ಮಂಗಳವಾರ, ಜೂನ್ 28, 2022
27 °C
ಜಿಲ್ಲೆಯ ವೈದ್ಯರಿಗೆ ಸಚಿವ ಮುರುಗೇಶ ನಿರಾಣಿ ನಿರ್ದೇಶನ, ಗ್ರಾಮೀಣರಲ್ಲಿ ಭರವಸೆ ಮೂಡಿಸಲು ಸಲಹೆ

ವೈದ್ಯರು ಹಳ್ಳಿಗಳಿಗೇ ಹೋಗಿ ಚಿಕಿತ್ಸೆ ನೀಡಿ: ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಕೋವಿಡ್‌ ಬಗ್ಗೆ ಭಯದ ವಾತಾವರಣ ಮೂಡಿದ್ದರಿಂದಲೇ ಹಳ್ಳಿಯ ಜನರು ಹೆಚ್ಚಾಗಿ ಚಿಕಿತ್ಸೆಗೆ ಬರುತ್ತಿಲ್ಲ. ಕಾರಣ ವೈದ್ಯರ ತಂಡ ಹಳ್ಳಿಗೆ ಹೋಗಿ ತಪಾಸಣೆ ಮಾಡಿ, ಜನರಿಗೆ ಚಿಕಿತ್ಸೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನಿಂದ ಶುಕ್ರವಾರ ಝೂಮ್ ಮೀಟ್ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್‌ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು.

‘ಗ್ರಾಮೀಣ ಜನರಲ್ಲಿ ಭಯ ನಿವಾರಿಸಿ, ಆತ್ಮಸ್ಥೈರ್ಯ ತುಂಬಬೇಕಾದ ಅವಶ್ಯಕತೆ ಈಗ ಹೆಚ್ಚಿದೆ. ಸರ್ಕಾರವು 18ರಿಂದ 44 ವಯಸ್ಸಿನ ಆದ್ಯತಾ ಗುಂಪೆಂದು ಪರಿಗಣಿಸಿರುವ ಎಲ್ಲರಿಗೂ ಕೋವಿಡ್ ಲಸಿಕೆ ನೀಡಬೇಕು. ಅದರ ಬಗ್ಗೆ ಅಗತ್ಯ ಅರಿವು ಮೂಡಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದ ನಿರ್ವಹಣೆ ಕಾರ್ಯಕ್ಕೆ ಲಭ್ಯವಿರುವ ಡಿ.ಎಂ.ಎಫ್. ನಿಧಿಯಲ್ಲಿ ಶೇ 33ರಷ್ಟು ಅನುದಾನ ಬಳಸಿಕೊಳ್ಳಬೇಕು. ಈ ಅನುದಾನದಲ್ಲಿ ಜಿಲ್ಲೆಯಲ್ಲಿ ಆಮ್ಲಜನಕ ಘಟಕ ಸ್ಥಾಪನೆ, ಔಷಧಿ, ವೈದ್ಯಕೀಯ ಉಪಕರಣಗಳ ಖರೀದಿಗೆ ಮುಂದಾಗಬೇಕು’ ಎಂದು ಸಚಿವರು ತಿಳಿಸಿದರು.

‘ಲಾಕ್‌ಡೌನ್ ಕಾರಣ ಜನರು ನಗರದಿಂದ ಹಳ್ಳಿಗಳಿಗೆ ವಾಪಸ್ಸಾಗಿದ್ದು, ಅವರಿಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ನಿರ್ದೇಶಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾತನಾಡಿ, ‘ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಸಿದ್ಧತೆ ಆರಂಭಿಸಿದ್ದು, ತಜ್ಞರ ಸಭೆ ಕರೆದು ಅಗತ್ಯ ಸಲಹೆಗಳನ್ನು ಪಡೆಯಲಾಗಿದೆ. ಜಿಲ್ಲೆಯಲ್ಲಿ 0-6 ವಯಸ್ಸಿನ 3.6 ಲಕ್ಷ, 7-11 ವಯಸ್ಸಿನ 2.8 ಲಕ್ಷ ಹಾಗೂ 12-14 ವಯಸ್ಸಿನ 1.64 ಲಕ್ಷ ಮಕ್ಕಳಿದ್ದು, ಇವರ ಬಗ್ಗೆ ನಾವು ಹೆಚ್ಚಿನ ಗಮನಹರಿಸಬೇಕಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಈಗಿರುವ 50 ಆಮ್ಲಜನಕದ ಹಾಸಿಗೆಯನ್ನು 100ಕ್ಕೆ ಹೆಚ್ಚಿಸಲಾಗುತ್ತಿದೆ. ಇದರಲ್ಲಿ 30 ಮಕ್ಕಳಿಗೆ ಮೀಸಲಿಟ್ಟು, ಅದರಲ್ಲಿ 5 ಐಸಿಯು ಹಾಸಿಗಳನ್ನಾಗಿ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ಆಮ್ಲಜನಕ ಪ್ಲಾಂಟ್ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಸಚಿವರ ಗಮನಕ್ಕೆ ತಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಪ್ರಿಯಾಂಕ್‌ ಖರ್ಗೆ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ. ನಮೋಶಿ, ಬಿ.ಜಿ.ಪಾಟೀಲ ಅವರೂ ಮಾತನಾಡಿದರು. ಶಾಸಕಿ ಕನೀಜ್ ಫಾತಿಮಾ, ಜಿಮ್ಸ್‌, ಇಎಸ್‌ಐಸಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು