ಶುಕ್ರವಾರ, ಜುಲೈ 30, 2021
21 °C
ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆಗೆ ಆದ್ಯತೆ; ಈಗಾಗಲೇ ಶೇ 50ರಷ್ಟು ಸಾಧನೆ

ಕಲಬುರ್ಗಿ: ಕಾಲೇಜು ಪ್ರಾಚಾರ್ಯರಿಗೆ ಲಸಿಕೆಯ ಹೊಣೆ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಲಸಿಕೆ ನೀಡಿದ ಬಳಿಕವೇ ಸೆಮಿಸ್ಟರ್ ಪರೀಕ್ಷೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಲಸಿಕೆ ಕೊಡಿಸುವಲ್ಲಿ ಸಮನ್ವಯ ಸಾಧಿಸಲು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಅವರು ಆಯಾ ಕಾಲೇಜುಗಳ ಪ್ರಾಚಾರ್ಯರಿಗೆ ಇದರ ಹೊಣೆ ಹೊರಿಸಿದ್ದಾರೆ.

ವಿಶ್ವವಿದ್ಯಾಲಯದ ಆವರಣ ಹಾಗೂ ವಿವಿಧ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಲಸಿಕೆ ಕೊಡಿಸಲು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಪ್ರೊ. ರಮೇಶ ಲಂಡನಕರ್ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಸಿದ್ದಪ್ಪ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಈಗಾಗಲೇ ಶೇ 50ರಷ್ಟು ವಿದ್ಯಾರ್ಥಿಗಳು ಹಾಗೂ ಶೇ 70ರಷ್ಟು ಸಿಬ್ಬಂದಿಗೆ ಕೋವಿಡ್ ಲಸಿಕೆಯನ್ನು ಕೊಡಲಾಗಿದೆ. ಶೇ 100ರಷ್ಟು ಗುರಿ ಸಾಧಿಸಿದ ಬಳಿಕ ವಿಶ್ವವಿದ್ಯಾಲಯದ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಬೀದರ್‌ನಲ್ಲಿ ಹೆಚ್ಚು: ಬೀದರ್‌ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಶೇ 60ರಷ್ಟು ಹಾಗೂ ಸಿಬ್ಬಂದಿಗೆ ಶೇ 75ರಷ್ಟು ಲಸಿಕೆಯನ್ನು ನೀಡಲಾಗಿದೆ. ಕಲಬುರ್ಗಿಯಲ್ಲಿ ಈ ಪ್ರಮಾಣ ಕೊಂಚ ಕಡಿಮೆ ಇದೆ.

ನಿತ್ಯ ತಮ್ಮ ಸಮೀಪದ ನಗರ ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಲಭ್ಯವಿರುವ ಲಸಿಕೆಯ ಮಾಹಿತಿ ಪಡೆದು ಅಷ್ಟು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ನಿಗದಿತ ಸ್ಥಳದಲ್ಲಿ ಸಾಧಿಸುವುದು ಆಯಾ ಪ್ರಾಚಾರ್ಯರ ಹೊಣೆ. ಅದರ ಮಾಹಿತಿಯನ್ನು ನಿತ್ಯ ವಿ.ವಿ. ಕುಲಸಚಿವರೊಂದಿಗೆ ಹಂಚಿಕೊಳ್ಳುವಂತೆ ತಿಳಿಸಲಾಗಿದೆ. ಲಸಿಕೆ ನೀಡುವುದಕ್ಕಿಂತ ಮುಂಚೆಯೇ ಪರೀಕ್ಷೆ ನಡೆಸಿರುವ ಪ್ರಯತ್ನಕ್ಕೆ ವಿದ್ಯಾರ್ಥಿಗಳಿಂದ ಪ್ರತಿರೋಧ ವ್ಯಕ್ತವಾಗಿದ್ದರಿಂದ ವಿಶ್ವವಿದ್ಯಾಲಯವು ಸಂಪೂರ್ಣ ಲಸಿಕಾ ಅಭಿಯಾನದತ್ತ ಗಮನ ಹರಿಸಿದೆ.

‘ಉನ್ನತ ಶಿಕ್ಷಣ ಇಲಾಖೆಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಸಂಪೂರ್ಣ ಲಸಿಕೆ ನೀಡಲು ಸೂಚಿಸಿದೆ. ಹೀಗಾಗಿ, ನಾವು ಪರೀಕ್ಷೆಯ ಎರಡನೇ ಆದ್ಯತೆಯನ್ನಾಗಿ ಪರಿಗಣಿಸಿದ್ದೇವೆ. ಯುದ್ಧೋಪಾದಿಯಲ್ಲಿ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗೆ ಬರುವ ಲಸಿಕೆಯ ಒಂದು ಭಾಗ ವಿದ್ಯಾರ್ಥಿಗಳಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಕೋರಲಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೆಮಿಸ್ಟರ್ ಪರೀಕ್ಷೆ ಬರೆಯಲಿರುವ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆ ಅಂದಾಜು 7 ಸಾವಿರ ಇದೆ. ಈಗಾಗಲೇ 3,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಎಲ್ಲರಿಗೂ ಲಸಿಕೆ ಸಿಕ್ಕ ನಂತರ ಇಲಾಖೆಯ ನಿರ್ದೇಶನದ ಅನುಸಾರ ಪರೀಕ್ಷೆಯ ದಿನಾಂಕ ಪ್ರಕಟಿಸುತ್ತೇವೆ’ ಎಂದರು.

‘ವಿಶ್ವವಿದ್ಯಾಲಯದ ಆವರಣದಲ್ಲಿ ಈಗಾಗಲೇ ಎರಡು ಬಾರಿ ಲಸಿಕಾ ಅಭಿಯಾನವನ್ನು ನಡೆಸಲಾಗಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಆಯಾ ವಿಭಾಗ ಮುಖ್ಯಸ್ಥರ ಮೂಲಕ ಮಾಹಿತಿ ನೀಡಿ ಕರೆಸಿಕೊಳ್ಳುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ನವೆಂಬರ್‌ನಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭ
ಸೆಮಿಸ್ಟರ್ ಪರೀಕ್ಷೆ ಆರಂಭಕ್ಕೂ ಮುನ್ನ ಆಫ್‌ಲೈನ್‌ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಪಠ್ಯಕ್ರಮ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿಗೆ ರಜೆಯನ್ನು ನೀಡಲಾಗುವುದು. ನಂತರ ಪರೀಕ್ಷೆ ನಡೆಸಲಾಗುತ್ತದೆ. ಪರಸ್ಪರ ಅಂತರ ಕಾಪಾಡಿಕೊಂಡು ಪರೀಕ್ಷೆ ನಡೆಸುವ ಬಗ್ಗೆ ಚಿಂತನೆಗಳು ನಡೆದಿವೆ. ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ನವೆಂಬರ್‌ನಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಕುರಿತು ಪರಿಶೀಲನೆ ನಡೆಸಿದ್ದೇವೆ ಎಂದು ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು