ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸಭೆಯಲ್ಲಿ ಮಾರ್ದನಿಸಿದ ಬೀಜ, ಗೊಬ್ಬರ ಅಭಾವ

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ಪ್ರಸಕ್ತ ವರ್ಷದ ಮೊದಲ ಕೆಡಿಪಿ ಸಭೆ
Last Updated 24 ಜೂನ್ 2021, 5:21 IST
ಅಕ್ಷರ ಗಾತ್ರ

ಕಲಬುರ್ಗಿ: ಮುಂಗಾರು ಹಂಗಾಮು ಶುರುವಾಗಿ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದರೂ ರೈತರಿಗೆ ಅಗತ್ಯವಿರುವಷ್ಟು ಬೀಜ, ಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಬಗ್ಗೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು.

ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ಪಕ್ಷಾತೀತವಾಗಿ ಈ ವಿಚಾರವನ್ನು ವಿಸ್ತೃತವಾಗಿ ಚರ್ಚಿಸಿದರು. ಸೋಯಾ ಬೀಜದ ಬೇಡಿಕೆ ಜಿಲ್ಲೆಯಲ್ಲಿ 10 ಸಾವಿರ ಕ್ವಿಂಟಲ್ ಬೇಡಿಕೆ ಇದ್ದರೂ ಕೇವಲ 4 ಸಾವಿರ ಕ್ವಿಂಟಲ್ ಪೂರೈಕೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸೂಗುರ ಅವರು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಕ್ಷಣ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಫೋನ್ ಕರೆ ಮಾಡಿ ಜಿಲ್ಲೆಯಲ್ಲಿನ ಬೀಜದ ಅಭಾವದ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು. ಸಚಿವರ ಮಾತನ್ನು ಆಲಿಸಿ ಅಸಹಾಯಕತೆ ವ್ಯಕ್ತಪಡಿಸಿದ ಬಳಿಕ ನಿರಾಣಿ, ಬೇರೆ ಬೀಜಗಳನ್ನು ಬಿತ್ತನೆ ಮಾಡಲು 10 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಈ ಕುರಿತು ವಾಹನಗಳ ಮೂಲಕ ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡಬೇಕು. ಸೋಯಾಬೀನ್ ಬೆಳೆಗೆ ಪರ್ಯಾಯ ಬೆಳೆ ಬೆಳೆಯುವಂತೆ ರೈತರಿಗೆ ತಿಳಿಹೇಳಿ ಅವರ ಮನವೊಲಿಸಬೇಕು ಎಂದು ಅವರಿಗೆ ಸಲಹೆ ನೀಡಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ. ಅಜಯ್ ಸಿಂಗ್, ‘ಜಿಲ್ಲೆಯಲ್ಲಿ ಬೀಜ, ಗೊಬ್ಬರದ ಅಭಾವ ತೀವ್ರವಾಗಿದ್ದು, ಬೀಜ, ಗೊಬ್ಬರ ದಾಸ್ತಾನು ಮುಗಿದಿದೆ ಎಂಬ ಫಲಕ ಅಳವಡಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಇದಕ್ಕೆ ದನಿಗೂಡಿಸಿದ ಶಾಸಕ ಪ್ರಿಯಾಂಕ್ ಖರ್ಗೆ, ‘ರೈತರು ಕೇಳಿದಷ್ಟು ಬೀಜಗಳನ್ನು ಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬೀಜ, ಗೊಬ್ಬರದ ಅಭಾವ ಎದುರಾಗಿದ್ದರಿಂದ ಉದ್ರಿಕ್ತ ರೈತರು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಹಾನಿಗೊಳಿಸಿದ್ದಾರೆ. ಆ ಪರಿಸ್ಥಿತಿ ಕಲಬುರ್ಗಿ ಜಿಲ್ಲೆಯಲ್ಲಿಯೂ ಎದುರಾಗಬಹುದು’ ಎಂದು ಎಚ್ಚರಿಸಿದರು.

‘ಮೂರು ವರ್ಷದ ಹಿಂದೆ ಅಂದಿನ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಬಿಡುಗಡೆಯಾದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಬಳಕೆ ಮಾಡದೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನೇ ಪೂರ್ಣಗೊಳಿಸದ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರನ್ನು ಆಗ್ರಹಿಸಿದರು.

ಸಭೆಯಲ್ಲಿದ್ದ ಅಧಿಕಾರಿಗಳು ಟೆಂಡರ್ ತೆರೆದಿಲ್ಲ. ಕಾಮಗಾರಿಯ ಟೆಂಡರ್ ಬದಲಿಸಲು ಸಂಸದ ಡಾ. ಉಮೇಶ ಜಾಧವ ಅವರು ಮೌಖಿಕ ಸೂಚನೆ ನೀಡಿದ್ದರಿಂದ ಮುಂದಿನ ಪ್ರಕ್ರಿಯೆಗಾಗಿ ನಿರ್ದೇಶನ ನೀಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ಮಧ್ಯ ಪ್ರವೇಶಿಸಿದ ಸಚಿವರು ಈ ಕೂಡಲೇ, ಟೆಂಡರ್ ತೆರೆದು ಕಾಮಗಾರಿಗಳನ್ನು ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಶಾಸಕರಾದ ಬಸವರಾಜ ‌ಮತ್ತಿಮೂಡ, ಕನೀಜ್ ಫಾತಿಮಾ, ಶಶೀಲ್ ನಮೋಶಿ, ಬಿ.ಜಿ. ಪಾಟೀಲ, ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ, ಜಿ.ಪಂ. ಸಿಇಓ ಡಾ. ದಿಲೀಷ್ ಶಶಿ, ಕಲಬುರ್ಗಿ ಪೊಲೀಸ್ ‌ಕಮಿಷನರ್ ಡಾ.ವೈ.ಎಸ್. ರವಿಕುಮಾರ್, ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಕೃಷ್ಣಾ ಕಾಡಾ‌ ಅಧ್ಯಕ್ಷ ‌ಶರಣಪ್ಪ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗರೆಡ್ಡಿಗೌಡ ಬಾಸರೆಡ್ಡಿ ಇದ್ದರು.

ಶಿಷ್ಟಾಚಾರ ಲೋಪ; ಕ್ಷಮೆ ಕೋರಿದ ನಿರಾಣಿ
ಶಿಷ್ಟಾಚಾರ ಪಾಲನೆಯಲ್ಲಿ ಲೋಪವೆಸಗಿದ ಬಗ್ಗೆ ಶಾಸಕರಾದ ಎಂ.ವೈ. ಪಾಟೀಲ, ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ ಕೂಡಲೇ ಸಚಿವ ಮುರುಗೇಶ ನಿರಾಣಿ ಅಧಿಕಾರಿಗಳ ಪರವಾಗಿ ಶಾಸಕರ ಕ್ಷಮೆ ಕೋರಿದರು. ಮುಂದೆ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿಯೂ ತಿಳಿಸಿದರು.

ಕಲಬುರ್ಗಿಯಲ್ಲಿ ಲಸಿಕೆ ದಾಸ್ತಾನು ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕಿ ಕನೀಜ್ ಫಾತಿಮಾ ಅವರನ್ನು ಆಹ್ವಾನಿಸಿಲ್ಲ. ಕೆಡಿಪಿ ಸಭೆಯ ವೇದಿಕೆಯ ಮೇಲೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಅವರನ್ನು ಆಹ್ವಾನಿಸಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಪ್ರಿಯಾಂಕ್ ಖರ್ಗೆ, ‘ಸಚಿವರೇ ನೀವು ಕ್ಷಮೆ ಕೇಳಬಾರದು. ಶಿಷ್ಟಾಚಾರ ನೋಡಿಕೊಳ್ಳಲೆಂದೇ ಒಬ್ಬರು ಅಧಿಕಾರಿ ಇರುತ್ತಾರಲ್ಲ. ಅವರೇನು ಕತ್ತೆ ಕಾಯುತ್ತಿದ್ದಾರಾ’ ಎಂದು ಅವರು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಜೆಸ್ಕಾಂ ಕಾರ್ಯವೈಖರಿಗೆ ತೆಲ್ಕೂರ ಆಕ್ಷೇಪ
ರೈತರ ಜಮೀನುಗಳಿಗೆ ವಿದ್ಯುತ್ ಕಂಬಗಳು, ಟಿ.ಸಿ.ಗಳ ಅಳವಡಿಕೆ ವಿಚಾರದಲ್ಲಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಕಾರ್ಯವೈಖರಿ ಬಗ್ಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಸ್ತೆ ಮಧ್ಯದಲ್ಲಿಯೇ ವಿದ್ಯುತ್ ಕಂಬಗಳನ್ನು ಹಾಕುತ್ತೀರಿ. ನಂತರ ಅದನ್ನು ಬೇರೆಡೆ ಅಳವಡಿಸಲು ಬಿಲ್ ಎತ್ತುತ್ತೀರಿ. ಅಲ್ಲಿ ರಸ್ತೆ ಬರುತ್ತದೆ ಎಂಬುದು ನಿಮ್ಮ ಗಮನಕ್ಕೆ ಇರುವುದಿಲ್ಲವೇ? ಯಾವುದೇ ಒಂದು ಯೋಜನೆಯನ್ನು ಕಾರ್ಯಗತಗೊಳಿಸುವಾಗ ಸಂಬಂಧಪಟ್ಟ ಕ್ಷೇತ್ರಗಳ ಶಾಸಕರೊಂದಿಗೆ ಚರ್ಚಿಸಬೇಕು ಎಂದು ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

ಕಂಬ, ಟಿ.ಸಿ. ಅಳವಡಿಕೆ ಮಾಡಿರಿ ಎಂದಾಗ ಹಣ ಇಲ್ಲ ಎನ್ನುತ್ತೀರಿ. ಆದರೆ ವರ್ಷಪೂರ್ತಿ ಕಂಬಗಳನ್ನು ಅಳವಡಿಸಲು ಖರೀದಿ ಮಾಡುತ್ತಲೇ ಇರುತ್ತೀರಿ. ಆ ಕಂಬಗಳು ಎಲ್ಲಿ ಹೋದವು. ಕಳೆದ ಐದು ವರ್ಷಗಳಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ವರದಿ ಸಿದ್ಧಪಡಿಸಿ ಮುಂದಿನ ಕೆಡಿಪಿ ಸಭೆಯಲ್ಲಿ ಹಾಜರುಪಡಿಸಿ ಎಂದು ತಾಕೀತು ಮಾಡಿದರು.

ಜೆಸ್ಕಾಂ ಕಾರ್ಯವೈಖರಿಯನ್ನು ಸರಿಪಡಿಸಲು ಅಧಿಕಾರಿಗಳ ವಿಶೇಷ ಸಭೆ ನಡೆಸಲು ಸಚಿವ ನಿರಾಣಿ ಅವರಿಗೆ ಮನವಿ ಮಾಡಿದರು.

ಆಕ್ರೋಶಕ್ಕೆ ಕಾರಣವಾದ ಆಸ್ತಿ ತೆರಿಗೆ ದರ ಹೆಚ್ಚಳ
ಕಲಬುರ್ಗಿ ಮಹಾನಗರ ಪಾಲಿಕೆಯು ಕಳೆದ ಮಾರ್ಚ್‌ 31ರಂದು ನಿಯಮಬಾಹಿರವಾಗಿ ಶೇ 15ರಷ್ಟು ಭಾರಿ ಪ್ರಮಾಣದ ಅಸ್ತಿ ತೆರಿಗೆ ಹೆಚ್ಚಳ ಮಾಡಿದ ಬಗ್ಗೆ ಕೆಡಿಪಿ ಸಭೆಯಲ್ಲಿ ವಿಸ್ತೃತ ಚರ್ಚೆಯಾಯಿತು.

ಹಲವು ಶಾಸಕರು ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಈಗಾಗಲೇ ಕೊರೊನಾದಿಂದ ವ್ಯಾಪಾರವಿಲ್ಲದೇ ಕಂಗಾಲಾದ ವ್ಯಾಪಾರಸ್ಥರು, ಆದಾಯವಿಲ್ಲದೇ ಸಂಕಷ್ಟಕ್ಕೀಡಾದ ಆಸ್ತಿಗಳ ಮಾಲೀಕರು ಅಷ್ಟೊಂದು ತೆರಿಗೆಯನ್ನು ಎಲ್ಲಿಂದ ಕಟ್ಟಬೇಕು. ಈಗಾಗಲೇ ಹೆಚ್ಚುವರಿಯಾಗಿ ಪಡೆದ ತೆರಿಗೆಯನ್ನು ವಾಪಸ್ ಮಾಡಿ’ ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ಆಗ ಮಧ್ಯಪ್ರವೇಶಿಸಿದ ಸಚಿವ ಮುರುಗೇಶ ನಿರಾಣಿ, ‘ಸದ್ಯಕ್ಕೆ ಶೇ 15ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿ ಸಂಗ್ರಹಿಸುತ್ತಿರುವ ತೆರಿಗೆಯನ್ನು ಸದ್ಯಕ್ಕೆ ಕೈಬಿಡಿ. ಈ ಬಗ್ಗೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳೋಣ’ ಎಂದರು.

ಶೇರಿಭಿಕನಳ್ಳಿ ತಾಂಡಾ ಪುನರ್ವಸತಿಗೆ ಕ್ರಮ
ಚಿಂಚೋಳಿ ತಾಲ್ಲೂಕಿನ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಶೇರಿಭಿಕನಳ್ಳಿ ತಾಂಡಾವನ್ನು ತಾಲ್ಲೂಕಿನ ಬೇರೆಡೆ ಸ್ಥಳಾಂತರ ಮಾಡಿ ಅಲ್ಲಿನ 48 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವುದಕ್ಕಾಗಿ ಕಂದಾಯ ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಸಚಿವ ನಿರಾಣಿ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರ, ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ. ಅವಿನಾಶ ಜಾಧವ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದರು.

ಅಲ್ಲಿನ ಜನರಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದು ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ಸುನೀಲ ವಲ್ಯಾಪುರ ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಸಂರಕ್ಷಣೆ) ಎಂ.ಎಂ. ವಾನತಿ, ‘ಚಿಂಚೋಳಿ ತಾಲ್ಲೂಕಿನಲ್ಲೇ 60 ಎಕರೆ ಜಾಗ ಬೇಕಿದೆ ಎಂದು ತಾಂಡಾ ನಿವಾಸಿಗಳು ತಿಳಿಸಿದ್ದರೆ. ಅಷ್ಟೊಂದು ಜಾಗ ಎಲ್ಲಿಯೂ ಸಿಗುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT