ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 5 ಕಡೆ ಗಣಿ ಅದಾಲತ್‌: ಸಚಿವ ಮುರುಗೇಶ ನಿರಾಣಿ ಹೇಳಿಕೆ

Last Updated 11 ಏಪ್ರಿಲ್ 2021, 9:50 IST
ಅಕ್ಷರ ಗಾತ್ರ

ಕಲಬುರ್ಗಿ: ‘ಗಣಿಗಾರಿಕೆ ಉದ್ಯಮಿಗಳ ಮತ್ತು ಕಾರ್ಮಿಕರ ಸಮಸ್ಯೆಯನ್ನು ಅವರ ಬಾಗಿಲಿಗೆ ಹೋಗಿ ಬಗೆಹರಿಸುವ ನಿಟ್ಟಿನಲ್ಲಿ, ರಾಜ್ಯದ ಐದು ಕಡೆ ‘ಗಣಿ ಅದಾಲತ್’ ನಡೆಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ಆರ್. ನಿರಾಣಿ ಹೇಳಿದರು.

‘ಏ. 30ರಂದು ಬೆಂಗಳೂರಿನ ಅರಮನೆ ಮೈದಾನ, ಮೇ 15ರಂದು ಮೈಸೂರು, ಮೇ 29ಕ್ಕೆ ಬೆಳಗಾವಿ, ಜೂನ್‌ 11ಕ್ಕೆ ಕಲಬುರ್ಗಿ ಹಾಗೂ ಜೂನ್ 25ಕ್ಕೆ ಮಂಗಳೂರಿನಲ್ಲಿ ಈ ಅದಾಲತ್ ನಡೆಯಲಿದೆ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‌

‘ಇದಕ್ಕೆ ಪೂರಕವಾಗಿ ಕಾರ್ಮಿಕರು ಮತ್ತು ಉದ್ಯಮಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಗಣಿಗಾರಿಕೆಗೆ ಅನುಮತಿ ನೀಡಲು ಉದ್ಯಮಿಗಳಿಗೆ ಅಲೆದಾಟ ತಪ್ಪಿಸಲು ಮುಂದಿನ ತಿಂಗಳಿನಿಂದ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಚಿವ ಹೇಳಿದರು.

‘ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ಈಚೆಗೆ ಕಲ್ಲು ಕ್ವಾರಿಯಲ್ಲಿ ಸಿಡಿಮದ್ದಿನಿಂದ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ ಗಣಿಗಾರಿಕೆಗೆ ಸಿಡಿಮದ್ದು ಬಳಕೆ, ಸಾಗಣೆ ಹಾಗೂ ಸಂಗ್ರಹ ಕುರಿತು ಕ್ವಾರಿ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಡೈರೆಕ್ಟರ್ ಜನರಲ್ ಆಫ್ ಮೈನಿಂಗ್ ಸೆಕ್ಯುರಿಟಿ (ಡಿ.ಜಿ.ಎಂ.ಎಸ್.) ಅನುಮತಿ ಇಲ್ಲದೆ ನಡೆಸುತ್ತಿರುವ 2,500 ಗಣಿಗಾರಿಕೆಗಳಿವೆ. ಇವರೆಲ್ಲರಿಗೂ ಡಿ.ಜಿ.ಎಂ.ಎಸ್‌.ನಿಂದ ಅನುಮತಿ ಪಡೆದು ಗಣಿಗಾರಿಕೆ ನಡೆಸುವಂತೆ ನೋಟಿಸ್ ನೀಡಲಾಗಿದೆ ಎಂದರು.

ಡಿ.ಎಂ.ಎಫ್‌ ನಿಧಿ ಸದ್ಬಳಕೆಗೆ ಸೂಚನೆ: ‘ರಾಜ್ಯದಲ್ಲಿ ಕಳೆದ ಐದಾರು ವರ್ಷದಲ್ಲಿ ₹ 2,400 ಕೋಟಿ ಡಿ.ಎಂ.ಎಫ್. ನಿಧಿ ಸಂಗ್ರಹಗೊಂಡಿದೆ. ಇದರಲ್ಲಿ ₹ 800 ಕೋಟಿ ಮಾತ್ರ ಖರ್ಚಾಗಿದೆ. ಉಳಿದ ಹಣವನ್ನು ಮುಂದಿನ ಮೂರು ತಿಂಗಳೊಳಗಾಗಿ ಗಣಿಬಾಧಿತ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬಳಸುವಂತೆ ಡಿ.ಎಂ.ಎಫ್. ಸಮಿತಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ನಿರಾಣಿ ತಿಳಿಸಿದರು.

ತಿಂಗಳಾಂತ್ಯಕ್ಕೆ ಹೊಸ ಗಣಿ ನೀತಿ

‘ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಏಪ್ರಿಲ್ ಅಂತ್ಯಕ್ಕೆ ಹೊಸ ಗಣಿ ನೀತಿ ಜಾರಿಗೆ ತರಲಾಗುತ್ತಿದೆ’ ಎಂದು ಸಚಿವ ನಿರಾಣಿ ತಿಳಿದರು.‌

‘ಗಣಿಗಾರಿಕೆಯನ್ನು ವೈಜ್ಞಾನಿಕ ರೀತಿಯಲ್ಲಿ ನಡೆಸಲು ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಬೆಂಗಳೂರು ಮತ್ತು ಚಿತ್ರದುರ್ಗದಲ್ಲಿ ‘ಗಣಿಗಾರಿಕೆ ಶಾಲೆ’ ತೆರೆಯಲಾಗುವುದು. ಕ್ವಾರಿಗಳಲ್ಲಿಯೂ ಸುರಕ್ಷಿತ ಗಣಿಗಾರಿಕೆ ನಡೆಸಲು ಪ್ರಸ್ತುತ ಇರುವ ಕನಿಷ್ಠ ಮಿತಿ 1 ಎಕರೆ ಪ್ರದೇಶ ಬದಲಾಗಿ 5 ಎಕರೆ ಪ್ರದೇಶ ನಿಗದಿಪಡಿಸಲು ಚಿಂತನೆ ನಡೆದಿದೆ ಎಂದೂ ಸಚಿವ ಹೇಳಿದರು.

‘‌ಇಲಾಖೆಯಲ್ಲಿ ಈಗ ದಂಡದಿಂದ ವಸೂಲಿ ಮಾಡಿದ ₹ 6 ಸಾವಿರ ಕೋಟಿ ಹಣವಿದೆ. ಗಣಿ ಅಕ್ರಮ ನಡೆಸುವವರಿಗೆ ದಂಡ ಹಾಕುವುದರಲ್ಲಿಯೂ ಅಧಿಕಾರಿಗಳು ದಾರಿ ತಪ್ಪುತ್ತಿದ್ದಾರೆ.‌ ₹ 80 ಲಕ್ಷದಷ್ಟು ದಂಡ ಹಾಕಬೇಕಾದ ಗಣಿಗೆ ₹ 80 ಕೋಟಿ ದಂಡ ಹಾಕಿದರೆ ಅದನ್ನು ಭರಿಸುವುದಕ್ಕೆ ಆಗುವುದಿಲ್ಲ. ಇಂಥ ಕ್ರಮಗಳಿಗೆ ಹೊಸ ನೀತಿಯಲ್ಲಿ ಕಡಿವಾಣ ಬೀಳಲಿದೆ’ ಎಂದರು.

‘ಮರಳು ಅಕ್ರಮದಲ್ಲಿ ಜಿಲ್ಲಾಡಳಿತಗಳೂ ಭಾಗಿ’

‘ಮರಳು ಅಕ್ರಮ ಗಣಿಗಾರಿಕೆಯಲ್ಲಿ ಕೆಲವು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳೂ ಭಾಗಿದಾರರಿದ್ದಾರೆ’ ಎಂದು ಸ್ವತಃ ಸಚಿವ ಮುರುಗೇಶ ನಿರಾಣಿ ಅವರೇ ಬಹಿರಂಗವಾಗಿ ಹೇಳಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘10 ಟ್ರಿಪ್‌ ತೆಗೆಯಲು ಮರಳು ತೆಗೆಯಲು ಅನುಮತಿ ಪಡೆದು 90 ಟ್ರಿಪ್‌ನಷ್ಟು ತೆಗೆಯುತ್ತಿದ್ದಾರೆ. ‌ಅಧಿಕಾರಿಗಳು ಭಾಗಿದಾರರಾದ ಕಾರಣವೇ ಈ ರೀತಿ ಅಕ್ರಮ ನಡೆಯಲು ಸಾಧ್ಯವಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಮರಳು ಮಾಫಿಯಾಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರೆಯುವಂತೆ ಮಾಡಲು ಏಪ್ರಿಲ್ ಅಂತ್ಯದೊಳಗಾಗಿ ‘ಹೊಸ ಮರಳು ನೀತಿ’ ಜಾರಿಗೆ ತರಲಾಗುತ್ತಿದೆ. ₹ 10 ಲಕ್ಷ ವರೆಗಿನ ಕಟ್ಟಡ, ಮನೆಗಳಿಗೆ ಪ್ರತಿ ಟನ್‍ಗೆ ಕೇವಲ ₹100 ಪಡೆದು ರಿಯಾಯಿತಿ ದರದಲ್ಲಿ ಮರಳು ನೀಡಲಾಗುವುದು. ಇದಕ್ಕೂ ಮೀರಿದ ಕಟ್ಟಡಗಳಿಗೆ ರಾಯಲ್ಟಿ ಆಧಾರದಲ್ಲಿ ಹಣ ಪಾವತಿಸಿ ಮರಳು ಪಡೆಯಬಹುದು’ ಎಂದರು.

ಪ್ರತಿ ಜಿಲ್ಲೆಯಲ್ಲಿ ಖನಿಜ ಭವನ

‘ಆಡಳಿತ ಸುಧಾರಣೆ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಗರಿಷ್ಠ ₹ 2 ಕೋಟಿ ವೆಚ್ಚದಲ್ಲಿ ಖನಿಜ ಭವನ ನಿರ್ಮಿಸಲಾಗುತ್ತಿದೆ’ ಎಂದು ಸಚಿವ ನಿರಾಣಿ ತಿಳಿಸಿದರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೊಲೀಸ್, ಅರಣ್ಯ ಇಲಾಖೆಯ ಮಾದರಿಯಲ್ಲಿ ಸಮವಸ್ತ್ರ ನೀಡಲಾಗುವುದು. ಮರಳು ಭದ್ರತೆಗಾಗಿ ಮಾಜಿ ಸೈನಿಕರನ್ನು ನಿಯೋಜಿಸಲಾಗುವುದು. ಮರಳು ಮಾರಾಟದಲ್ಲಿ ಪಾರದರ್ಶಕತೆ ತರಲು ವಾಕಿಟಾಕಿ ಬಳಕೆ, ಜಿಪಿಎಸ್ ಅಳವಡಿಕೆಯಂತಹ ಹೊಸ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಒಟ್ಟಾರೆಯಾಗಿ ಅಕ್ರಮ ಮರಳು ದಂಧೆಗೆ ತಡೆ ಹಾಕಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT