ಶನಿವಾರ, ಸೆಪ್ಟೆಂಬರ್ 25, 2021
30 °C

ಸಂಸದ ಡಾ. ಉಮೇಶ ಜಾಧವ ನೇತೃತ್ವದಲ್ಲಿ ದಿಶಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಸೇಡಂ ಉಪವಿಭಾಗದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಹೀಗಾಗಿ, ವಿಳಂಬ ಮಾಡದೇ ತಕ್ಷಣ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಂಸದ ಡಾ. ಉಮೇಶ ಜಾಧವ ಅವರು ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ
ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಪೂರ್ತಿಯಾಗಿ ನಿಲ್ಲುವವರೆಗೂ ಕಾಯಬೇಡಿ. ತಂಡವನ್ನು ಸಿದ್ಧವಾಗಿಟ್ಟುಕೊಂಡು ಜಾಸ್ತಿ ಮಳೆ ಹಾನಿಯಾದ ಹೊಲಗಳಿಗೆ ಭೇಟಿ ನೀಡಿ ನಷ್ಟದ ವರದಿ ಸಲ್ಲಿಸಿದರೆ ತಕ್ಷಣ ಪರಿಹಾರ ಕೊಡಿಸಲು ನೆರವಾಗುತ್ತದೆ ಎಂದರು.

ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ ಅಗತ್ಯವಿರುವ ರೈತರಿಗೆ ಸಕಾಲಕ್ಕೆ ಟ್ರ್ಯಾಕ್ಟರ್, ಟಿಲ್ಲರ್, ರೋಟಾವೇಟರ್‌ನಂತಹ ಯಂತ್ರಗಳು ದೊರೆಯುವಂತೆ ವ್ಯವಸ್ಥೆ ಮಾಡಿ. ಎಲ್ಲ ಕಡೆ ಬಲಾಢ್ಯರಿಗೇ ಯಂತ್ರಗಳನ್ನು ನೀಡುವವರಿಗೆ ಫ್ರಾಂಚೈಸಿ ಕೊಡಬೇಕು. ಅಂತಹ ದೂರುಗಳು ಬಂದರೆ ಅವರ ಫ್ರಾಂಚೈಸಿಯನ್ನು ರದ್ದುಗೊಳಿಸಿ ಎಂದು ತಾಕೀತು ಮಾಡಿದರು.

ಕಲಬುರ್ಗಿ ನಗರ ಒಳಗೊಂಡಂತೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಮಧ್ಯೆ ಸೇವಾ ರಸ್ತೆಗಳು ಕೆಟ್ಟು ಸಂಚಾರ ಅಸಾಧ್ಯವಾಗಿದ್ದು, ಕೂಡಲೇ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಜಾಧವ ಸೂಚಿಸಿದರು.

ಸಿಕಂದರಾಬಾದ್–ವಾಡಿ ಮಧ್ಯೆ ಲೆವೆಲ್ಸ್ ಕ್ರಾಸ್ 3ರಲ್ಲಿ ರೈಲ್ವೆ ರಸ್ತೆ ಮೇಲ್ಸೇತುವೆ ಕಾಮಗಾರಿಯನ್ನು 2022ರ ಡಿಸೆಂಬರ್ ಅಂತ್ಯದೊಳಗೆ
ಮುಗಿಸಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿ ಪ್ರಥಮ ಅಗರವಾಲ್ ತಿಳಿಸಿದರು. ಕಾಮಗಾರಿ ಕಾಲಮಿತಿಯೊಳಗೆ ಮತ್ತು
ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು.

ಮಳೆಗಾಲದ ಸಂದರ್ಭ ಇದಾಗಿದ್ದರಿಂದ ಕಲಬುರ್ಗಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲ್ಚಾವಣಿ ಸೋರಿಕೆಯಾಗುತ್ತಿದ್ದು, ಕೂಡಲೇ ದುರಸ್ತಿ ಪಡಿಸಬೇಕು. ಅದೇ ರೀತಿ ವಾಡಿ ರೈಲ್ವೆ ನಿಲ್ದಾಣದಲ್ಲಿ ಚರಂಡಿ ನೀರಿನ ಸಮಸ್ಯೆ ಇದ್ದು, ಇದನ್ನು ಸಹ ನಿವಾರಿಸಬೇಕು ಎಂದು ರೈಲ್ವೆ ಇಲಾಖೆಯ
ಅಧಿಕಾರಿಗಳಿಗೆ ಸೂಚಿಸಿದರು.

ಮಾರುಕಟ್ಟೆ ಮತ್ತು ಶೀಥಲೀಕರಣ ಘಟಕ ಇಲ್ಲದಿದ್ದಕ್ಕೆ ಕಲ್ಲಂಗಡಿ, ದ್ರಾಕ್ಷಿ ಬೆಳೆದ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ
ಶೀಥಲೀಕರಣ ಘಟಕ ನಿರ್ಮಾಣಕ್ಕೆ ಮುಂದೆ ಬರುವವರಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ನಿಜವಾದ ರೈತ ಫಲಾನುಭವಿಗಳಿಗೆ ಯೋಜನೆ ತಲುಪಬೇಕು ಮತ್ತು ಫಲಾನುಭವಿಗಳು ಪುನರಾವರ್ತವನೆಯಾಗದಂತೆ ಆಯ್ಕೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಭುರಾಜ ಎಚ್‌.ಎಸ್‌. ಅವರಿಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ನಾಗಪ್ಪ ಮಾತನಾಡಿ, ‘ಪ್ರಸಕ್ತ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ–
150ರಲ್ಲಿ ಬರುವ ಶಹಾಬಾದ–ವಾಡಿ ನಡುವಿನ ಕಾಗಿಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣಕ್ಕೆ  ₹ 65 ಕೋಟಿ ಇದೇ ಹೆದ್ದಾರಿಯಲ್ಲಿ ಶಹಾಬಾದ ಇಎಸ್‌ಐಸಿ ಆಸ್ಪತ್ರೆ ಬಳಿಯಿರುವ ಪ್ರಸ್ತುತ ದ್ವಿಪಥದಿಂದ ನಾಲ್ಕು ಪಥ ರೈಲ್ವೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ₹ 25 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿ 150 ಅಫಜಲಪುರ ಪಟ್ಟಣದಲ್ಲಿ 1.7 ಕಿ.ಮೀ. ನಾಲ್ಕು ಪಥ ರಸ್ತೆ ನಿರ್ಮಾಣಕ್ಕೆ ₹ 10 ಕೋಟಿ ಮಂಜೂರಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ಸ್ವಚ್ಛ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಜಲ ಜೀವನ್ ಮಿಷನ್ ಯೋಜನೆ ಆರಂಭಿಸಿದೆ. ಇದರಡಿ ಪ್ರತಿ ಗ್ರಾಮಕ್ಕೂ ಪೈಪ್‌ಲೈನ್ ಅಳವಡಿಸಿ ನಳ ಸಂಪರ್ಕದ ಮೂಲಕ ಕುಡಿಯುವ ನೀರು ಒದಗಿಸಬೇಕು. ನರೇಗಾ ಯೋಜನೆಯಡಿ ನಿಗದಿತ ಮಾನವ ದಿನ ಸೃಜಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಲೋಖಂಡೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

 

‘ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ’

ಕೋವಿಡ್ ಕಾರಣ ಶಾಲಾ–ಕಾಲೇಜುಗಳ ಮಕ್ಕಳಿಗೆ ಆನ್‌ಲೈನ್ ಪಾಠ ಬೋಧನೆ ಹೆಚ್ಚಾಗಿದ್ದು, ಬಿಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಕಾರಣ ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಮೊದಲು ಈ ಸಮಸ್ಯೆ ಬಗೆಹರಿಸಿ ಎಂದು ಬಿಸ್ಸೆನ್ನೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ 260 ಗ್ರಾಮ ಪಂಚಾಯತಿಯಲ್ಲಿ ಶೇ 50ರಷ್ಟು ಗ್ರಾ.ಪಂ.ಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಇಲ್ಲ. ಇದರಿಂದ ಹಲವು ಸೇವೆಗಳಿಗೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಸ್ಸೆನ್ನೆಲ್ ಅಧಿಕಾರಿಗಳು, ಬಿಲ್ಲು ಪಾವತಿಯಾಗದ ಕಾರಣ ಸಂಪರ್ಕ ಕಡಿತಗೊಳಿಸಿದೆ ಎಂದರು. ಕೂಡಲೇ ಬಿಲ್ಲು ಪಾವತಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು