ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಿವಿನ ಶಿಕ್ಷಣ ಹೇಳುವ ಕಾದಂಬರಿ’

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಅಭಿಮತ
Last Updated 9 ಅಕ್ಟೋಬರ್ 2022, 13:11 IST
ಅಕ್ಷರ ಗಾತ್ರ

ಕಲಬುರಗಿ: ‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ತಳ ಸಮುದಾಯಗಳ ಬಡ ಮಕ್ಕಳು ಹಳ್ಳಿಗಾಡಿನ ಪರಿಸರದಲ್ಲಿ ಶಿಕ್ಷಣ ಪಡೆಯುವುದು ಸವಾಲಾಗಿದೆ. ಕುಟುಂಬದ ಬವಣೆಯ ಜೊತೆಗೆ ಹಸಿದು ಕಲಿಯುವ; ಹಸಿದು ಕಾಯುವ ಮತ್ತು ಹಸಿವಿನೊಂದಿಗೆ ಸಾಧಿಸುವ ತಲ್ಲಣಗಳನ್ನು ‘ನಮ್ ಸಾಲಿ’ ಕಾದಂಬರಿಯು ಒತ್ತಿ ಹೇಳುತ್ತದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಹೇಳಿದರು.

ನಗರದ ರಂಗಾಯಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜನರಂಗ’ ಸಂಸ್ಥೆ ಅರ್ಪಿಸಿದ ಶಂಕರಯ್ಯ ಆರ್.ಘಂಟಿ ಅವರ ‘ನಮ್ ಸಾಲಿ’ ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಕಾದಂಬರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸೊಗಡಿನ ಭಾಷೆಯನ್ನು ಮನೋಜ್ಞವಾಗಿ ಬಳಸಿರುವ ಲೇಖಕರು, ಹಾಲು ಮಾರಿ ಜೀವನ ಸಾಗಿಸುವ ಬಡ ಕುಟುಂಬದಲ್ಲಿ ಗಂಗ್ಯಾ ಎಂಬ ಒಬ್ಬ ಬಾಲಕ ಶಿಕ್ಷಣ ಪಡೆದು ಗಂಗಾಧರ ಆಗಿ ರೂಪಗೊಳ್ಳುವ ವಿಭಿನ್ನ ಸಂಗತಿಗಳನ್ನು ಹೆಣೆದು ಓದುಗನ ಮನಸ್ಸನ್ನು ಗಂಭೀರವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ’ ಎಂದರು.

ಈ ಕಾದಂಬರಿಯಲ್ಲಿ ಶಿಕ್ಷಕರು ಮಾಡುವ ಕೆಲಸವನ್ನು ಹಾಗೂ ಕುಟುಂಬದ ಎಲ್ಲಾ ಪಾತ್ರಗಳನ್ನು ಅನಾವರಣ ಮಾಡಲಾಗಿದೆ. ಓದುಗನಿಗೆ ದೃಶ್ಯದ ಕಲ್ಪನೆ ಮೂಡಿಸುವ ನಾಟಕೀಯ ಅಂಶಗಳನ್ನೂ ಸೂಕ್ಷ್ಮವಾಗಿ ಅಳವಡಿಸಲಾಗಿದೆ. ಕೃತಿಯ ಭಾಷೆಯಲ್ಲಿ ಓದುಗನ ಸಂವಹನ ಸೆಳೆತವಿದೆ. ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಲಿಯುವ ಬಡ ಮಕ್ಕಳ ಬದುಕಿನ ಒಳಸ್ತರಗಳನ್ನು ಹೆಣೆಯಲಾಗಿದೆ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ. ಅಜೀಂ ಪಾಶಾ ಮಾತನಾಡಿ, ‘ಈ ಕಾದಂಬರಿಯು ಒಬ್ಬ ಬಡ ಕುಟುಂಬದ ಬಾಲಕನ ಕಥೆಯಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವನದ ವಿವಿಧ ಮಜಲುಗಳನ್ನು ಹೇಳುವ ಉತ್ತಮ ಕಾದಂಬರಿಯಾಗಿದೆ. ಹಳ್ಳಿ ಭಾಷೆಯ ವೈವಿಧ್ಯತೆಯನ್ನು ಬಳಸಿರುವುದು ಅತ್ಯಂತ ಮಹತ್ವ ಎನಿಸುತ್ತದೆ’ ಎಂದರು.

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಮಾತನಾಡಿ, ಕಾದಂಬರಿ ಎರಡು ಅಂಶಗಳನ್ನು ನಿರೂಪಿಸಿದೆ. ಒಂದು ಕಡು ಬಡತನದ ಎಷ್ಟೋ ಕುಟುಂಬದ ಮಕ್ಕಳು ಶಾಲೆಗೆ ಹೋಗಿ ಕಲಿಯುವ ಸಂದರ್ಭ. ನಂತರ ಅದೇ ಕುಟುಂಬದ ದೃಶ್ಯ ಸಾಂಗತ್ಯಗಳನ್ನು ಮನೋಜ್ಞವಾಗಿ ಹೇಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಂಗಕರ್ಮಿ, ಬರಹಗಾರ ಶಂಕರಯ್ಯ ಆರ್. ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪಡೆದ ಬಾಬುರಾವ ಅವರನ್ನು ಸನ್ಮಾನಿಸಲಾಯಿತು.

ಕಲಾವಿದ ಡಾ. ವಿ.ಜಿ.ಅಂದಾನಿ, ಪಿ.ಎಂ.ಮಣ್ಣೂರು, ಹಿರಿಯ ವೈದ್ಯ ಡಾ. ಎಸ್.ಎಸ್.ಗುಬ್ಬಿ ಇದ್ದರು. ಅಹಮದ್ ಅಯಾನ್ ಅಹಮದ್ ಅಮಾನ್ ಪ್ರಾರ್ಥಿಸಿದರು. ಡಾ. ಕೆ.ಎಂ. ಕುಮಾರಸ್ವಾಮಿ ವಂದಿಸಿದರು. ಡಾ. ರಾಜಕುಮಾರ ಮಾಳಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT