ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳಲ್ಲಿದೆ ಸಮಾನತೆ ಸಂದೇಶ; ಎ‌ಸ್‌.ಕೆ. ಕಾಂತಾ

Last Updated 20 ಮಾರ್ಚ್ 2023, 7:08 IST
ಅಕ್ಷರ ಗಾತ್ರ

ಕಲಬುರಗಿ: ‘ಶರಣರ ವಚನಗಳ ಅಧ್ಯಯನ ಮಾಡಿದರೆ ಮೇಲು–ಕೀಳು, ಕನಿಷ್ಠ–ಶ್ರೇಷ್ಠ, ಬಡವ–ಬಲ್ಲಿದ ಎಂಬ ಭೇದಭಾವ ಬರುವುದಿಲ್ಲ. ಬದಲಿಗೆ ಮಾನವರೆಲ್ಲರೂ ಸಮಾನರು ಎಂಬ ಭಾವ ಮೂಡುತ್ತದೆ’ ಎಂದು ಮಾಜಿ ಸಚಿವ ಎ‌ಸ್‌.ಕೆ. ಕಾಂತಾ ಅಭಿಪ್ರಾಯಪಟ್ಟರು.

ಇಲ್ಲಿನ ಬಸವ ಮಂಟಪದಲ್ಲಿ ಭಾನುವಾರ ರಾಷ್ಟ್ರೀಯ ಬಸವದಳ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕ ಮಹಿಳಾ ಗಣ ಆಯೋಜಿಸಿದ್ದ ಡಾ. ಮಾತೆ ಮಹಾದೇವಿ ಅವರ 77ನೇ ಜಯಂತಿ ಹಾಗೂ 4ನೇ ಲಿಂಗೈಕ್ಯ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಚನಗಳ ಜ್ಞಾನ ಇರುವಲ್ಲಿ ಮೂಢನಂಬಿಕೆಗೆ ಸ್ಥಳಾವಕಾಶ ಇಲ್ಲ. ಅತಿಯಾದ ಸಂಪತ್ತು ಹೊಂದಬಾರದು, ಯಾರನ್ನೂ ಶೋಷಣೆ ಮಾಡಬಾರದು ಎಂಬ ಉದಾತ್ತೆಯನ್ನು ಬೋಧಿಸುತ್ತವೆ’ ಎಂದರು.

‘ಶರಣು ಎಂದರೆ ಸತ್ಯಕ್ಕೆ ತಲೆ ಬಾಗು, ಸತ್ಯಕ್ಕೆ ಶರಣಾಗು ಎಂದರ್ಥ. ಶರಣರು ಸತ್ಯದ ಹಾದಿಯಲ್ಲಿ ನಡೆದು ಸಾಮಾಜಿಕ ಕ್ರಾಂತಿ ಮಾಡಿದರು. ಮಕ್ಕಳು ಕೂಡ ಅದೇ ಹಾದಿಯಲ್ಲಿ ನಿಷ್ಠೆಯಿಂದ ನಡೆಯಬೇಕು’ ಎಂದು ಸಲಹೆ ನೀಡಿದರು.

‘ದ್ರಾವಿಡ ಪರಂಪರೆಯ ನಮ್ಮ ಸಂಸ್ಕೃತಿಯನ್ನು ಆರ್ಯರ ಆಕ್ರಮಣದಿಂದ ಮೂಲ ಸಿದ್ಧಾಂತಗಳನ್ನು ಮರೆತಿದ್ದೇವೆ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಮಾಡಬೇಕು. ಇನ್ನೊಬ್ಬರಿಗೆ ಮಾದರಿ ಆಗುವಂತಹ ಶರಣ ತತ್ವಗಳಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕು’ ಎಂದು ಆಶಿಸಿದರು.

‘ಮನೆ ಕಟ್ಟಲು ಕಾರ್ಮಿಕರು ಬೇಕು. ಅದನ್ನು ಚೆಂದವಾಗಿಸಲು ಕಾರ್ಮಿಕರು ಬೇಕು. ಆದರೆ, ಮನೆಯಲ್ಲಿ ಪ್ರಥಮ ಪೂಜೆ ಸ್ವಾಮೀಜಿಗಳಿಗೆ ಮಾಡುವ ಮೂಲಕ ಆರ್ಯರ ತತ್ವಗಳನ್ನು ಅಳವಡಿಸಿಕೊಂಡು ಹೋಗುತ್ತಿದ್ದೇವೆ. ಇಂತಹ ಪದ್ಧತಿಗಳಿಗೆ ವಿರಾಮ ಹಾಕಬೇಕಿದೆ’ ಎಂದರು.

‘ಮಾತೆ ಮಹಾದೇವಿ ಹಾಗೂ ಲಿಂಗಾನಂದ ಸ್ವಾಮೀಜಿಗಳು ಪ್ರಗತಿಪರ ವಿಚಾರಗಳನ್ನು ಪಾಲಿಸುವ ಮೂಲಕ ಜನರಲ್ಲಿ ಅವುಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸಿದ್ದರು. ಮಾತೆ ಮಹಾದೇವಿ ಅವರು ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದ ಉದ್ದಕ್ಕೂ ಪಾಲಿಸಿಕೊಂಡು ಬಂದರು’ ಎಂದು ಹೇಳಿದರು.

ಬಸವತತ್ವ ಚಿಂತಕ ವಿಶ್ವರಾಧ್ಯ ಸತ್ಯಂಪೇಟ ಮಾತನಾಡಿ, ‘ಬಸವಣ್ಣ ಅವರ ತತ್ವ ಮತ್ತು ಸಂದೇಶಗಳು ಕೇವಲ ಬಾಯಿ ಮಾತಿಗೆ ಸೀಮಿತವಾಗಿವೆ. ಇದನ್ನು ಕೊನೆಗಾಣಿಸಲು ಎಲ್ಲ ಶರಣರ ಮತ್ತು ಬಸವ ತತ್ವವನ್ನು ಮೈಗೂಡಿಸಿಕೊಳ್ಳುವ ಮೂಲಕ ಬಸವಣ್ಣನವರು ಕಂಡಿದ್ದ ಸಮಾನತೆಯ ಸಮಾಜ ಕಟ್ಟಬೇಕಿದೆ’ ಎಂದರು.

ಮಾಜಿ ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ ರೇವೂರ ಅವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಸುರೇಖಾ ನಿಂಬೆಣಪ್ಪ ಕೋರವಾರ, ಸುಧಾ ಚಂದ್ರಶೇಖರ ಅವರು ಬಸವಣ್ಣನವರ ಪೂಜೆ ನೆರವೇರಿಸಿದರು. ವಾಣಿಶ್ರೀ ಹಾಗೂ ಶ್ರೇಯಾ ವಚನ ನೃತ್ಯ ಗಾಯನ ಪ್ರದರ್ಶಿಸಿದರು.

ಬಸವಕಲ್ಯಾಣ ಮಹಾಮನೆ ಗುಣತೀರ್ಥದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಅಧಿಕಾರಿ ಎಸ್.ದಿವಾಕರ, ಸಾಹಿತಿ ಮಹಾಂತೇಶ ಕುಂಬಾರ, ರಾಜ್ಯ ಲಿಂಗಾಯತ ಸಾರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಗಮನಾಥ ರಬಶೆಟ್ಟಿ, ಕವಿತಾ ಶಿವನಾಗಪ್ಪ ಪಾಟೀಲ, ರಾಷ್ಟ್ರೀಯ ಬಸವದಳದ ನಾಗೇಂದ್ರಪ್ಪ ಎಸ್.ನಿಂಬರ್ಗಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಶಿವರಾಜ ಪಾಟೀಲ, ಅಶೋಕ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ರೇವಣಪ್ಪ ಹೆಗಣಿ, ಅಯ್ಯನಗೌಡ ಪಾಟೀಲ, ಶಾಂತಪ್ಪ ಪಾಟೀಲ, ಸತೀಶ್ ಸಜ್ಜನ್, ಸುನೀಲ್ ಹುಡುಗಿ, ಮಹಾಂತೇಶ್ ಕಲಬುರಗಿ, ಚಂದ್ರಶೇಖರ ಮಲ್ಲಾಬಾದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT