ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಿ: ಮಲ್ಲಿಕಾರ್ಜುನ ಖರ್ಗೆ

Published 13 ಏಪ್ರಿಲ್ 2024, 7:04 IST
Last Updated 13 ಏಪ್ರಿಲ್ 2024, 7:04 IST
ಅಕ್ಷರ ಗಾತ್ರ

ಕಲಬುರಗಿ: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಟ್ಟ ಗಳಿಗೆಯಲ್ಲಿ ನನಗೆ ಸೋಲಾಗಿದೆ. ಆ ನಂತರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದು ಬಂದಿದ್ದೀರಿ. ಈ ಬಾರಿ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಸೋಲಿನ ಸೇಡನ್ನು ತೀರಿಸಿಕೊಳ್ಳಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರು ಹಾಗೂ ಪಕ್ಷದ ಬೆಂಬಲಿಗರಿಗೆ ಕರೆ ನೀಡಿದರು.

ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸಿದ ಬಳಿಕ ನಗರದ ಎನ್.ವಿ. ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘371 (ಜೆ) ಕಲಂ ಜಾರಿಗೊಳಿಸುವ ಮೂಲಕ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಹೆಸರುಗಳನ್ನು ಭಾರತದ ಸಂವಿಧಾನದಲ್ಲಿ ಬರೆಯಲಾಗಿದೆ. ಇದೊಂದು ಐತಿಹಾಸಿಕ ಸಾಧನೆಯಾಗಿದೆ.

‘ನಮ್ಮ ಅವಧಿಯಲ್ಲಿ ಕಲಬುರಗಿಯಲ್ಲಿ ಇಎಐ ಆಸ್ಪತ್ರೆ ಕಟ್ಟಿದ್ದೇವೆ. ರಾಷ್ಟ್ರೀಯ ಹೆದ್ದಾರಿ, ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇನೆ. ಮೂವತ್ತೇಳು ಹೊಸ‌ ರೈಲು ಓಡಿಸಿದ್ದೇನೆ. ಜವಳಿ ಪಾರ್ಕ್ ಮಂಜೂರು ಮಾಡಿಸಿದ್ದೇನೆ. ಇವುಗಳನ್ನು ನೀವು ಮಾಡಿ ಎಂದು ನನಗೆ ಯಾರೂ ಹೇಳಿರಲಿಲ್ಲ. ಆದರೆ ನಮ್ಮ ಭಾಗದ ಅಭಿವೃದ್ದಿಗಾಗಿ ಕೆಲಸ ಮಾಡಿದ್ದೇನೆ. ಈಗ ಓಟು ಕೇಳುತ್ತಿದ್ದೇನೆ. ಅಭಿವೃದ್ದಿ ಆಗಬೇಕೆಂದರೆ ಕಾಂಗ್ರೆಸ್ ಗೆ ಮತ ನೀಡಿ’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ರೀತಿಯಲ್ಲೇ ತಮ್ಮ ಗ್ಯಾರಂಟಿ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ ಯಾವ ಗ್ಯಾರಂಟಿ ಎಂದು ಹೇಳಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿದೆ. ಮೋದಿಯವರೇ ಇದೇನೆ ನಿಮ್ಮ ಗ್ಯಾರಂಟಿನಾ? ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ, ಉದ್ಯೋಗ ಕೊಡಲಿಲ್ಲ ಇದು ನಿಮ್ಮ ಗ್ಯಾರಂಟಿನಾ? ಪ್ರತಿಯೊಬ್ಬರಿಗೂ ಹದಿನೈದು ಲಕ್ಷ ಕೊಡುತ್ತೇನೆ ಎಂದಿದ್ದರು, ಕೊಟ್ಟರಾ? ರೈತರ ಆಮದಾನಿ ದ್ವಿಗುಣ ಮಾಡುವುದಾಗಿ ಹೇಳಿದ್ದರು, ಮಾಡಿದ್ದಾರಾ? ಎಂದು ಪಶ್ನಿಸಿದರು. 

ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಬಂದು ದ್ವೇಷದ ಪ್ರಚಾರ ಪ್ರಾರಂಭಿಸಿದ್ದಾರೆ. ಆದರೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇದೂವರೆಗೆ ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ಆಧರಿಸಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಉತ್ತರ ನೀಡಬೇಕು’ ಎಂದರು.

‘ಬಡವರ ಪರವಾದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ‌ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ‌ಗೆಲ್ಲಿಸಿಕೊಟ್ಟಂತೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನ ಗೆಲ್ಲಿಸಬೇಕು ಇದು ಎಲ್ಲರ ಆಸೆಯಾಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್. ಪಾಟೀಲ, ಶಾಸಕರಾದ ಲಕ್ಷ್ಮಣ್ ಸವದಿ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು. 

ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಶಾಸಕರಾದ ಎಂ.ವೈ. ಪಾಟೀಲ, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಬಸನಗೌಡ ತುರ್ವಿಹಾಳ, ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ ಹುಮನಾಬಾದ್, ಎಚ್.ಎಂ. ರೇವಣ್ಣ, ವಿ.ವಸಂತಕುಮಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಡಿ.ಜಿ. ಸಾಗರ, ಬಸರೆಡ್ಡಿ ಪಾಟೀಲ ಅನಪೂರ, ಭಾಗನಗೌಡ ಸಂಕನೂರು, ಶ್ರೇಣಿಕ ಕುಮಾರ ಧೋಕಾ, ಶಿವಾನಂದ ಪಾಟೀಲ, ಡೇವಿಡ್ ಸಿಮೆಯೊನ್, ಶರಣು‌ ಮೋದಿ, ಮಜರ್ ಖಾನ್, ಡಾ.ಕಿರಣ್ ದೇಶಮುಖ, ಪ್ರವೀಣ ಹರವಾಳ, ರಾಜೀವ್ ಜಾನೆ, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ನೀಲಕಂಠ ಮೂಲಗೆ, ಭೀಮಣ್ಣ ಸಾಲಿ ಸೇರಿದಂತೆ ಹಲವರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ
ನಾವು ಎಷ್ಟು ಕೆಲಸ ಮಾಡಿದರೂ ಅದು ಮತದಾರರ ಮನಸ್ಸಿನಲ್ಲಿ ಹೋಗುವುದಿಲ್ಲ. ಮತಗಟ್ಟೆಗೆ ಹೋಗುತ್ತಿದ್ದಂತೆಯೇ ಜನರಿಗೆ ಏನಾಗುತ್ತದೋ ಏನೋ. ಈ ಬಾರಿ ಹಾಗಾಗಬಾರದು
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಈಗಾಗಲೇ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಲೋಕಸಭೆಗೆ ನಾನು ಆಯ್ಕೆಯಾದರೆ ಕಲಬುರಗಿ ಜಿಲ್ಲೆಗೆ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ತರಬಹುದು
ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್ ಅಭ್ಯರ್ಥಿ
ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿ
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಪ್ರಮುಖ ಗ್ಯಾರಂಟಿ ಸೇರಿದಂತೆ ಒಟ್ಟು 25 ಗ್ಯಾರಂಟಿಗಳನ್ನು ಈಡೇರಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು. ಒಂದು ವರ್ಷಕ್ಕೆ ಮಹಿಳೆಯರಿಗೆ ₹ 1 ಲಕ್ಷ ರೂಪಾಯಿ ನೀಡಲಾಗುವುದು. ಯುವಕರಿಗೆ ಒಂದು ಲಕ್ಷ ವೆಚ್ಚದಲ್ಲಿ ವೃತ್ತಿಪರ ತರಬೇತಿ ಕೊಡಿಸಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಲಾಗುವುದು. ಈಗಾಗಲೇ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜಾರಿಗೊಳಿಸಲಾಗಿದೆ. ಹೀಗಾಗಿ ಇಂಡಿಯಾ ಮೈತ್ರಿಕೂಟಕ್ಕೆ ಹೆಚ್ಚು ಸೀಟು ಗೆಲ್ಲಿಸಿದರೆ ಎಲ್ಲ ಗ್ಯಾರಂಟಿಗಳು ಈಡೇರಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT