ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸಾನ್ ರೈಲು ಒದಗಿಸಲು ಪ್ರಸ್ತಾವ

ಮುಂಗಾರು ಹಂಗಾಮಿನ ಸಿದ್ಧತೆ ಪರಿಶೀಲಿಸಿದ ಸಂಸದ ಡಾ. ಉಮೇಶ ಜಾಧವ
Last Updated 4 ಜೂನ್ 2021, 3:31 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಬೆಳೆ ನಿಗದಿ ಪಡಿಸುವ ನಿಟ್ಟಿನಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ಮಹಾನಗರಗಳಿಗೆ ಸಾಗಾಟ ಮಾಡಲು ಹವಾನಿಯಂತ್ರಿತ ಕಿಸಾನ್ ರೈಲು ಒದಗಿಸಲು ಪ್ರಸ್ತಾವ ಸಲ್ಲಿಸುವುದಾಗಿ ಸಂಸದ ಡ. ಉಮೇಶ ಜಾಧವ್ ಭರವಸೆ ನೀಡಿದರು.

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ, ರಸಗೊಬ್ಬರ ಸಕಾಲದಲ್ಲಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮತ್ತು ಕೃಷಿ ಇಲಾಖೆಯಿಂದ ಕೈಗೊಂಡಿರುವ ಮುಂಗಾರು ಸಿದ್ದತೆ ಕುರಿತು ಬುಧವಾರ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಲಬುರ್ಗಿ ಜಿಲ್ಲೆಗೆ ಅವಶ್ಯಕವಿರುವ ಡಿಎಪಿ ರಸಗೊಬ್ಬರ ಜೊತೆಯಲ್ಲಿ ಇತರೆ ರಸಗೊಬ್ಬರಗಳು ಪೂರೈಕೆಯಾಗುವಂತೆ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

‘ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಭಾಗದ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಮತ್ತು ರೈತರಿಗೆ ಸೂಕ್ತ ಸಮಯದಲ್ಲಿ ಬೀಜ ಮತ್ತು ರಸಗೊಬ್ಬರ ಒದಗಿಸುವುದು ಅತಿ ಪ್ರಮುಖವಾಗಿದ್ದು, ಆದ್ಯತೆ ಮೇರೆಗೆ ಎಲ್ಲಾ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸೂಗುರ, ‘ಪ್ರಸಕ್ತ ಮುಂಗಾರು ಹಂಗಾಮಿಗೆ ಒಟ್ಟು 7.55 ಲಕ್ಷ ಹೆಕ್ಟೇರ್‌ನಲ್ಲಿ ಜಿಲ್ಲೆಯ ಪ್ರಮುಖ ಬೆಳೆಗಳಾದ ತೊಗರಿ (5.32 ಲಕ್ಷ ಹೆಕ್ಟೇರ್), ಉದ್ದು (0.29 ಲಕ್ಷ ಹೆ.), ಹೆಸರು (0.49 ಲಕ್ಷ ಹೆ.), ಹತ್ತಿ (0.56 ಲಕ್ಷ ಹೆ), ಕಬ್ಬು 0.30 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ರಾಷ್ಟ್ರೀಯ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಮೂಲಕ ಬಿತ್ತನೆ ಬೀಜಗಳ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದ್ದು, ಪ್ರಮುಖವಾಗಿ ತೊಗರಿ, ಹೆಸರು, ಉದ್ದು, ಮೆಕ್ಕೆಜೋಳ, ಸೋಯಾಬಿನ ಮತ್ತು ಇತರೆ ಬೆಳೆಗಳ ದಾಸ್ತಾನು ಪ್ರಗತಿಯಲ್ಲಿದೆ ಮತ್ತು ರೈತರಿಗೆ ಬೀಜ ವಿತರಣೆ ಪ್ರಾರಂಭಿಸಲಾಗಿದೆ. ಹೆಚ್ಚುವರಿಯಾಗಿ 13,785 ಕ್ವಿಂಟಲ್ ಬೀಜ ಬೇಡಿಕೆಗೆ ಕೇಂದ್ರ ಕಾರ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಕಲಬುರ್ಗಿ ಜಿಲ್ಲೆಯ ಮುಂಗಾರು ಹಂಗಾಮಿಗೆ ಬೆಳೆವಾರು ಕ್ಷೇತ್ರ ಆಧಾರದ ಮೇಲೆ ಡಿಎಪಿ 54,300 ಮೆಟ್ರಿಕ್ ಟನ್, ಯೂರಿಯಾ 34,900 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 17,200 ಮೆಟ್ರಿಕ್ ಟನ್, ಎಂಒಪಿ 6250 ಮೆಟ್ರಿಕ್ ಟನ್, ಎಸ್‌ಎಸ್‌ಪಿ 6645 ಮೆಟ್ರಿಕ್ ಟನ್ ಹೀಗೆ ಒಟ್ಟು 1,19,395 ಮೆಟ್ರಿಕ್ ಟನ್ ಬೇಡಿಕೆ ಇರುತ್ತದೆ. ಕೇಂದ್ರ ಕಚೇರಿಯಿಂದ 73,096 ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಜಿಲ್ಲೆಯಲ್ಲಿ ಕಾಪು ದಾಸ್ತಾನು ಯೋಜನೆಯಡಿ ಡಿಎಪಿ 3142 ಮೆಟ್ರಿಕ್ ಟನ್ ಹಾಗೂ 147 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಮಾಡಲಾಗಿದೆ. ಡಿಎಪಿ 11,281 ಮೆಟ್ರಿಕ್ ಟನ್, ಯೂರಿಯಾ 8027 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 9850 ಮೆಟ್ರಿಕ್ ಟನ್, ಎಂಒಪಿ 2251 ಮೆಟ್ರಿಕ್ ಟನ್, ಎಸ್‌ಎಸ್‌ಪಿ 1043 ಮೆಟ್ರಿಕ್ ಟನ್ ಹೀಗೆ ಒಟ್ಟು 32,452 ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ ಎಂದರು.

ಸಭೆಯಲ್ಲಿ ತೊಗರಿ ಮಂಡಳಿ ಅಧ್ಯಕ್ಷ ಬಸವರಾಜ ಇಂಗಿನ್, ರಾಜ್ಯ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸೂಗೂರ, ಉಪ ಕೃಷಿ ನಿರ್ದೇಶಕಕಿ ಅನುಸೂಯಾ ಹೂಗಾರ, ಉಪ ತೋಟಗಾರಿಕೆ ನಿರ್ದೇಶಕ ಪ್ರಭುರಾಜ ಹಿರೇಮಠ, ಚಂದ್ರಕಾಂತ ಮಸಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT