ಕಲಬುರಗಿ: ‘ಮಹಾತ್ಮ ಗಾಧೀಜಿ ಪ್ರತಿಪಾದಿಸಿದ್ದ ಗ್ರಾಮೋದ್ಯೋಗ ಕೈಬಿಟ್ಟಿದ್ದರಿಂದ ಸಣ್ಣ ಉದ್ಯಮಗಳು ಕಣ್ಮರೆಯಾಗಿವೆ. ಇದರಿಂದ ಗ್ರಾಮಗಳು ಬಡವಾಗಿ ನಿರುದ್ಯೋಗ ಸೃಷ್ಟಿಯಾಗಿ ಗ್ರಾಮ ಸ್ವರಾಜ್ಯ ಕಲ್ಪನೆಯೇ ನಮ್ಮಿಂದ ದೂರಾಗಿದೆ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಟೌನ್ ಹಾಲ್ ಸಮೀಪದ ಗಾಂಧಿ ಪ್ರತಿಮೆ ಬಳಿ ಬುಧವಾರ ಗಾಂಧಿ ವಿಚಾರ ವೇದಿಕೆಯು ಗಾಂಧೀಜಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಾಂಧೀಜಿ ಅವರ ಮಾನವೀಯ ಮೌಲ್ಯ ಮತ್ತು ಸೌಹಾರ್ದತೆಯ ತತ್ವಗಳು ಬಡತನ ಮತ್ತು ನಿರುದ್ಯೋಗ ನಿವಾರಣೆಯ ಮಂತ್ರ ದಂಡಗಳಾಗಿವೆ. ಗ್ರಾಮಗಳ ಉದ್ಧಾರಕ್ಕೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಗಾಂಧೀಜಿ ಅವರು ತಮ್ಮ ಪ್ರಾಣ ಬಿಡುವಾಗಲೂ ಹೇ ರಾಮ್ ಎಂದು ಉಚ್ಚರಿಸಿದ್ದರು. ಹೀಗಾಗಿ, ಅವರು ಸನಾತನ ಹಿಂದೂ ಆಗಿದ್ದರು’ ಎಂದರು.
‘ಗಾಂಧೀಜಿ ಅವರು ಎಂದಿಗೂ ಬ್ರಿಟಿಷರನ್ನು ದ್ವೇಷಿಸಲಿಲ್ಲ. ಸಂವಾದ ಮತ್ತು ಚರ್ಚೆಯಿಂದ ಸಮಸ್ಯೆಗಳನ್ನು ಬಗೆಹರಿಸಿದ್ದರು. ಸಮಾಜದ ಕಟ್ಟಡ ಕಡೆಯ ವ್ಯಕ್ತಿಗೆ ನ್ಯಾಯ ಸಿಗದೆ ಇದ್ದರೆ ಸ್ವಾತಂತ್ರ್ಯ ದೊರಕಿದ್ದರೂ ಅದು ವ್ಯರ್ಥ ಎಂಬ ಸಂದೇಶ ಸಾರಿದ್ದರು’ ಎಂದರು.
‘ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೋಮುವಾದ ಬೆಳೆಯುತ್ತಿದೆ. ದೇಶದ ಪ್ರಧಾನಿ ವಿದೇಶದಲ್ಲಿ ಗಾಂಧಿ ಎನ್ನುತ್ತಾರೆ. ದೇಶದಲ್ಲಿ ಗೋಡ್ಸೆ ಎನ್ನುತ್ತಾರೆ. ಇದನ್ನು ದೂರ ತಳ್ಳಿ ಗಾಂಧೀಜಿ ಅವರ ಪ್ರೀತಿಯ ಭಾರತ ಕಟ್ಟಬೇಕಿದೆ’ ಎಂದು ನುಡಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ‘ಜಗತ್ತಿನ ಶಾಂತಿಗೆ ಗಾಂಧೀಜಿ ತತ್ವ ಅವರ ಅವಶ್ಯವಿದೆ. ಸತ್ಯ, ಸಹಿಷ್ಣುತೆ ಮತ್ತು ವಿಶ್ವಮಾನವತೆಯ ರೂಪವಾಗಿದ್ದ ಬಾಪೂ ಅವರಿಗೆ ಪ್ರಧಾನಿ ಮತ್ತು ರಾಷ್ಟ್ರಪತಿಯಾಗುವ ಅವಕಾಶ ಒದಗಿ ಬಂದಿತ್ತು. ಅವುಗಳಿಂದ ದೂರ ಉಳಿದು ತಾವು ನಂಬಿದ್ದ ಮೌಲ್ಯವನ್ನು ಉಳಿಸಿದ್ದರು’ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಪ್ರೊ. ಆರ್.ಕೆ.ಹುಡಗಿ ಮಾತನಾಡಿ, ‘ಗಾಂಧೀಜಿಯ ಮಾತುಗಳನ್ನು ಅನುಸರಿಸಿದರೆ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ. ವಿಶ್ವದ ಮಹಾನ್ ಜ್ಞಾನಿಗಳು ಮತ್ತು ವಿಜ್ಞಾನಿಗಳು ಗಾಂಧೀಜಿ ಅವರಿಂದ ಪ್ರೇರೇಪಿತರಾಗಿದ್ದಾರೆ. ಅಸಮಾನತೆ ಮತ್ತು ಅನ್ಯಾಯ ಕಂಡಾಗ ಎದ್ದು ನಿಲ್ಲಬೇಕು’ ಎಂದರು.
ಶಂಕರ ಹೂಗಾರ ಅವರು ಗಾಂಧೀಜಿಗೆ ಪ್ರಿಯವಾದ ಗೀತೆಗಳನ್ನು ಹಾಡಿದರು. ಎಸಿಟಿ ಎನ್‌ವಿ ಶಾಲೆಯ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ ಸಂದೇಶದ ಬೀದಿ ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಪ್ರಮುಖರಾದ ಸಿದ್ರಾಮಪ್ಪ ಪಾಟೀಲ ದಂಗಾಪುರ, ರಮೇಶ ದುತ್ತರಗಿ, ಬಸವರಾಜ ಕುಮನೂರ, ರವೂಫ್ ಖಾದ್ರಿ, ಭೀಮಶೆಟ್ಟಿ ಮುಕ್ಕಾ, ನೀಲಕಂಠರಾವ ಮೂಲಗೆ, ಶ್ರೀಶೈಲ ಘೂಳಿ, ಬಸವರಾಜ ಕುಕನೂರ, ಅಶೋಕ ಘೂಳಿ, ಬಸವರಾಜ ಉಪ್ಪಿನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.