ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ‘ಅಂಗನವಾಡಿಗಳನ್ನು ಇನ್ನಷ್ಟು ಆಕರ್ಷಕ ಮಾಡಿ’

ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಕೆ
Last Updated 11 ಜನವರಿ 2022, 8:06 IST
ಅಕ್ಷರ ಗಾತ್ರ

ಕಲಬುರಗಿ: ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳಾಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯೆಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಪಾಲನೆ ಜತೆಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದ್ದರೂ ಅಂಗನವಾಡಿ ಕೆಂದ್ರಗಳು ಹಿಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಈ ಕೇಂದ್ರಗಳು ಬದಲಾಗಬೇಕು. ಸರ್ಕಾರ ಶೀಘ್ರ ಇದಕ್ಕೆ ಕ್ರಮ ಜರುಗಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷೆ ಗೌರಮ್ಮ ಪಾಟೀಲ ಹೇಳಿದರು.

ಮಹಿಳೆಯರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಂಗನವಾಡಿ ನೌಕರರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ 47.37 ಲಕ್ಷ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ತಲುಪಿಸಿದ್ದಾರೆ. ಅಲ್ಲದೆ, ಮುಂಚೂಟಿ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಾರೆ. ಹಲವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದರು.

ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ, ಅಂಗನವಾಡಿ ನೌಕರರ ವೇತನ ಮಾತ್ರ ಹೆಚ್ಚಳವಾಗಿಲ್ಲ ಎಂದರು.‌

ಅಂಗನವಾಡಿ ಕೇಂದ್ರಗಳ ವೇಳಾಪಟ್ಟಿಯಲ್ಲಿ 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಲ್ಲದೆ, ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

1995ರಿಂದ ಆರಂಭವಾಗಿರುವ ಎಲ್ಲ ಯೋಜನೆಗಳಲ್ಲಿ ಆಯ್ಕೆ ಆಗಿರುವ ಅಂಗನವಾಡಿ ಕಾರ್ಯಕರ್ತೆಯರು ಎಸ್ಸೆಸ್ಸೆಲ್ಸಿ ಪಾಸಾದವರು. ಅನೇಕರು ಪದವಿ ಪಡೆದಿದ್ದಾರೆ. ಹೀಗಾಗಿ ಅವರಿಗೆ ತರಬೇತಿ ನೀಡಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ ಐದು ಉದ್ದೇಶಗಳಿಗೆ ಬಿಟ್ಟು ಉಳಿದ ಹೆಚ್ಚುವರಿ ಕೆಲಸ ನಿರ್ಬಂಧಿಸಿ ಶಾಲಾಪೂರ್ವ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೊಸ ಶಿಕ್ಷಣ ನೀತಿಯ ಶಿಫಾರಸಿನಲ್ಲಿರುವ 3ರಿಂದ 8ನೇ ವರ್ಷದ ವರ್ಗೀಕರಣವನ್ನು ಕೈಬಿಟ್ಟು 3ರಿಂದ 6 ವರ್ಷದ ಮಕ್ಕಳು ಅಂಗನವಾಡಿಯಲ್ಲೇ ಇರುವಂತೆ ಮಾಡಬೇಕು ಎಂದರು.

ಆರು ವರ್ಷದೊಳಗಿನ ಮಕ್ಕಳಿಗೆ ಸಾರ್ವತ್ರಿಕ ಮತ್ತು ಉಚಿತ ಅನೌಪಚಾರಿಕ ಶಿಕ್ಷಣ ನೀಡಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸು ಮಾಡಿರುವ ₹339.48 ಲಕ್ಷ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಕುಟುಂಬದವರಿಗೆ ಮಗಳು ಇಲ್ಲದಿದ್ದಾಗ ಸೊಸೆಗೆ ಅವರ ಹುದ್ದೆ ನೀಡಬೇಕು. ಅನುಕಂಪದ ಆಧಾರದ ಮೇಲೆ ಕೆಲಸ ನೀಡುವಾಗ ಮಗಳ ಬದಲಿಗೆ ಸೊಸೆ ಎಂದು ಬದಲಿಸಬೇಕು. ಮೊಟ್ಟೆಯನ್ನು ಆಹಾರ ಪದಾರ್ಥಗಳ ಜತೆಗೆ ಸರಬರಾಜು ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹಣದಿಂದ ಮೊಟ್ಟೆ ವಿತರಿಸುವುದಿಲ್ಲ ಎಂದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಐಎಲ್‌ಸಿ ಶಿಫಾರಸಿನಂತೆ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ಅಂಗನವಾಡಿ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೆ ₹ 26 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕೇಂದ್ರಗಳ ಬಾಡಿಗೆಗೆ ಇರುವ ಮಾನದಂಡವನ್ನು ತೆಗೆಯಬೇಕು. ಅಯಾ ತಿಂಗಳಲ್ಲೇ ಬಾಡಿಗೆ ಬಿಡುಗಡೆ ಮಾಡಬೇಕು. ಬಿಎಲ್‌ಒ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಶಾಂತಾ ಎನ್.ಘಂಟೆ, ಮಹಾದೇವಿ ಕುಡದಳ್ಳಿ, ಹೀರಾಬಾಯಿ, ಇಂದುಮತಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT