261 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ ಪ್ರಸಕ್ತ ವರ್ಷ 212 ಜನ ಅತಿಥಿ ಶಿಕ್ಷಕರ ಸೇವೆ ಅವಲಂಬಿಸಲಾಗಿದೆ. 48 ಸರ್ಕಾರಿ ಪ್ರೌಢಶಾಲೆಗಳಲ್ಲಿ 67 ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ಬೋಧಕರ ಕೊರತೆ ಕೆಲ ಶಾಲೆಗಳಲ್ಲಿ ಕಾಡುತ್ತಿದೆ.

ಹಳೆಯ ಕಟ್ಟಡ ಹಾಗೂ ಸತತ ಮಳೆಗೆ ತಾಲ್ಲೂಕಿನಲ್ಲಿ ಒಟ್ಟು 219 ಶಾಲಾ ಕೋಣೆಗಳು ಹಾನಿಗೆ ಒಳಪಟ್ಟಿವೆ. ಇವುಗಳಲ್ಲಿ 151 ತರಗತಿ ಕೋಣೆಗಳು ಸಂಪೂರ್ಣ ದುರಸ್ತಿ, ಮರು ನಿರ್ಮಾಣ ಕೈಗೊಳ್ಳುವ ಸ್ಥಿತಿ ತಲುಪಿವೆ. ಭೀಮಪುರ ಗ್ರಾಮದ ಸರ್ಕಾರಿ ಶಾಲೆಯ 10 ಕೋಣೆಗಳು ಮಳೆಗೆ ಹಾಳಾಗಿದ್ದು, 93 ವಿದ್ಯಾರ್ಥಿಗಳನ್ನು ಶಾಲಾ ಆವರಣ, ವರಾಂಡದಲ್ಲಿ ತರಗತಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ರೀತಿ ಧಂಗಾಪುರ, ಕೆರೂರು, ನಸೀರವಾಡಿ, ಕಣಮಸ, ಮಾದನ ಹಿಪ್ಪರಗಿ, ಸಾವಳೇಶ್ವರ, ನಿರಗುಡಿ, ಮಾಡಿಯಾಳ, ಯಳಸಂಗಿ, ಬೆಣ್ಣೆ ಶಿರೂರು, ಹಳ್ಳಿ ಸಲಗರ, ಕೋರಳ್ಳಿ, ಮೋಘಾ, ನಿಂಬರ್ಗಾ, ಸಂಗೋಳಗಿ ಜಿ ಗ್ರಾಮ ಹಾಗೂ ಆಳಂದದ ಸಿಪಿಎಸ್‌ ಶಾಲೆ ಸೇರಿದಂತೆ ಈ ಸರ್ಕಾರಿ ಶಾಲೆಗಳಲ್ಲಿನ ಅರ್ಧದಷ್ಟು ತರಗತಿ ಕೋಣೆಗಳು ಶಿಥಿಲಾವಸ್ಥೆ ತಲುಪಿವೆ.

‘ಮಳೆಗೆ ಬಿರುಕು, ಮೇಲಿನ ಪದರು ಆಗಾಗ್ಗೆ ಬೀಳುವುದು, ಮಳೆ ನೀರು ಜೀನುಗುವುದು, ತೇವಾಂಶದಿಂದ ಕತ್ತಲು ಸಾಮಾನ್ಯವಾಗಿದೆ. ಬಹುತೇಕ ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಕೋಣೆಯು ಶಾಲಾ ತರಗತಿಗಳನ್ನೇ ಬಳಕೆ ಮಾಡಲಾಗಿದೆ’ ಎಂದು ಶಿಕ್ಷಕ ಮಲ್ಲಿನಾಥ ವಚ್ಚೆ ತಿಳಿಸಿದರು.

ಪಟ್ಟಣದಲ್ಲಿ ಹೆಚ್ಚಿದ ನಿರಾಸಕ್ತಿ: ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಲ್ಲಿದ್ದು, ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿಯಾಗಿ ಪರವಾನಗಿ ನೀಡಿದ ಪರಿಣಾಮ ಇಂದು ಆಳಂದ ಪಟ್ಟಣದ ಹತ್ಯಾನಗಲ್ಲಿ, ಸುಲ್ತಾನಪುರ ಗಲ್ಲಿ, ಸಿಪಿಎಸ್‌ ಶಾಲೆ, ವೆಂಕಟೇಶ ನಗರ, ಶರಣನಗರ, ನಾಯಕನಗರ ಮತ್ತಿತರ ಬಡವಾಣೆಗಳಲ್ಲಿ ಮಕ್ಕಳ ಸಂಖ್ಯೆ ತರಗತಿವಾರು ಎರಡಂಕಿ ದಾಟುವುದಿಲ್ಲ. ಅಲ್ಲದೆ ಪಾಲಕರಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಆಕರ್ಷಣೆ ಹಾಗೂ ಪಟ್ಟಣದಲ್ಲಿ ಎಸ್‌ಡಿಎಂಸಿ ನಿರಾಸಕ್ತಿಯಿಂದ ಇಲ್ಲಿಯ ಸರ್ಕಾರಿ ಶಾಲೆಗಳು ಬಡವರ ಶಾಲೆಗಳಾಗಿ ಪರಿವರ್ತನೆಗೊಂಡಿವೆ. ತಾಲ್ಲೂಕು ಕೇಂದ್ರದ ಸುತ್ತಲಿನ ಗ್ರಾಮಗಳಲ್ಲಿಯೂ ಸಹ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಈಗಾಗಲೇ ಉರ್ದು, ಮರಾಠಿ ಮಾಧ್ಯಮಗಳ ಶಾಲೆಯ ಕೆಲ ತರಗತಿಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದ ಸ್ಥಿತಿ ಇದೆ.

ಆಳಂದ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯದ್ವಾರದಲ್ಲಿ ಕುಸಿದ ಸೇತುವೆ
ಆಳಂದ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯದ್ವಾರದಲ್ಲಿ ಕುಸಿದ ಸೇತುವೆ

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ: ತಾಲ್ಲೂಕಿನ 51 ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಲ್ಲಿ 13 ಜನರು ಮಾತ್ರ ಇದ್ದರೆ, ಪ್ರೌಢಶಾಲೆಗಳಲ್ಲಿ ಒಟ್ಟು 48 ಹುದ್ದೆಗಳಲ್ಲಿ 29 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರ ನೇಮಕದಲ್ಲಿ ಕೇವಲ ವಿಷಯ ಶಿಕ್ಷಕರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಕ್ರೀಡಾ ಚಟುವಟಿಕೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. ಶೇ 80ರಷ್ಟು ಶಾಲೆಗಳಲ್ಲಿ ಆಟದ ಮೈದಾನ ಕಾಣುವುದಿಲ್ಲ. ತಾಲ್ಲೂಕಿನ ಮುನ್ನೋಳ್ಳಿ, ಧರ್ಮವಾಡಿ, ಯಳಸಂಗಿ, ಮುದ್ದಡಗಾ, ಸಾವಳೇಶ್ವರ ಶಾಲೆಗಳಿಗೆ ಮಾತ್ರ ಪ್ರಸಕ್ತ ವರ್ಷ ₹50 ಸಾವಿರ ಮೊತ್ತದ ಕ್ರೀಡಾಸಾಮಗ್ರಿ ಒದಗಿಸಲಾಗಿದೆ.

ಪ್ರೌಢಶಾಲೆಗಳಲ್ಲಿ ಆಳಂದ ಬಾಲಕರ ಪ್ರೌಢಶಾಲೆ ಹಾಗೂ ಜವಳಿ(ಡಿ) ಸರ್ಕಾರಿ ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿ ಪೂರೈಕೆ ಮಾಡಲಾಗಿದೆ ಎಂದು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಬಾಸಗಿ ತಿಳಿಸಿದರು.

ಆಳಂದ ತಾಲ್ಲೂಕಿನ ಸಂಗೋಳಗಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ಶಿಥಿಲಗೊಂಡಿರುವುದು
ಆಳಂದ ತಾಲ್ಲೂಕಿನ ಸಂಗೋಳಗಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ಶಿಥಿಲಗೊಂಡಿರುವುದು

ಶಾಲೆಯಲ್ಲಿನ ಶಿಕ್ಷಕರು ಹಾಗೂ ವಿಶೇಷವಾಗಿ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ನಿರ್ಮಿಸಲಾದ ಶೌಚಾಲಯಗಳ ಕಟ್ಟಡಗಳು ಸಂಪೂರ್ಣ ದುಸ್ಥಿತಿಗೆ ತಲುಪಿವೆ. ಶಾಲಾ ಆವರಣದಲ್ಲಿ ಬೇಕಾಬಿಟ್ಟೆಯಾಗಿ ಕಟ್ಟಿದ ಶೌಚಾಲಯಗಳಿಗೆ ಕನಿಷ್ಠ ಸೌಲಭ್ಯಗಳಾದ ನೀರು, ನಲ್ಲಿ, ಸರಿಯಾದ ಬಾಗಿಲು ಒದಗಿಸಿಲ್ಲ ಎಂದು ಪಾಲಕರು ದೂರುತ್ತಾರೆ.

ಸಿ.ಜಿ.ಹಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ
ಸಿ.ಜಿ.ಹಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ
ಮಳೆಯಿಂದ ಹಾನಿಗೊಳಗಾದ 219 ಶಾಲೆಗಳ ಪಟ್ಟಿಯನ್ನು ಜಿ.ಪಂ.ಗೆ ದುರಸ್ತಿ ಕೈಗೊಳ್ಳಲು ಪ್ರಸ್ತಾವ ಕಳುಹಿಸಲಾಗಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಹೊಸ ಶಾಲಾ ಕೋಣೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿದೆ
ಸಿ.ಜಿ.ಹಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ
ನಿಂಗಪ್ಪ ಮಂಗೋಂಡೆ ಮುಖ್ಯಶಿಕ್ಷಕ
ನಿಂಗಪ್ಪ ಮಂಗೋಂಡೆ ಮುಖ್ಯಶಿಕ್ಷಕ
ಗ್ರಾಪಂಗಳಲ್ಲಿ ನರೇಗಾ ಕ್ರಿಯಾಯೋಜನೆ ರೂಪಿಸುವಾಗ ಅಲ್ಲಿಯ ಶಾಲಾ ಮುಖ್ಯಶಿಕ್ಷಕರನ್ನು ಸಭೆಗೆ ಆಹ್ವಾನಿಸಿ, ಶಾಲಾ ಮೈದಾನ, ಕಾಂಪೌಂಡ್‌, ಕೈತೋಟ, ಶೌಚಾಲಯ ನಿರ್ಮಾಣಕ್ಕೆ ನರೇಗಾ ಅನುದಾನದಲ್ಲಿ ಸೌಲಭ್ಯ ಒದಗಿಸಕೊಳ್ಳಲು ಸಹಾಯಕ
ನಿಂಗಪ್ಪ ಮುಗೋಂಡೆ, ಮುಖ್ಯಶಿಕ್ಷಕ, ಗುಂಜ ಬಬಲಾದ
ಸತೀಶ ಸನ್ಮುಖ ವಿಜ್ಞಾನ ಶಿಕ್ಷಕ
ಸತೀಶ ಸನ್ಮುಖ ವಿಜ್ಞಾನ ಶಿಕ್ಷಕ
ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳಿಗೆ ಶೇ 90ರಷ್ಟು ಕಲಿಕಾ ಉಪಕರಣ ಪೂರೈಕೆ ಮಾಡಿಲ್ಲ, ಶಾಲಾ ಆರಂಭದಲ್ಲಿ ವಿಜ್ಞಾನ ಸಾಮಗ್ರಿ ಒದಗಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ
ಸತೀಶ ಸನ್ಮುಖ, ವಿಜ್ಞಾನ ಶಿಕ್ಷಕ, ದರ್ಗಾ ಶಿರೂರು
ನಾಗಪ್ಪ ದೇವಂತಗಿ ಅಧ್ಯಕ್ಷ ಅನುದಾನಿತ ಶಿಕ್ಷಕರ ಸಂಘ ಆಳಂದ
ನಾಗಪ್ಪ ದೇವಂತಗಿ ಅಧ್ಯಕ್ಷ ಅನುದಾನಿತ ಶಿಕ್ಷಕರ ಸಂಘ ಆಳಂದ
ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕ, ಬಿಸಿಯೂಟ ಮಾತ್ರ ಪೂರೈಕೆ ಇದೆ. ಮೊದಲಿದ್ದ ₹12 ಸಾವಿರ ಶಾಲಾ ಅನುದಾನವೂ ಬಂದ್‌ ಆಗಿದೆ. ಸಮವಸ್ತ್ರ, ಶೌಚಾಲಯ, ಕುಡಿಯುವ ನೀರು, ಪ್ರಯೋಗಾಲಯ, ಗ್ರಂಥಾಲಯ ಮತ್ತಿತರ ಶೈಕ್ಷಣಿಕ ಸೌಲಭ್ಯ ಸಮಾನವಾಗಿ ಒದಗಿಸಬೇಕು
ನಾಗಪ್ಪ ದೇವಂತಗಿ, ಮುಖ್ಯಶಿಕ್ಷಕ, ನರೋಣಾ
ಮಹಾಂತಪ್ಪ ಸಣಮನಿ ಹೋರಾಟಗಾರ
ಮಹಾಂತಪ್ಪ ಸಣಮನಿ ಹೋರಾಟಗಾರ
ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನ ಹಾಗೂ ಸೂಕ್ತ ಮೇಲ್ವಿಚಾರಣೆ ಕೈಗೊಂಡಾಗ ಮಾತ್ರ ಉತ್ತಮ ಫಲಿತಾಂಶ ಲಭಿಸಲಿದೆ
ಮಹಾಂತಪ್ಪ ಸಣಮನಿ, ಸಾಮಾಜಿಕ ಕಾರ್ಯಕರ್ತ, ಮದಗುಣಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT