ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಂಚ್‌ ಮಾಡುತ್ತಲೇ ಇದ್ದರೂ ‘ರಾಹುಲ್‌’ ಎಂಬ ರಾಕೆಟ್‌ ಹಾರುತ್ತಲೇ ಇಲ್ಲ: ಅಣ್ಣಾಮಲೈ

ಬಿಜೆಪಿ ಬೆಂಬಲಿಗರಲ್ಲಿ ಹುರುಪು ತುಂಬಿದ ಅಣ್ಣಾಮಲೈ
Published 5 ಮೇ 2024, 5:30 IST
Last Updated 5 ಮೇ 2024, 5:30 IST
ಅಕ್ಷರ ಗಾತ್ರ

ಕಲಬುರಗಿ: ‘ಇದು ಹಳೆಯ ಭಾರತ ಹಾಗೂ ಹೊಸ ಭಾರತದ ನಡುವಣ ಚುನಾವಣೆ. ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಜನರು ಮತ ಹಾಕಬೇಕು’ ಎಂದು ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಕೋರಿದರು.

ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್‌ ಸಭಾಂಗಣದಲ್ಲಿ ಶನಿವಾರ ನಡೆದ ‘ಬುದ್ಧಿಜೀವಿಗಳ ಜೊತೆಗಿನ ಸಭೆ’ಯಲ್ಲಿ ಅವರು ಮಾತನಾಡಿದರು. ‘ಮೋದಿ ಮತ್ತೊಮ್ಮೆ ಏಕೆ ಗೆಲ್ಲಬೇಕಿದೆ’ ಎಂಬುದನ್ನು ಹೇಳುತ್ತ ಬಿಜೆಪಿ ಬೆಂಬಲಿಗರಲ್ಲಿ ಹುರುಪು ತುಂಬಿದರು.

‘ಕಾಂಗ್ರೆಸ್‌ ಎಂದೂ ಭಾರತೀಯತನಕ್ಕೆ ಆದ್ಯತೆ ನೀಡಿಲ್ಲ. ಪಾಶ್ಚಾತ್ಯ ಮೌಲ್ಯಗಳಿಗೆ ಅದು ಮಣೆ ಹಾಕಿದೆ. ಆದರೆ, 2014ರ ಬಳಿಕ ನಾವು ‘ಇಂಡಿಯನ್‌ ಸ್ಪಿರೀಟ್‌’ ಕಾಣುತ್ತಿದ್ದೇವೆ. ಅದು ದೇಶ ಮೊದಲು ಎನ್ನುತ್ತದೆ. ಯಾವುದೇ ಸಂದರ್ಭದಲ್ಲೂ ನಮ್ಮ ದೇಶದ ಹಿತಾಸಕ್ತಿ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗುತ್ತಿದೆ’ ಎಂದು ಪ್ರತಿಪಾದಿಸಿದರು.

ಉರಿ, ಅಭಿನಂದನ್ ವರ್ಧಮಾನ್, ಪುಲ್ವಾಮಾ, ಉಕ್ರೇನ್‌ ಯುದ್ಧದ ಪ್ರಕರಣಗಳನ್ನು ಪ್ರಸ್ತಾಪಿಸಿದ ಅಣ್ಣಾಮಲೈ, ‘ಭಾರತಕ್ಕೆ ಬಲಿಷ್ಠ ನಾಯಕತ್ವದ ಅಗತ್ಯವಿದೆ. ಮುಂದಿನ 100 ವರ್ಷ ಮೋದಿಯಂಥ ನಾಯಕ ಸಿಗಲ್ಲ. ಸಿಕ್ಕಿರುವ ಮೋದಿ ಅವರನ್ನು ಮತ್ತೊಮ್ಮೆ ಬೆಂಬಲಿಸಬೇಕು’ ಎಂದು ಕೋರಿದರು.

ಭಾಷಣದುದ್ದಕ್ಕೂ ಕಾಂಗ್ರೆಸ್‌ ಪಕ್ಷ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಣ್ಣಾಮಲೈ ವಾಗ್ದಾಳಿ ನಡೆಸಿದರು.

‘ಬಿಜೆಪಿ 400 ಸ್ಥಾನ ಗೆದ್ದರೆ ಸಂವಿಧಾನ ಬದಲಾಯಿಸಿ ಬಿಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸುತ್ತಾರೆ. 10 ಕಡೆ ಪ್ರಚಾರ ಮಾಡಿದರೆ, 9 ಕಡೆ ಅದನ್ನೇ ಹೇಳುತ್ತಾರೆ. ಅವರು ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ಎಷ್ಟು ಸಲ ಸಂವಿಧಾನ ತಿದ್ದುಪಡಿ ಮಾಡಿದೆ, ಎಷ್ಟು ಸಲ ಸಂವಿಧಾನದಲ್ಲಿನ ಪ್ರಜಾಪ್ರಭುತ್ವದ ಚೈತನ್ಯ ಕೊಂದುಹಾಕಿದೆ ಎಂಬುದನ್ನು ನೋಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಕಾಂಗ್ರೆಸ್ ಪಕ್ಷದಿಂದ ಭಾರತದ ಸಂವಿಧಾನ ಉಳಿಸಲು ನರೇಂದ್ರ ಮೋದಿ ಅವರಿಗೆ 400 ಸ್ಥಾನಬೇಕಿದೆ’ ಎಂದು ಪ್ರತಿಪಾದಿಸಿದರು.

‘ಅಧಿಕಾರಕ್ಕೆ ಬಂದರೆ ಸಂವಿಧಾನ 370 ಕಲಂ ರದ್ದುಪಡಿಸಿದ್ದನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ, ಕಾಂಗ್ರೆಸ್‌ನವರು ಫಿರೋಜ್‌ ಗಾಂಧಿ ಹಾಗೂ ಜವಾಹರಲಾಲ್‌ ನೆಹರೂ ಅವರನ್ನು ಸಮಾಧಿಯಿಂದ ಎಬ್ಬಿಸಿಕೊಂಡು ಕರೆತಂದರೂ, ಅವರ 370 ಕಲಂ ರದ್ದುಪಡಿಸಿದ್ದರ ವಿರಾಮ ಚಿಹ್ನೆಯನ್ನೂ ಬದಲಿಸಲು ಸಾಧ್ಯವಿಲ್ಲ’ ಎಂದು ಗುಡುಗಿದರು.

‘ಮಲ್ಲಿಕಾರ್ಜುನ ಖರ್ಗೆ ಹತಾಶರಾಗಿ ಪ್ರಚಾರ ನಡೆಸುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ರದ್ದುಗೊಂಡಿರುವ ತ್ರಿವಳಿ ತಲಾಖ್‌ ಮತ್ತೆ ಜಾರಿಗೊಳಿಸುವುದಾಗಿ ಅವರು ಹೇಳಿದರೂ ನನಗೆ ಆಶ್ಚರ್ಯವಿಲ್ಲ’ ಎಂದು ವ್ಯಂಗ್ಯವಾಡಿದರು.

ರಾಹುಲ್‌ ವಿರುದ್ಧ ವ್ಯಂಗ್ಯ: ‘2004, 2009, 2014ರಲ್ಲಿ ಅಮೇಠಿಯಿಂದ ಗೆದ್ದಿದ್ದ ರಾಹುಲ್‌ ಗಾಂಧಿ 2019ರಲ್ಲಿ ಸೋತು ಕ್ಷೇತ್ರ ಬಿಡುತ್ತಾರೆ. ಪ್ರಧಾನಿಯಾಗುವ ಅರ್ಹತೆ ಇದೆ ಎಂದು ರಾಹುಲ್‌ ಗಾಂಧಿಗೆ ಹಾಗೂ ಕಾಂಗ್ರೆಸ್‌ಗೆ ಅನಿಸಿದರೆ, ಅಮೇಠಿಯಿಂದಲೇ ಸ್ಪರ್ಧಿಸುವ ಧೈರ್ಯ ತೋರಬೇಕಿತ್ತು. ದೇಶ ಧೈರ್ಯವಂತ ನಾಯಕರನ್ನು ಬಯಸುತ್ತದೆ. ಆದರೆ, ರಾಹುಲ್‌ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಗೆದ್ದು ಬಂದ ಸುರಕ್ಷಿತ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ’ ಎಂದು ಅಣಕಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್‌ ನಮೋಶಿ, ಬಿಜೆಪಿ ನಗರದ ಘಟಕದ ಅಧ್ಯಕ್ಷ ಚಂದು ಪಾಟೀಲ ವೇದಿಕೆ ಮೇಲಿದ್ದರು. ಸುಧಾ ಹಾಲಕಾಯಿ ಅತಿಥಿಯನ್ನು ಪರಿಚಯಿಸಿದರು. ಡಾ.ಪ್ರಶಾಂತ ಕಮಲಾಪುರಕರ ಸ್ವಾಗತಿಸಿದರು.

ಇದು ಗೇಮ್‌ ಚೇಂಜರ್‌ ಚುನಾವಣೆ. ದೇಶದ ಭವಿಷ್ಯ ಏಕತೆಗಾಗಿ ಸನಾತನ ಧರ್ಮದ ಉಳಿವಿಗಾಗಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನನಗೆ ಆಶೀರ್ವದಿಸಬೇಕು. ಆ ಆಶೀರ್ವಾದ ಮೋದಿ ಅವರಿಗೆ ಸಲ್ಲುತ್ತದೆ.
–ಡಾ.ಉಮೇಶ ಜಾಧವ, ಬಿಜೆಪಿ ಅಭ್ಯರ್ಥಿ

‘ಹಾರುತ್ತಿಲ್ಲ ರಾಹುಲ್‌ ಎಂಬ ರಾಕೆಟ್‌...’

‘ಕಳೆದ 20 ವರ್ಷಗಳಲ್ಲಿ ಲಾಂಚ್‌ ಮಾಡುತ್ತಲೇ ಇದ್ದರೂ ರಾಹುಲ್‌ ಗಾಂಧಿ ಎಂಬ ರಾಕೆಟ್‌ ಹಾರುತ್ತಲೇ ಇಲ್ಲ. ದೀಪಾವಳಿಗೆ ತರುವ ರಾಕೆಟ್‌ ಕೂಡ ಎರಡನೇ ಪ್ರಯತ್ನದಲ್ಲೇ ಹಾರುತ್ತದೆ’ ಎಂದು ಅಣ್ಣಾಮಲೈ ವ್ಯಂಗ್ಯವಾಡಿದರು. ‘ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 400 ಸೀಟು ಗೆಲ್ಲುತ್ತೆ. ಕಾಂಗ್ರೆಸ್‌ ಸೋಲಿನ ಹೊಣೆಯನ್ನು ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ಕಟ್ಟುತ್ತಾರೆ. ರಾಹುಲ್‌ ಪ್ರಿಯಾಂಕಾಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಇವಿಎಂ ಮೇಲೆ ನಂಬಿಕೆ ಇಲ್ಲ ಎಂದು ಕಾಂಗ್ರೆಸ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ನಾಟಕದಲ್ಲೇ 6 ತಿಂಗಳು ಕಳೆಯುತ್ತದೆ. ಬಳಿಕ ರಾಹುಲ್‌ ಐದು ತಿಂಗಳು ವಿರಾಮಕ್ಕೆ ಜಾರುತ್ತಾರೆ. 2025ರ ಜನವರಿ ಹೊತ್ತಿಗೆ ರಾಹುಲ್‌ ಅವರು ಕೇಂಬ್ರಿಡ್ಜ್‌ಗೆ ಹೋಗುತ್ತಾರೆ. ಅಲ್ಲಿ ಒಂದಿಷ್ಟು ಜನರನ್ನು ಕೂರಿಸಿಕೊಂಡು ಮೋದಿ ಮೂರನೇ ಸಲ ಗೆದ್ದಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿ ಬರುತ್ತಾರೆ. ಮುಂದಿನ ಐದು ವರ್ಷ ಇದೇ ಮಾಡುತ್ತಾರೆ’ ಎಂದು ಟೀಕಿಸಿದರು.

‘ಅಪ್ಪ ಮಗ ಅಳಿಯನ ಚುನಾವಣೆ’

‘ಕಲಬುರಗಿಯಲ್ಲಿ ಅಪ್ಪ ಪ್ರಚಾರ ಮಾಡುತ್ತಿದ್ದಾರೆ. ಮಗ ಪ್ರಚಾರ ಮುನ್ನಡೆಸುತ್ತಾರೆ. ಅಳಿಯ ಅಭ್ಯರ್ಥಿಯಾಗಿದ್ದಾರೆ. ಕಲಬುರಗಿ ಬಿಟ್ಟು ಬೇರೆ ಕಡೆಗೆ ಇದು ನಡೆಯಲು ಸಾಧ್ಯವೇ’ ಎಂದು ಅಣ್ಣಾಮಲೈ ಅಣಕಿಸಿದರು. ‘ಜನರಿಗಾಗಿ ಜನರಿಂದ ಜನರಿಗೋಸ್ಕರ ಎಂಬುದು ಪ್ರಜಾಪ್ರಭುತ್ವದ ವ್ಯಾಖ್ಯಾನ. ಕಲಬುರಗಿಯಲ್ಲಿ ಅದನ್ನು ಅಪ್ಪನಿಗಾಗಿ ಮಗನಿಂದ ಅಳಿಯನಿಗಾಗಿ ಎಂಬಂಥ ಸ್ಥಿತಿಯಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT