ಬುಧವಾರ, ಡಿಸೆಂಬರ್ 2, 2020
24 °C
ಪುನರಾಯ್ಕೆಗೊಳ್ಳದ ಮಟ್ಟೂರ; ಮತ್ತೆ ಬಿಜೆಪಿ ತೆಕ್ಕೆಗೆ ಜಾರಿದ ಕ್ಷೇತ್ರ

ಬಿಜೆಪಿ, ಕಾಂಗ್ರೆಸ್‌ ಇಬ್ಬರ ಮತ ಸೆಳೆದ ಪುರ್ಲೆ

ಗಣೇಶ ಚಂದನಶಿವ, ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಈಶಾನ್ಯ ಶಿಕ್ಷಕರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ಮತಬುಟ್ಟಿಗೆ ಕೈಹಾಕಿದ್ದರಿಂದ ‘ಕೋಟಾ’ ತಲುಪಲು ಶಶೀಲ್‌ ನಮೋಶಿ ಪ್ರಯಾಸ ಪಡಬೇಕಾಯಿತು. ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ‌ ಅವರ ಪುನರಾಯ್ಕೆಯ ಕನಸು ನುಚ್ಚುನೂರಾಯಿತು.

ಪುರ್ಲೆ ತಂದ ಪ್ರಯಾಸ ಏನೇ ಇದ್ದರೂ ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಮತ್ತೆ ಅದೇ ಪಕ್ಷದ ತೆಕ್ಕೆಗೆ ಜಾರಿತು. ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದ ನಮೋಶಿ, ಒಂದು ಅವಧಿಯ ಬಿಡುವಿನ ನಂತರ ಈಗ ಮತ್ತೆ ನಾಲ್ಕನೇ ಅವಧಿಗೆ ಪರಿಷತ್‌ ಪ್ರವೇಶಿಸಿದರು.

ಆರಂಭದಿಂದಲೂ ಈ ಚುನಾವಣೆಯನ್ನು ಬಿಜೆಪಿಯವರು ಗಂಭೀರವಾಗಿ ಪರಿಗಣಿಸಿದ್ದರು. ಕಲಬುರ್ಗಿಗೆ ಪ್ರವಾಹದ ವೈಮಾನಿಕ ಸಮೀಕ್ಷೆಗೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಚಾರಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹಾಗೂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಮ್ಮ ಪಕ್ಷದ ಶಾಸಕರು– ಮುಖಂಡರು ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು. ಬಿಜೆಪಿ ಸಚಿವರು, ಶಾಸಕರು, ಮುಖಂಡರು– ಕಾರ್ಯಕರ್ತರು ಹಾಗೂ ಪರಿವಾದ ವ್ಯವಸ್ಥಿತ ಕೆಲಸ ನಮೋಶಿ ಅವರನ್ನು ಗೆಲುವಿನ ದಡ ಸೇರಿತು. ಅವರ ಪಕ್ಷ ಆಡಳಿತದಲ್ಲಿರುವುದೂ ಅವರಿಗೆ ನೆರವಾಯಿತು.

ಆರಂಭದಿಂದಲೂ ಕಾಂಗ್ರೆಸ್‌ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಚುನಾವಣೆ ಘೋಷಣೆಯಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇತ್ತ ಸುಳಿಯಲೇ ಇಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರವಾಹ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಮಟ್ಟೂರ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಮತ ಕೋರಿದ್ದು, ಬಿಟ್ಟರೆ ಹೆಚ್ಚಿನ ಪ್ರಚಾರ ಕೈಗೊಳ್ಳುವ ಗೋಜಿಗೆ ಹೋಗಲಿಲ್ಲ. ಸ್ಥಳೀಯ ಕಾಂಗ್ರೆಸ್‌ ಶಾಸಕರು, ಮುಖಂಡರು, ಕಾರ್ಯಕರ್ತರು ಹಾಗೂ ಅಭ್ಯರ್ಥಿ ಪ್ರಯತ್ನ ನಡೆಸಿದರಾದರೂ ಅದು ಗೆಲುವು ತಂದುಕೊಡಲಿಲ್ಲ.

ಸೋತರೂ ಜೆಡಿಎಸ್‌ ಅಚ್ಚರಿ: ಜೆಡಿಎಸ್‌ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ 3,848 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು. ಅವರಿಗೆ 3,757 ಪ್ರಥಮ ಪ್ರಾಶಸ್ತ್ಯದ ಮತ ಬಂದಿದ್ದವು. ಯಾವ ಅಭ್ಯರ್ಥಿಯೂ ಕೋಟಾ ತಲುಪದ ಕಾರಣ ನಡೆದ ಎಲಿಮಿನೇಷನ್‌ ಸುತ್ತಿನಲ್ಲಿ ಅವರಿಗೆ 8 ಮತ್ತು 28 ಮತಗಳು ಜಮೆ ಆದವು. ಒಟ್ಟಾರೆ ಅವರು 3,848 ಮತ ಪಡೆದರು.

2014ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಅಂಬಲಗಿ ಇಲ್ಲಿ 953 ಮತಗಳನ್ನು ಮಾತ್ರ ಪಡೆದಿದ್ದರು. ಪುರ್ಲೆ ಅವರು ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿದ್ದರು. ಸ್ವಯಂ ನಿವೃತ್ತಿ ಪಡೆದು ಈ ಚುನಾವಣೆಗೆ ಸ್ಪರ್ಧಿಸಿದ್ದರು. ಸಂಘಟನೆಯ ಕಾರಣಕ್ಕಾಗಿ ಪದವಿ ಪೂರ್ವ ಉಪನ್ಯಾಸಕ ಮತದಾರರು ತಿಮ್ಮಯ್ಯ ಪುರ್ಲೆ ಅವರ ಬೆಂಬಲಕ್ಕೆ ನಿಂತಿದ್ದರಿಂದ ಅವರಿಗೆ ಇಷ್ಟೊಂದು ಮತ ಬಂದಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರೋಚಕತೆ ಹೆಚ್ಚಿಸಿದ ಪ್ರಾಶಸ್ತ್ಯದ ಮತ ಎಣಿಕೆ

ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ನಿಗದಿತ ‘ಕೋಟಾ’ 9,797 ಮತಗಳನ್ನು ಪಡೆಯಲಿಲ್ಲ. ಹೀಗಾಗಿ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಸಲಾಯಿತು.

ಒಟ್ಟು 21,437 ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 1844 ಮತಗಳು ತಿರಸ್ಕೃತಗೊಂಡವು. ಒಟ್ಟಾರೆ 19,593 ಮತಗಳು ಕ್ರಮಬದ್ಧವಾಗಿದ್ದವು. ಒಟ್ಟು ಕ್ರಮಬದ್ಧ ಮತಗಳಲ್ಲಿ ಶೇ 50ಕ್ಕಿಂತ ಒಂದು ಹೆಚ್ಚು ಮತ ಪಡೆಯಬೇಕು ಎಂಬುದು ನಿಯಮ. ಅಂದರೆ, ಈ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ 9,797 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕು ಎಂಬ ‘ಕೋಟಾ’ವನ್ನು ಚುನಾವಣಾಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತ ಡಾ.ಎನ್‌.ವಿ. ಪ್ರಸಾದ್‌ ನಿಗದಿ ಮಾಡಿದರು.

ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಅತಿ ಹೆಚ್ಚು 9,418 ಮತಗಳನ್ನು ಪಡೆದಿದ್ದರು. ಆದರೆ, ಕೋಟಾ ತಲುಪಲು 379 ಮತಗಳ ಕೊರತೆ ಎದುರಿಸುತ್ತಿದ್ದರು. ಹೀಗಾಗಿ ಎರಡನೇ ಸುತ್ತಿನ ಮತ ಎಣಿಕೆ ನಡೆಸಲಾಯಿತು.

ಗೆಲುವಿನ ಕೋಟಾ ನಿಗದಿ ಮಾಡಿದ ನಂತರ ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ಅತ್ಯಂತ ಕಡಿಮೆ ಮತ ಪಡೆದ ಕನ್ನಡ ಚಳವಳಿಯ ವಾಟಾಳ್‌ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್  ಅವರನ್ನು ಸ್ಪರ್ಧೆಯಿಂದ ಕೈಬಿಟ್ಟು, ಅವರಿಗೆ ಬಂದ 59 ಮತಗಳಲ್ಲಿ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಸಲಾಯಿತು. ವಾಟಾಳ್‌ ಅವರಿಗೆ ಚಲಾವಣೆಯಾಗಿದ್ದ ಮತಗಳಲ್ಲಿ 30 ಮತದಾರರು ಎರಡನೇ ಪ್ರಾಶಸ್ತ್ಯದ ಮತಗಳನ್ನು ಸೂಚಿಸಿರಲಿಲ್ಲ. ಹೀಗಾಗಿ ಹೀಗಾಗಿ, 29 ಮತಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಯಿತು. ಆ ಸುತ್ತಿನಲ್ಲಿ ಬಿಜೆಪಿಗೆ 13, ಕಾಂಗ್ರೆಸ್‌ಗೆ 6 , ಜೆಡಿಎಸ್‌ಗೆ 8  ಸ್ವತಂತ್ರ ಅಭ್ಯರ್ಥಿ ಡಾ.ಚಂದ್ರಕಾಂತ ಸಿಂಗೆ ಅವರಿಗೆ 2 ಮತಗಳು ಲಭ್ಯವಾದವು. 

ನಂತರ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಅತ್ಯಂತ ಕಡಿಮೆ ಮತ ಪಡೆದ 2ನೇ ಅಭ್ಯರ್ಥಿ ಸಿಂಗೆ ಅವರನ್ನು ಎಲಿಮಿನೇಟ್ ಮಾಡಿ ಅವರಿಗೆ ಬಂದ 91+2 ಮತಗಳ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಸಲಾಯಿತು. ಅವರಿಗೆ ಚಲಾವಣೆಯಾಗಿದ್ದ ಮತಗಳ ಪೈಕಿ 29 ಮತದಾರರು ಎರಡನೇ ಪ್ರಾಶಸ್ತ್ಯದ ಮತದಾನ ಮಾಡಿರಲಿಲ್ಲ. ಹೀಗಾಗಿ ಆ ಮತಗಳನ್ನು ಕೈಬಿಟ್ಟು ಉಳಿದ ಮತಗಳ ಎಣಿಕೆ ಮಾಡಲಾಯಿತು. ಈ ಸುತ್ತಿನಲ್ಲಿ  ಬಿಜೆಪಿಗೆ 20, ಕಾಂಗ್ರೆಸ್‌ಗೆ 16, ಜೆಡಿಎಸ್‌ಗೆ 28 ಮತ ಬಂದವು.

3ನೇ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರನ್ನು ಎಲಿಮಿನೇಟ್ ಮಾಡಿ ಅವರಿಗೆ ಬಂದ ಮತಗಳಲ್ಲಿ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಸಲಾಯಿತು. ಪುರ್ಲೆ ಅವರಿಗೆ ಸಲ್ಲಿಕೆಯಾಗಿದ್ದ ಮತಗಳ ಪೈಕಿ 2299 ಮತಪತ್ರಗಳಲ್ಲಿ ಮತದಾರರು ದ್ವಿತೀಯ ಪ್ರಾಶಸ್ತ್ಯದ ಮತ ಚಲಾಯಿಸಿರಲಿಲ್ಲ. ಅವುಗಳನ್ನು ಬಿಟ್ಟು ಉಳಿದ ಮತಗಳ ಎಣಿಕೆ ನಡೆಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು