ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮಣ್ಣಿನ ನಂಟಿನ ‘ಮಣ್ಣೆತ್ತಿನ’ ಹಬ್ಬ

Last Updated 29 ಜೂನ್ 2022, 4:27 IST
ಅಕ್ಷರ ಗಾತ್ರ

ಕಲಬುರಗಿ: ‘ಮಣ್ಣನ್ನು ನಂಬಿ ಮಣ್ಣಿಂದ ಬದುಕೇನ, ಮಣ್ಣೆನಗೆ ಮುಂದೆ ಹೊನ್ನು ಅಣ್ಣಯ್ಯ, ಮಣ್ಣೆ ಲೋಕದಲ್ಲಿ ಬೆಲೆಯುಳ್ಳದ್ದು’ ಎಂಬ ನುಡಿಯಂತೆ ಜಿಲ್ಲೆಯ ರೈತರು ಸಡಗರ-ಸಂಭ್ರಮದಿಂದ ಪ್ರತಿ ವರ್ಷ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಿಕೊಂಡು ಬರುತ್ತಿದ್ದಾರೆ.

ಜಿಲ್ಲೆಯ ಕೆಲವು ಭಾಗದಲ್ಲಿ ಮಂಗಳವಾರ ಆಚರಿಸಿದರೇ ಬಹುತೇಕ ತಾಲ್ಲೂಕುಗಳಲ್ಲಿ ಬುಧವಾರ (ಜೂನ್ 29) ಆಚರಿಸಲಾಗುತ್ತಿದೆ.

ಕಾರಹುಣ್ಣಿಮೆ ನಂತರ ಬರುವ ಮಣ್ಣಿತ್ತಿನ ಅಮಾವಾಸ್ಯೆ ಮುಂಗಾರಿನ ಆರಂಭದ ಮೊದಲ ಹಬ್ಬ. ರೈತರಿಗೆ ಬೆಳೆಯುವ ಭೂಮಿ ಎಷ್ಟು ಮುಖ್ಯವೋ ದುಡಿಯುವ ಎತ್ತುಗಳೂ ಅಷ್ಟೇ ಮುಖ್ಯ. ಕೃಷಿ ಚಟುವಟಿಕೆಗಳು ಗರಿಗೆದರುವ ಕಾಲದಲ್ಲಿ ಮಣ್ಣಿನ ಎತ್ತುಗಳನ್ನು ಮಾಡಿ ಭಕ್ತಿಯಿಂದ ಅವುಗಳನ್ನು ಪೂಜಿಸಿ ಧನ್ಯರಾಗುತ್ತಾರೆ. ಜತೆಗೆ ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸುವರು.

ಮುಂಗಾರಿನ ಆರಂಭದ ಮಳೆಗೆ ಜಿಗುಟಾದ ಮಣ್ಣನ್ನು ತಂದು ಹದ ಮಾಡಿ, ಎರಡು ಎತ್ತು ಮತ್ತು ಒಂದು ನೀರು ಕುಡಿಯುವ ಕುಡತಿ ಮಾಡುತ್ತಾರೆ. ಎತ್ತುಗಳಿಗೆ ಗುಲಗಂಜಿ, ಜೋಳದ ಕಾಳುಗಳು, ಇತರ ಧಾನ್ಯಗಳನ್ನು ಮೆತ್ತಿ ಸಿಂಗರಿಸುತ್ತಾರೆ.

‘ಕುಂಬಾರರ ಮನೆಯಿಂದ ತಂದ ಮಣ್ಣೆತ್ತುಗಳನ್ನು ಮನೆಯ ದೇವರ ಜಗಲಿ ಮೇಲಿಟ್ಟುಅವುಗಳಿಗೆ ಕುಂಕುಮ, ಅರಿಸಿಣದ ಬೊಟ್ಟು ಇಟ್ಟು, ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಮಕ್ಕಳಾದಿಯಾಗಿ ಹಿರಿಯರೆಲ್ಲರೂ ಪೂಜಿಸುವರು. ನಂತರ ಅನ್ನ, ಪಲ್ಯದ ನೈವೇದ್ಯ ಸಮರ್ಪಿಸಲಾಗುತ್ತದೆ. ಆ ಬಳಿಕ ಜೀವಂತ ಎತ್ತಗಳಿಗೆ ಪೂಜೆ ಸಲ್ಲಿಸಿ ಹೋಳಿಗೆ, ಕಡುಬು, ಪಲ್ಯ, ಅನ್ನವನ್ನು ಮುಷ್ಟಿ ಮಾಡಿ ಉಣಿಸುವುದು ಈ ಹಬ್ಬದ ವಿಶೇಷ’ ಎನ್ನುತ್ತಾರೆ ರೈತ ಸಾಬಣ್ಣ ಮಹಾದೇವಪ್ಪ ಸುಗ್ಗ.

ಪೂಜೆಯ ಬಳಿಕ ಕೆಲವು ಗ್ರಾಮಗಳಲ್ಲಿ ಮಣ್ಣೆತ್ತುಗಳನ್ನು ಬಾವಿ, ಕೆರೆ, ಹಳ್ಳದಲ್ಲಿ ಹಾಕಲಾಗುತ್ತದೆ. ಮತ್ತೆ ಕೆಲವು ಗ್ರಾಮಗಳ ರೈತರು ಅವುಗಳನ್ನು ಮರುದಿನ ಹೊಲದಲ್ಲಿ ಇರಿಸಿ, ಮುರಿಯದ ಹಾಗೆಯೇ ಮಳೆಯಿಂದ ಕರಗಿ ಹೋಗುವಂತೆ ನೋಡಿಕೊಳ್ಳುತ್ತಾರೆ. ಈ ಮೂಲಕ ಮಣ್ಣಲ್ಲಿ ಬೇರೆತ ಎತ್ತು ಹೊಲದಿಂದ ಸಮೃದ್ಧ ಬೆಳೆ ತರುವಂತೆ ಆಗಲಿ ಎಂಬುದು ರೈತರ ಆಶಯ.

ಎತ್ತುಗಳ ರೂಪದಲ್ಲಿ ಭೂಮಿ ಪೂಜೆ

ಎತ್ತುಗಳಿಗೆ ಪೂಜಿಸಿ ಕೃತಜ್ಞತೆ ತೋರಿದ ರೈತರು ಮಣ್ಣನ್ನು (ಭೂಮಿ) ಎತ್ತುಗಳ ರೂಪದಲ್ಲಿ ಪೂಜಿಸಿದಂತೆ ಕಂಡುಬರುತ್ತದೆ.ಪೂಜೆಯ ಬಳಿಕ ಹೊಲದಲ್ಲಿ ಇರಿಸಿ ಮಣ್ಣಿನೊಂದಿಗೆ ವಿಲೀನ ಮಾಡಲಾಗುತ್ತದೆ.

ಮಣ್ಣಿತ್ತಿನ ಆಚರಣೆಯ ಜೊತೆಗೆ ಕುಂಬಾರರ ಕಲಾತ್ಮಕ ಶೈಲಿಯನ್ನು ಬೆಳೆಸಿ, ಅವರನ್ನು ಪ್ರೋತ್ಸಾಹಿಸುವಂತಹ ಆಚರಣೆ. ಹುತ್ತದ ಮಣ್ಣು, ಗುಡ್ಡದ ಕೆಂಪು,ಜಿಗುಟಾ ಮಣ್ಣಿನಿಂದ ಕೂಡಿದ ಕೆಸರು ತಂದು ಎತ್ತು, ಆಕಳು, ಕರುಗಳನ್ನು ತಯಾರಿಸಲಾಗುತ್ತದೆ.

ನಗರದಲ್ಲಿ ಪಿಒಪಿ ಎತ್ತುಗಳ ಮಾರಾಟ

ಗ್ರಾಮೀಣ ಭಾಗದಲ್ಲಿ ಕುಂಬಾರರು ಮಾಡಿದ ಜೋಡಿ ಮಣ್ಣೆತ್ತುಗಳನ್ನು ರೈತರು ಜೋಳ, ತೊಗರಿ, ಸಜ್ಜೆ, ಕಡಲೆ, ಅಕ್ಕಿ ಕೊಟ್ಟು ಖರೀದಿಸುವುದು ವಾಡಿಕೆ. ಆದರೆ, ನಗರದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಎತ್ತುಗಳ ಮಾರಾಟ ಜೋರಾಗಿ ನಡೆಯುತ್ತಿದೆ.

ಶರಣಬಸವೇಶ್ವರ ದೇವಸ್ಥಾನ ರಸ್ತೆ, ಮಾರುಕಟ್ಟೆ ಸೇರಿದಂತೆ ನಗರದ ಹಲವು ರಸ್ತೆಗಳ ಬದಿಯಲ್ಲಿ ವರ್ತಕತರು ಮಾರಾಟ ಮಾಡುತ್ತಿದ್ದಾರೆ. ಪಿಒಪಿಯ ಜೋಡಿ ಎತ್ತುಗಳಿಗೆ ಗಾತ್ರ ಆಧರಿಸಿ ₹100ರಿಂದ ₹1,500 ವರೆಗೂ ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT