ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರಿಷ್ಠರ ಸಲಹೆಯಂತೆ ನಾಮಪತ್ರ ವಾಪಸ್: ಬಿಜೆಪಿ ಮುಖಂಡ ಸುರೇಶ ಸಜ್ಜನ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಬಿಜೆಪಿ ಮುಖಂಡ ಸುರೇಶ ಸಜ್ಜನ ಹೇಳಿಕೆ
Published 20 ಮೇ 2024, 13:45 IST
Last Updated 20 ಮೇ 2024, 13:45 IST
ಅಕ್ಷರ ಗಾತ್ರ

ಕಲಬುರಗಿ: ‘ಪಕ್ಷದ ಹಿರಿಯರ, ವರಿಷ್ಠರ ಸಲಹೆಯಂತೆ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಅಖಾಡದಿಂದ ಈ ಬಾರಿ ಹಿಂದೆ ಸರಿದಿದ್ದು, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲರಿಗೆ ಬೆಂಬಲ ನೀಡುವೆ’ ಎಂದು ಕೆವೈಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರೂ ಆಗಿರುವ ಬಿಜೆಪಿ ಮುಖಂಡ ಸುರೇಶ ಸಜ್ಜನ ಪ್ರಕಟಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಿಮ್ಮ ಕೆಲಸವನ್ನು ಪರಿಗಣಿಸಿ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ನೀಡಲಾಗುವುದು. ಈ ಚುನಾವಣೆಯಲ್ಲಿ ನೀವು ನಮ್ಮೊಂದಿಗಿರಿ. ನಾವು ನಿಮ್ಮ ಜೊತೆಗಿರುವುದಾಗಿ ಪಕ್ಷದ ಹಿರಿಯ ನಾಯಕರು ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.

‘ನಾನು ಈ ಚುನಾವಣೆಗಾಗಿ ಎರಡೂವರೆ ವರ್ಷಗಳಿಂದ ತಯಾರಿ ನಡೆಸಿದ್ದೆ. ಸುಮಾರು 40 ಸಾವಿರ ಅರ್ಹ ಪದವೀಧರರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಶ್ರಮಿಸಿದ್ದೆ. ಕಲ್ಯಾಣ ಭಾಗದ ಹರಪನಹಳ್ಳಿಯ ಕೊನೆಯಿಂದ ಬೀದರ್‌ ಜಿಲ್ಲೆಯ ಔರಾದ್‌ ತುದಿಯ ತನಕ ಓಡಾಡಿ ಕೆಲಸ ಮಾಡಿದ್ದೆ’ ಎಂದರು.

‘ನನ್ನನ್ನೂ ಸೇರಿದಂತೆ ಒಟ್ಟು 8 ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದೆವು. ಪಕ್ಷವು ಅಮರನಾಥ ಪಾಟೀಲ ಅವರಿಗೆ ಟಿಕೆಟ್‌ ನೀಡಿತು. ಹರಪನಹಳ್ಳಿಯಿಂದ ಬೀದರ್‌ ತನಕದ ಬೆಂಬಲಿಗರು ಇದರಿಂದ ಅಸಮಾಧಾನಗೊಂಡು, ‘ನೀವೂ ಸ್ಪರ್ಧಿಸಬೇಕು’ ಎಂದು ಒತ್ತಾಯಿಸಿದರು. ಅವರ ಒತ್ತಡಕ್ಕೆ ಮಣಿದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ನಾಮಪತ್ರ ಸಲ್ಲಿಸಿದೆ. ನಾನು ಬಂಡಾಯ ಅರ್ಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಿಲ್ಲಾಮಟ್ಟದ ನಾಯಕರು, ಈ ಕ್ಷೇತ್ರದ ಚುನಾವಣಾ ಉಸ್ತುವಾರಿ ಎನ್‌.ರವಿಕುಮಾರ, ಕುಷ್ಠಗಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಹಲವರು ನನ್ನೊಂದಿಗೆ ಮಾತನಾಡಿದರು. ಆದರೆ, ನಾನು ಬೆಂಬಲಿಗರ ಬೆಂಬಲದಿಂದ ಸ್ಪರ್ಧಿಸಿದ್ದು, ಅವರನ್ನು ಕೇಳಿ ಅಭಿಪ್ರಾಯ ಹೇಳುವೆ ಎಂದೆ. ಅಂತಿಮವಾಗಿ ಬೆಂಗಳೂರಿನಲ್ಲಿ ಬಿ.ಎಸ್‌.ಯಡಿಯೂರಪ್ಪ, ಗೋವಿಂದ ಕಾರಜೋಳ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿದೆ’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿಜೆಪಿ ನಗರದ ಘಟಕದ ಅಧ್ಯಕ್ಷ ಚಂದು ಪಾಟೀಲ, ಪ್ರಕಾಶ ಪಾಟೀಲ, ಬಸವರಾಜ ಪಾಟೀಲ ಕುಕನೂರ, ಅಪ್ಪಾಸಾಬಗೌಡ ಪಾಟೀಲ, ಸಂತೋಷ ಹಾದಿಮನಿ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

ಪಕ್ಷದ ನಾಯಕರ ಮನವಿಗೆ ಸ್ಪಂದಿಸಿ ಸುರೇಶ ಸಜ್ಜನ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರ ನಿರ್ಧಾರ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರ ಗೆಲುವನ್ನು ಖಚಿತಪಡಿಸಿದೆ
ಶಿವರಾಜ ಪಾಟೀಲ ರದ್ದೇವಾಡಿ, ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT