ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ಕ್ಷುಲ್ಲಕ ಕಾರಣಕ್ಕೆ ಜಗಳ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ

Last Updated 28 ಫೆಬ್ರುವರಿ 2023, 11:25 IST
ಅಕ್ಷರ ಗಾತ್ರ

ಕಮಲಾಪುರ(ಕಲಬುರಗಿ): ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ತನ್ನ ಸಂಬಂಧಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಕಾಳಮಂದರ್ಗಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಭರತ ಸುಭಾಷ್‌ಚಂದ್ರ ವಾಡಿ(24) ಕೊಲೆಯಾದವರು. ಕೊಲೆ ಮಾಡಿದ ಆರೋಪಿ ಮಲ್ಲಿಕಾರ್ಜುನ ಶಿವಶರಣಪ್ಪ ವಾಡಿ ಪರಾರಿ ಆಗಿದ್ದಾನೆ. ಭರತನ ತಾಯಿ ಬಂಗಾರಮ್ಮ ಸುಭಾಷ್‌ಚಂದ್ರ ಅವರು ಕಮಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಮಲ್ಲಿಕಾರ್ಜುನ ಮೊಬೈಲ್‌ನಲ್ಲಿದ್ದ ಸೀಮ್ ಕಾರ್ಡ್ ಅನ್ನು ಹೊರತೆಗೆದ ಭರತ, ಅದನ್ನು ನಿಷ್ಕ್ರಿಯಗೊಳಿಸಿದ್ದ. ಈ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಸೋಮವಾರ ಸಂಜೆ ಜಗಳ ಆಗಿತ್ತು. ಭರತನ ಮೇಲೆ ಮಲ್ಲಿಕಾರ್ಜುನ ಹಲ್ಲೆ ಮಾಡಿ, ಕೊಲುವುದಾಗಿ ಬೆದರಿಕೆ ಆಗಿದ್ದ’ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ರಾತ್ರಿ 8ರ ಸುಮಾರಿಗೆ ನೆರೆಹೊರೆಯವರು ಬುದ್ಧಿ ಹೇಳಿ ಜಗಳ ಬಿಡಿಸಿ, ಮನೆಗೆ ಕಳುಹಿಸಿದ್ದರು. ಮನೆಯಲ್ಲಿ ಊಟ ಮುಗಿಸಿದ್ದ ಭರತ, ಎಂದಿನಂತೆ ಶಾಲಾ ಕಟ್ಟಡದ ಮೇಲೆ ಮಲಗಿದ್ದ. ತಡ ರಾತ್ರಿ ಅಲ್ಲಿಗೆ ಬಂದ ಮಲ್ಲಿಕಾರ್ಜುನ, ಮಲಗಿದ್ದ ಭರತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದ, ಆತ ಸ್ಥಳದಲ್ಲಿ ಮೃತಪಟ್ಟಿದ್ದಾನೆ’ ಎಂದು ಆರೋಪಿಸಲಾಗಿದೆ.

ಮಂಗಳವಾರ ಬೆಳಿಗೆ ಬಸವರಾಜ ಎಂಬಾತ ಭರತನನ್ನು ಎಚ್ಚರಿಸಲು ತೆರಳಿದ್ದ. ಭರತನ ತಲೆ ರಕ್ತದ ಮಡುವಿನಲ್ಲಿತ್ತು. ಈ ವಿಷಯ ತಾಯಿಗೆ ತಿಳಿಸಿದ್ದು, ಬಂದು ನೋಡುವಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ವಿ.ನಾರಾಯಣ, ಪಿಎಸ್‌ಐ ವಿಶ್ವನಾಥ ಮುದ್ದಾರೆಡ್ಡಿ, ರಾಜೇಂದ್ರ ರೆಡ್ಡಿ, ರಾಜಶೇಖರ್ ನಾಶಿ, ಹುಸೇನ್ ಭಾಷಾ, ಶರಣಬಸಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT