ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರ: ರಾತ್ರಿಯೂ ಮುಂದುವರಿದ ಎಣಿಕೆ; ಕಾಂಗ್ರೆಸ್ ಮುನ್ನಡೆ

Published 6 ಜೂನ್ 2024, 18:30 IST
Last Updated 6 ಜೂನ್ 2024, 18:30 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಗುರುವಾರ ಸಂಜೆ 4.30ರಿಂದ ಆರಂಭವಾಗಿದ್ದು, ರಾತ್ರಿಯೂ ಮುಂದುವರೆದಿದೆ.

ರಾತ್ರಿ 11.15ಕ್ಕೆ ಮುಕ್ತಾಯವಾದ ಮೂರನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡಾಗ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು.

ಇದೇ ಮೊದಲ ಬಾರಿಗೆ ಚಲಾವಣೆಯಾದ ಮತಗಳ ಸಂಖ್ಯೆ 1.09 ಲಕ್ಷ ದಾಟಿತ್ತು. ಬೆಳಿಗ್ಗೆ 8ಕ್ಕೆ ಸುಮಾರಿಗೆ ಸ್ಟ್ರಾಂಗ್ ರೂಮ್ ತೆರೆದರೂ ಎಲ್ಲ ಮತಗಳನ್ನು ಜೋಡಿಸಲು ಸುಮಾರು ಎಂಟು ಗಂಟೆ ಬೇಕಾಯಿತು. ಹೀಗಾಗಿ, ಸಂಜೆಯ ಬಳಿಕವೇ ಮತ ಎಣಿಕೆ ಶುರುವಾಯಿತು.

ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಹಾಗೂ ಪಕ್ಷೇತರ ಅಭ್ಯರ್ಥಿ ಎನ್. ಪ್ರತಾಪ್ ರೆಡ್ಡಿ ಅವರ ಮಧ್ಯೆ ತೀವ್ರ ಪೈಪೋಟಿ ಕಂಡು ಬಂದಿದ್ದರಿಂದ ಮೂರನೇ ಸುತ್ತಿನವರೆಗೆ ಯಾರೊಬ್ಬರೂ ಶೇ 50ರಷ್ಟು ಮತಗಳನ್ನು ಪಡೆಯಲಿಲ್ಲ. ಹೀಗಾಗಿ, ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮೂರನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ: ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ‌ಪಾಟೀಲ ಮುನ್ನಡೆ ‌ಸಾಧಿಸಿದ್ದಾರೆ.

ಚಂದ್ರಶೇಖರ ಪಾಟೀಲ ಅವರು 13,878 ಮತಗಳು ಪಡೆದಿದ್ದು, 715 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 13,163, ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 8,118 ಮತ ಪಡೆದಿದ್ದಾರೆ. 5,021 ಮತಗಳು ತಿರಸ್ಕೃತವಾಗಿದೆ. ಮೂರನೇ ಸುತ್ತಿನವರೆಗೂ 41,966 ಮತಗಳ ಎಣಿಕೆ ನಡೆದಿತ್ತು.

ಮೊದಲ ಎರಡು ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಮುನ್ನಡೆ ಸಾಧಿಸಿದ್ದರು.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 1,56,620 ಲಕ್ಷ ಮತದಾರರ ಪೈಕಿ 1,09,082 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ 56 ಸಾವಿರ ಮತದಾರರಿದ್ದರು. ಈ ಬಾರಿ ದುಪ್ಪಟ್ಟಾಗಿದ್ದರಿಂದ ಮತ ಪೆಟ್ಟಿಗೆಗಳಿಂದ ಮತಪತ್ರಗಳನ್ನು ತೆಗೆದು ಹೊಂದಿಸುವ ಪ್ರಕ್ರಿಯೆಯೇ ಸಂಜೆ 4ರವರೆಗೂ ನಡೆಯಿತು. ಸಂಜೆ 4.30ಕ್ಕೆ ಮತ ಎಣಿಕೆ ಶುರುವಾಯಿತು.

ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ನೇತೃತ್ವದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಕಲಬುರಗಿ ಫೌಜಿಯಾ ತರನ್ನುಮ್, ಯಾದಗಿರಿ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ, ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಇತರರು

ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT