ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಖರ್ಗೆ ಅಳಿಯ ರಾಧಾಕೃಷ್ಣ ಕಣಕ್ಕಿಳಿಸಲು ಸಿದ್ಧತೆ

ಚುನಾವಣೆಯಲ್ಲಿ ಸ್ಪರ್ಧಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರಾಸಕ್ತಿ
ಮನೋಜಕುಮಾರ್ ಗುದ್ದಿ
Published 3 ಮಾರ್ಚ್ 2024, 5:11 IST
Last Updated 3 ಮಾರ್ಚ್ 2024, 5:11 IST
ಅಕ್ಷರ ಗಾತ್ರ

ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಲು ಒಲವು ತೋರಿಸದ ಹಿನ್ನೆಲೆಯಲ್ಲಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ಹಾಗೂ ಕೆಪಿಸಿಸಿ ಒಲವು ತೋರಿಸಿದೆ.

ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರು ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಜಿಲ್ಲೆಯ ಶಾಸಕರೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ್ದು, ಒಂದೊಮ್ಮೆ ಹೈಕಮಾಂಡ್ ಕಣಕ್ಕಿಳಿಸಿದರೆ ರಾಧಾಕೃಷ್ಣ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. 

2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಖರ್ಗೆ ಅವರು ತಮ್ಮ ಒಂದು ಕಾಲದ ಶಿಷ್ಯ ಡಾ.ಉಮೇಶ್ ಜಾಧವ್ ಎದುರು ಪರಾಭವಗೊಂಡಿದ್ದರು. ಹಲವು ಬಾರಿ ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ಸೋಲಿನ ಕಹಿಯನ್ನು ನೆನಪಿಸಿಕೊಂಡಿದ್ದಾರೆ. ಈ ಬಾರಿ ಎಐಸಿಸಿ ಅಧ್ಯಕ್ಷತೆಯಂತಹ ಮಹತ್ವದ ಜವಾಬ್ದಾರಿ ಇದ್ದು, ರಾಷ್ಟ್ರಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ. ಜೊತೆಗೆ ಇಂಡಿಯಾ ಒಕ್ಕೂಟವನ್ನು ಜೊತೆಗೆ ತೆಗೆದುಕೊಂಡು ಹೋಗಬೇಕಿದೆ. ರಾಜ್ಯಸಭಾ ಸದಸ್ಯತ್ವದ ಅವಧಿಯೂ ಇನ್ನೂ ನಾಲ್ಕು ವರ್ಷಗಳಿದ್ದು, ಇಷ್ಟೊಂದು ಒತ್ತಡದ ಪರಿಸ್ಥಿತಿಯಲ್ಲಿ ಮತ್ತೆ ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಖರ್ಗೆ ಅವರು ಆಸಕ್ತಿ ವಹಿಸಿಲ್ಲ. ಇತ್ತೀಚೆಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಖರ್ಗೆ ಅವರು ತಾವು ಸ್ಪರ್ಧಿಸುವ ಬಗ್ಗೆ ಯಾವುದೇ ಸಕಾರಾತ್ಮಕ ಮಾತುಗಳನ್ನಾಡಿಲ್ಲ.

ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರೂ, ‘ಖರ್ಗೆ ಸಾಹೇಬರು ರಾಷ್ಟ್ರಮಟ್ಟದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದ್ದು, ಅವರ ವಯಸ್ಸು 83 ಆಗಿರುವುದರಿಂದ ಕ್ಷೇತ್ರಕ್ಕೆ ಸೀಮಿತರಾಗಿ ಪ್ರಚಾರ ಮಾಡುವುದು ಕಷ್ಟ. ಅಲ್ಲದೇ, ಸ್ಪರ್ಧಿಸದೇ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಅವಕಾಶಗಳೂ ಅವರಿಗೆ ಇವೆ’ ಎನ್ನುವ ಮೂಲಕ ಖರ್ಗೆ ಸ್ಪರ್ಧೆ ಸಾಧ್ಯತೆಗಳು ಕ್ಷೀಣ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಈ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಚರ್ಚಿಸಿದ್ದು, ಗುಲಬರ್ಗಾ ಕ್ಷೇತ್ರದಿಂದ ಖರ್ಗೆ ಅವರು ಸೂಚಿಸುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಪ್ಪಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಪ್ರಿಯಾಂಕ್ ಸ್ಪರ್ಧೆಯೂ ಇಲ್ಲ:

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಐಟಿ, ಬಿಟಿಯಂತಹ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರೂ ರಾಷ್ಟ್ರರಾಜಕಾರಣದತ್ತ ಒಲವು ಹೊಂದಿಲ್ಲ. ಅಲ್ಲದೇ, ಸರ್ಕಾರದ ಕುರಿತು ವಿರೋಧ ಪಕ್ಷಗಳ ಟೀಕೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಹೀಗಾಗಿ, ರಾಧಾಕೃಷ್ಣ ಅವರೇ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಗ್ಯಾರಂಟಿ ಯೋಜನೆಗಳು ಪ್ರತಿ ಕುಟುಂಬಕ್ಕೂ ತಲುಪುತ್ತಿರುವುದರಿಂದ ರಾಧಾಕೃಷ್ಣ ಅವರು ಸ್ಪರ್ಧಿಸಿದರೂ ಗೆಲ್ಲಿಸಿಕೊಂಡು ಬರುವುದು ಸುಲಭ ಎಂದು ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.

ಮಿತಭಾಷಿಯಾಗಿರುವ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ರಾಧಾಕೃಷ್ಣ ಅವರು ಪೀಪಲ್ಸ್ ಎಜುಕೇಶನ್ ಸೊಸೈಟಿಯ ಮುಖ್ಯಸ್ಥರಾಗಿದ್ದು, ಬೆಂಗಳೂರು ಹಾಗೂ ಕಲಬುರಗಿಯಲ್ಲಿರುವ ಅಂಬೇಡ್ಕರ್ ಶಿಕ್ಷಣ ಸಂಸ್ಥೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ರಾಧಾಕೃಷ್ಣ
ರಾಧಾಕೃಷ್ಣ
ಮಲ್ಲಿಕಾರ್ಜುನ ಖರ್ಗೆ ಅವರ ಅನುಭವದಷ್ಟು ನನ್ನ ವಯಸ್ಸೂ ಆಗಿಲ್ಲ. ಹೀಗಾಗಿ ಅವರಿಗೆ ಸ್ಪರ್ಧಿಸಬೇಕು ಎಂದು ಹೇಳುವುದಿಲ್ಲ. ತಮ್ಮ ಸ್ಪರ್ಧೆಯ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ
ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಹೈಕಮಾಂಡ್ ಕಣಕ್ಕಿಳಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಈಚೆಗೆ ನಡೆದ ಸಭೆಯಲ್ಲಿ ಹೇಳಿದ್ದೇವೆ
ಅಲ್ಲಮಪ್ರಭು ಪಾಟೀಲ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT