ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಸಲಾತಿ ಕುರಿತು ಸ್ಪಷ್ಟ ನಿಲುವು ತಾಳದ ನ್ಯಾಯಾಲಯಗಳು’

Last Updated 11 ಡಿಸೆಂಬರ್ 2019, 10:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮೀಸಲಾತಿ ಕುರಿತು ದೇಶದ ನ್ಯಾಯಾಲಯಗಳು ಕೂಡ ಸ್ಪಷ್ಟವಾದ ನಿಲುವು ತಾಳುತ್ತಿಲ್ಲ. ಸರ್ಕಾರಕ್ಕೆ ಬೇಕಾಗಿದ್ದರೆ ಕೊಡಬಹುದು, ಬೇಡವಾದರೆ ಬಿಡಬಹುದು ಎಂಬ ನಿಲುವಿನಲ್ಲಿವೆ. ಇದರಿಂದಾಗಿ ಮೀಸಲಾತಿಯ ವಿರುದ್ಧದ ಧ್ವನಿಗಳು ಗಟ್ಟಿಯಾಗುತ್ತಿವೆ’ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರು ಕಳವಳ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪರಿಶಿಷ್ಟ ಹಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಕಲ್ಯಾಣ ಸಂಘದಿಂದ ‘ಮೀಸಲಾತಿ– ನೂರು ವರ್ಷ’ ಕುರಿತು ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.

‘ಪರಿಶಿಷ್ಟರು ಮಾತ್ರ ಮೀಸಲಾತಿ ಪಡೆಯುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಬಿತ್ತಲಾಗಿದೆ. ಆದರೆ, ಎಲ್ಲ ಶೋಷಿತ ವರ್ಗಗಳು, ಬಡವರೂ ಇದರ ಲಾಭ ಪಡೆಯುತ್ತಿದ್ದಾರೆ. 103ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಸಾಮಾನ್ಯ ವರ್ಗದಲ್ಲಿರುವ ಬಡವರಿಗೂ ಮೀಸಲಾತಿ ಕೊಡಲಾಗುತ್ತಿದೆ’ ಎಂದು ವಿಶ್ಲೇಷಿಸಿದರು.‌

‘ಕೇಂದ್ರ ಸರ್ಕಾರದ 1/3ರಷ್ಟು ಉದ್ಯೋಗಗಳು ಗುತ್ತಿಗೆ ಆಧಾರಿತವಾಗಿವೆ. ಉಳಿದ ನೌಕರರನ್ನು ಔಟ್‌ಸೋರ್ಸ್‌ನಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ. ಲಾಭದಲ್ಲಿ ಇರುವ ಸರ್ಕಾರಿ ವಲಯಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಈ ಕ್ರಮಗಳಿಂದ ಮೀಸಲಾತಿ ತನ್ನಿಂದ ತಾನಾಗಿಯೇ ನಿಂತುಹೋಗುತ್ತದೆ ಎಂಬ ಲೆಕ್ಕಾಚಾರ ಸರ್ಕಾರದ್ದು. ಇದಕ್ಕಿಂತ ಅಪಾಯಕಾರಿ ಏನೆಂದರೆ, ಶೇಕಡ 97.3ರಷ್ಟು ನೌಕರರು ಖಾಸಗಿ ವಲಯದವರೇ ಆಗಿದ್ದಾರೆ. ಅಲ್ಲಿ ಎಲ್ಲೂ ಮೀಸಲಾತಿ ಪದವೇ ಪರಿಚಯವಾಗುವುದಿಲ್ಲ’ ಎಂದು ವಿವರಿಸಿದರು.

‘ಕೇಂದ್ರದ ನೀತಿಗಳಿಂದಾಗಿ ಕೃಷಿವಲಯ ಬಿಕ್ಕಟ್ಟಿಗೆ ಸಿಲುಕಿದೆ. ರೈತರು ಆರ್ಥಿಕವಾಗಿ, ನೈತಿಕವಾಗಿ ದಿವಾಳಿಯಾಗುತ್ತಿದ್ದಾರೆ. ಸಹಜವಾಗಿಯೇ ಅವರೂ ಮೀಸಲಾತಿ ಕೇಳುತ್ತಿದ್ದಾರೆ. ನೋಟ್‌ ರದ್ದುಪಡಿಸಿದ ಒಂದೇ ಕಾರಣಕ್ಕೆ ಇದೂವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ನ್ಯಾಯಮೂರ್ತಿಗಳು ವಿವರಿಸಿದರು.

‘ಸರ್ಕಾರದ 149 ಕಾರ್ಯದರ್ಶಿ ಹುದ್ದೆಯಲ್ಲಿ ಪರಿಶಿಷ್ಟರು ಒಬ್ಬರೂ ಇಲ್ಲ. 477 ಜಂಟಿ ಕಾರ್ಯದರ್ಶಿ ಹುದ್ದೆಗಳ ಪೈಕಿ 37 ಪರಿಶಿಷ್ಟ ಜಾತಿ, 118 ಪರಿಶಿಷ್ಟ ಪಂಗಡದವರಿದ್ದಾರೆ. 590 ನಿರ್ದೇಶಕ ಹುದ್ದೆಗಳ ಪೈಕಿ 17 ಪರಿಶಿಷ್ಟ ಜಾತಿ ಹಾಗೂ 7 ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ. ಹಿಂದುಳಿದವರು ಅತಿ ಹೆಚ್ಚು ಸಂಖ್ಯೆಯಲ್ಲಿ ಸಿಗುವುದು ಡಿ ದರ್ಜೆಯ ಹುದ್ದೆಗಳಲ್ಲಿ ಮಾತ್ರ. ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಏಕೆ ಬೇಕು ಎಂದು ಕೇಳುವವರಿಗೆ ಈ ಉತ್ತರ ತಲುಪಿಸಿ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT