ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಪ್ರಧಾನಿ ಮೋದಿ ಆಗಮನ: ಅದೃಷ್ಟದ ಕಲಬುರಗಿಯಿಂದ ಚುನಾವಣೆ ಅಖಾಡಕ್ಕೆ

ಖರ್ಗೆ ತವರಲ್ಲಿ ಚುನಾವಣೆ ಪ್ರಚಾರ
Published 15 ಮಾರ್ಚ್ 2024, 5:36 IST
Last Updated 15 ಮಾರ್ಚ್ 2024, 5:36 IST
ಅಕ್ಷರ ಗಾತ್ರ

ಕಲಬುರಗಿ: ‘ಕಳೆದ ಲೋಕಸಭಾ ಚುನಾವಣಾ ಪ್ರಚಾರವನ್ನು ಕಲಬುರಗಿಯಿಂದ ಶುರು ಮಾಡಿದ್ದರಿಂದ ರಾಜ್ಯದಲ್ಲಿ 25 ಸ್ಥಾನಗಳನ್ನು ಗೆದ್ದೆವು. ಈ ಬಾರಿ ಎಲ್ಲ 28 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಅದೃಷ್ಟದ ಕಲಬುರಗಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಾರೆ’ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಾಜೂಗೌಡ ಹೇಳಿದರು.

ನಾಳೆ (ಮಾರ್ಚ್‌ 16) ನಗರದ ಎನ್‌ವಿ ಮೈದಾನಕ್ಕೆ ಪ್ರಧಾನಿ ಮೋದಿ ಅವರು ಬರುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆ ಪರಿಶೀಲಿಸಿ ಮಾಧ್ಯಮಗಳ ಜತೆಗೆ ಅವರು ಮಾತನಾಡಿದರು.

‘ಮೋದಿ ಅವರು ಕಲಬುರಗಿಗೆ ಪದೇ ಪದೇ ಏಕೆ ಬರುತ್ತಾರೆ’ ಎಂಬ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜುಗೌಡ, ‘ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಮೋದಿ ಅವರಿಗೆ ಹೆಚ್ಚಿನ ಪ್ರೀತಿ ಇದೆ. ಹೀಗಾಗಿ, ಬರುತ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆ ಬಳಿಕ, ‘ಮೋದಿ ಬಂದು ಹೋದ ಬಳಿಕ ಕಾಂಗ್ರೆಸ್‌ನವರಿಗೆ ಕ್ಷೇತ್ರದಲ್ಲಿ ಅಭ್ಯರ್ಥಿಯೇ ಸಿಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮಧ್ಯಾಹ್ನ 1ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ತಲುಪುವ ಮೋದಿ, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪೊಲೀಸ್‌ ಪರೇಡ್ ಮೈದಾನಕ್ಕೆ ಬರುವರು. ಕಾರಿನಲ್ಲಿ ರೋಡ್‌ ಶೋ ಮೂಲಕ ಚುನಾವಣಾ ಪ್ರಚಾರದ ಎನ್‌ವಿ ವೇದಿಕೆಗೆ ಬಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು’ ಎಂದರು.

‘ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ, ಶಾಸಕ ಬಸವರಾಜ ಬೊಮ್ಮಾಯಿ ಸೇರಿ ಹಲವು ಮುಖಂಡರು ಪಾಲ್ಗೊಳ್ಳುವರು. ಕಲಬುರಗಿ ಹಾಗೂ ಬೀದರ್ ಲೋಕಸಭೆ ಕ್ಷೇತ್ರದಿಂದ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸುವರು’ ಎಂದು ವಿವರಿಸಿದರು.

‘ಸಮಾವೇಶದ ಮೈದಾನ ಕಿರಿದಾಗಿದೆ. ನಗರ ಪ್ರವೇಶಿಸುವ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಸುಮಾರು 2,000 ಕಾರ್ಯಕರ್ತರನ್ನು ನಿಯೋಜಿಸಲಾಗುವುದು. ಯಾವುದೇ ಕುಂದುಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಹೇಳಿದರು.

ಏಕವಚನ ಪದಬಳಕೆ:

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕೆಲವು ಸಚಿವರು ಪ್ರಧಾನಿಯ ಕುರಿತು ಏಕವಚನದಲ್ಲಿ ಮಾತಾಡಿದರು. ಪಕ್ಕದ ತೆಲಂಗಾಣ ಮುಖ್ಯಮಂತ್ರಿ ಅವರು ಪ್ರಧಾನಿ ಅಣ್ಣನಿದ್ದಂತೆ ಹೇಳುವ ಮೂಲಕ ತಮ್ಮ ರಾಜ್ಯಕ್ಕೆ ಬೇಕಾದಂತಹ ಸೌಕರ್ಯಗಳನ್ನು ಪಡೆದರು. ಆದರೆ, ರಾಜ್ಯದ ಕಾಂಗ್ರೆಸಿಗರು ಅಂತಹ ನಡೆ ಪ್ರದರ್ಶಿಸಲಿಲ್ಲ. ಬದಲಿಗೆ ಕೇಂದ್ರ ಸರ್ಕಾರದ ವಿರುದ್ಧ ಹುಸಿ ಆರೋಪ, ಟೀಕೆಗಳಲ್ಲಿ ನಿರತವಾದರು’ ಎಂದು ರಾಜೂಗೌಡ ಹೇಳಿದರು.

ಇದೇ ವೇಳೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಚೇತನ್ ಆರ್., ಎಸ್‌ಪಿ ಅಕ್ಷಯ್ ಹಾಕೆ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಸೇರಿ ಇತರರು ಎನ್‌ವಿ ಮೈದಾನಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಾ.ಉಮೇಶ ಜಾಧವ, ಮಾಜಿ ಶಾಸಕರಾದ ಪಿ.ರಾಜೀವ್, ರಾಜಕುಮಾರ ಪಾಟೀಲ ತೇಲ್ಕೂರ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಅಮರನಾಥ ಪಾಟೀಲ, ಶರಣು ಮೆಡಿಕಲ್ ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಕಲಬುರಗಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎನ್‌ವಿ ಮೈದಾನಕ್ಕೆ ಗುರುವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಎಸ್‌ಪಿ ಅಕ್ಷಯ್ ಹಾಕೆ ಭೇಟಿ ನೀಡಿ ಬಿಜೆಪಿ ಮುಖಂಡರ ಜತೆ ಮಾತನಾಡಿದರು
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಕಲಬುರಗಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎನ್‌ವಿ ಮೈದಾನಕ್ಕೆ ಗುರುವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಎಸ್‌ಪಿ ಅಕ್ಷಯ್ ಹಾಕೆ ಭೇಟಿ ನೀಡಿ ಬಿಜೆಪಿ ಮುಖಂಡರ ಜತೆ ಮಾತನಾಡಿದರು
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಕಲಬುರಗಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎನ್‌ವಿ ಮೈದಾನಕ್ಕೆ ಗುರುವಾರ ಬಿಜೆಪಿ ಮುಖಂಡರ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲಿಸಿದರು
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಕಲಬುರಗಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಎನ್‌ವಿ ಮೈದಾನಕ್ಕೆ ಗುರುವಾರ ಬಿಜೆಪಿ ಮುಖಂಡರ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲಿಸಿದರು
ರಾಜೂಗೌಡ
ರಾಜೂಗೌಡ
ಚಂದು ಪಾಟೀಲ
ಚಂದು ಪಾಟೀಲ

Quote - ಮಹಾರಾಷ್ಟ್ರದಿಂದ ಭೀಮಾ ನದಿಗೆ ರಾಜ್ಯದ ಪಾಲಿನ ನೀರು ಹರಿಸುವ ಕುರಿತು ಪಕ್ಷದ ವರಿಷ್ಠರ ಮುಂದೆ ಪ್ರಸ್ತಾಪಿಸಿ ಜನರಿಗೆ ನೀರು ಸಿಗುವಂತೆ ಮಾಡಲಾಗುವುದು ರಾಜೂಗೌಡ ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿ

Quote - ಕಾರ್ಯಕ್ರಮಕ್ಕೆ ಜನರನ್ನು ಕರೆತರುವಂತೆ ಬೂತ್‌ಮಟ್ಟದ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ. ಜನದಟ್ಟಣೆ ತಡೆಗೆ ಅಲ್ಲಲ್ಲಿ ಡಿಜಿಟಲ್‌ ಸ್ಕ್ರೀನ್‌ಗಳಲ್ಲಿ ಮೋದಿ ಭಾಷಣ ಪ್ರಸಾರ ಮಾಡಲಾಗುವುದು ಚಂದು ಪಾಟೀಲ ಬಿಜೆಪಿ ನಗರ ಘಟಕದ ಅಧ್ಯಕ್ಷ

Cut-off box - ‘ಸರ್ಕಾರದ ದುಡ್ಡಲ್ಲಿ ಚುನಾವಣೆ ಪ್ರಚಾರ’ ‘ಈಚೆಗೆ ನಡೆದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸಮಾವೇಶವು ಸರ್ಕಾರದ ಕಾರ್ಯಕ್ರಮದ ಬದಲಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಚುನಾವಣಾ ಪ್ರಚಾರದಂತೆ ಬಳಕೆಯಾಯಿತು’ ಎಂದು ರಾಜೂಗೌಡ ಟೀಕಿಸಿದರು. ‘ಸರ್ಕಾರದ ಸಾಧನೆಗಳ ಬಗ್ಗೆ ಹೇಳಿಕೊಂಡರೆ ನಮ್ಮ ತಕರಾರಿಲ್ಲ. ಇಡೀ ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರೇ ತುಂಬಿದ್ದರು. ಸರ್ಕಾರದ ಸಾಧನೆ ಹೇಳುವ ಬದಲು ಮೋದಿ ಅವರನ್ನು ಬಯ್ಯುತ್ತಿದ್ದರು’ ಎಂದರು.

Cut-off box - ಹೆಲಿಕಾಪ್ಟರ್ ತಾಲೀಮು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರಕ್ಕೆ ಬರುವ ಹಿನ್ನೆಲೆಯಲ್ಲಿ ಮೋದಿ ಪ್ರಯಾಣಿಸುವ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗುರುವಾರ ಪ್ರಾಯೋಗಿಕ ಹಾರಾಟ ನಡೆಸಿತು.  ಕಲಬುರಗಿ ವಿಮಾನ ನಿಲ್ದಾಣ ಸಮಾವೇಶ ನಡೆಯುವ ಮೈದಾನ ಪರೇಡ್ ಮೈದಾನ ಸುತ್ತಲೂ ಕೆಲಹೊತ್ತು ಹಾರಾಟ ನಡೆಸಿತು. ಪರೇಡ್ ಮೈದಾನದ ಹೆಲಿಪ್ಯಾಡ್ ಸುತ್ತ ತಾಲೀಮು ನಡೆಸಿ ಇಳಿಯುವ ವೇಳೆ ದೂಳು ಎಬ್ಬಿಸಿತು. ದೂರದಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿ ದೂಳಿನಿಂದ ತಪ್ಪಿಸಿಕೊಳ್ಳಲು ಗೋಡೆ ಬದಿ ಆಶ್ರಯ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT