ಬುಧವಾರ, ನವೆಂಬರ್ 25, 2020
19 °C
ವಿಧಾನ ಪರಿಷತ್‍ನ ಈಶಾನ್ಯ ಶಿಕ್ಷಕರ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ

ನಾಳೆ ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವಿಧಾನ ಪರಿಷತ್‍ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಇದೇ 10ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ಅವರು ಮತ ಎಣಿಕೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ಬಿಜೆಪಿ ಶಶೀಲ್ ನಮೋಶಿ, ಜೆಡಿಎಸ್‌ನ ತಿಮ್ಮಯ್ಯ ಪುರ್ಲೆ, ಕನ್ನಡ ಚಳವಳಿ ವಾಟಾಳ್ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿ ಡಾ.ಚಂದ್ರಕಾಂತ ಸಿಂಗೆ ಕಣದಲ್ಲಿದ್ದು, ಒಟ್ಟು 21,437 ಮತಗಳು ಚಲಾವಣೆಯಾಗಿವೆ. ಮತ ಎಣಿಕೆಗಾಗಿ 7 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪ್ರಸಾದ್, ‘ಮತ ಎಣಿಕೆ ಮಾಡುವ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಪ್ರತಿ ಟೇಬಲ್‍ಗೆ ಒಬ್ಬ ಕೌಂಟಿಂಗ್ ಸೂಪರ್ ವೈಸರ್, ಮೂವರು ಕೌಂಟಿಂಗ್ ಅಸಿಸ್ಟೆಂಟ್ ಹಾಗೂ ಒಬ್ಬ ಡಿ ಗ್ರೂಪ್ ನೌಕರರನ್ನು ನೇಮಿಸಲಾಗಿದೆ. ಟ್ಯಾಬುಲೇಷನ್‍ಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ 120 ಸಿಬ್ಬಂದಿಯನ್ನು ಮತ ಎಣಿಕೆಗಾಗಿ ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

ಕಲಬುರ್ಗಿ ನಗರ ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್. ಅವರೊಂದಿಗೆ ಭದ್ರತೆ ಕುರಿತು ಚರ್ಚಿಸಲಾಗಿದ್ದು, ಡಿಸಿಪಿ, ಎಸಿಪಿ, ಪೊಲೀಸ್ ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್ ಸೇರಿದಂತೆ ಸುಮಾರು 100 ಮಂದಿ ಪೊಲೀಸರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಕೋವಿಡ್–19 ಪ್ರಯುಕ್ತ ಮತ ಎಣಿಕೆ ಕೇಂದ್ರದಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹಮ್ಮದ್ ಇಸಾಮದಿ ಇದ್ದರು.

ಗುವಿವಿ ಸುತ್ತ ನಿಷೇಧಾಜ್ಞೆ

ಕಲಬುರ್ಗಿ: ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ನವೆಂಬರ್ 10ರಂದು  ನಡೆಯಲಿರುವುದರಿಂದ ಅಂದು ಗುಲಬರ್ಗಾ ವಿಶ್ವವಿದ್ಯಾಲಯದ ಸುತ್ತ ಹಾಗೂ ಮತ ಎಣಿಕೆ ಕೇಂದ್ರದ ಒಳಗಡೆ ಇಂಕ್ ಪೆನ್, ಸ್ಕೆಚ್ ಪೆನ್, ಹರಿತವಾದ ಆಯುಧ, ಸ್ಫೋಟಕ ವಸ್ತುಗಳು, ಮೊಬೈಲ್, ಸಿಗರೇಟ್, ಗುಟಕಾ ಮತ್ತು ನೀರಿನ ಬಾಟಲ್‍ಗಳನ್ನು ತರುವುದನ್ನು ನಿರ್ಬಂಧಿಸಿ 144ನೇ ಕಲಂ ಅನ್ವಯ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.

ಮತ ಎಣಿಕೆ ಕಾರ್ಯ ನಡೆಯಲಿರುವುದರಿಂದ ಕಲಬುರ್ಗಿ ನಗರ ವ್ಯಾಪ್ತಿಯಲ್ಲಿ ನ 9ರ ಮಧ್ಯರಾತ್ರಿಯಿಂದ ನ 10ರ ಮಧ್ಯರಾತ್ರಿ ಎಲ್ಲಾ ತರಹದ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು