ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರಾಷ್ಟ್ರೀಯ ಕೃಷಿ ವಿಜ್ಞಾನಿ ಕವಿತಾ

ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಂಡ ಬಂಜಾರ ಸಮುದಾಯದ ಯುವತಿ
Last Updated 23 ಜನವರಿ 2023, 5:09 IST
ಅಕ್ಷರ ಗಾತ್ರ

ಕಲಬುರಗಿ: ನಗರದ ನಿವಾಸಿ ಕವಿತಾ ಪಾಂಡು ಜಾಧವ ಅವರು 2021ರಲ್ಲಿ ನಡೆದ ರಾಷ್ಟ್ರಮಟ್ಟದ ಕೃಷಿ ಸಂಶೋಧನಾ ಸೇವೆ (ಎಆರ್‌ಎಸ್) ಪರೀಕ್ಷೆಯಲ್ಲಿ ಕೃಷಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

‘ಮಣ್ಣು ವಿಜ್ಞಾನ’ ವಿಭಾಗದಲ್ಲಿ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳ ಪೈಕಿ ಈ ಸಾಧನೆ ಮಾಡಿದ ಏಕೈಕ ಮಹಿಳೆ ಕವಿತಾ ಆಗಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ. ಜಾಧವ ಅವರ ಕಿರಿಯ ಸಹೋದರಿಯಾಗಿರುವ ಕವಿತಾ ವಿಜಯಪುರ ಜಿಲ್ಲೆಯ ಹೊನಗನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ಹಾಸನ ಕೃಷಿ ಮಹಾವಿದ್ಯಾಲಯದಿಂದ ಬಿ.ಎಸ್ಸಿ (ಅಗ್ರಿ), ಧಾರವಾಡ ಕೃಷಿ ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಹಾಗೂ ದೆಹಲಿಯ ಭಾರತೀಯ ಕೃಷಿ ಸಂಶೋಧನಾ (ಐಎಆರ್‌ಐ) ಸಂಸ್ಥೆಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವಿತಾ ಅವರ ತಂದೆ ಪಾಂಡು ಜಾಧವ, ತಾಯಿ ಕಾಶಿಬಾಯಿ ಜಾಧವ ಅವರು ಅನಕ್ಷರಸ್ಥರು. ಆದರೂ, ಪುತ್ರಿಯ ಶಿಕ್ಷಣಕ್ಕೆ ನೀರೆರೆದು ಪೋಷಿಸಿದ್ದಾರೆ.

ಎಂ.ಎಸ್ಸಿ. ಪದವೀಧರರಾಗಿರುವ ಪತಿ ಸಂಜೀವ ರಾಠೋಡ ಕಲಬುರಗಿಯ ರಸಗೊಬ್ಬರ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

‘ಐಎಎಸ್‌ ಶ್ರೇಣಿಗೆ ಸಮನಾದ ಈ ಹುದ್ದೆ ಪಡೆಯುವುದು ನನ್ನ ಕನಸಾಗಿತ್ತು. ಮೊದಲಿಂದಲೂ ಆ ನಿಟ್ಟಿನಲ್ಲಿ ಅಧ್ಯಯನ ಮಾಡುತ್ತಿದ್ದೆ. ಮೊದಲ ಬಾರಿ 2018ರಲ್ಲಿ ಪ್ರಾಥಮಿಕ (ಪ್ರಿಲಿಮ್ಸ್) ಪರೀಕ್ಷೆ ಪಾಸಾದೆ. ಆದರೆ, ಮೇನ್ಸ್‌ನಲ್ಲಿ ಕೆಲ ಅಂಕಗಳಿಂದ ಅವಕಾಶ ಕೈತಪ್ಪಿತು. ಆದರೆ, ಪಟ್ಟು ಬಿಡದೇ 2021ರ ಮಾರ್ಚ್‌ನಲ್ಲಿ ಮತ್ತೊಮ್ಮೆ ಪ್ರಯತ್ನ ಮಾಡಿದಾಗ ಉತ್ತೀರ್ಣಳಾದೆ. ಕೇವಲ ಮೂರು ಗಂಟೆಯಲ್ಲಿ 250 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ. ಮಾತೃಭಾಷೆಯಲ್ಲದ ಇಂಗ್ಲಿಷ್‌ನಲ್ಲಿ ಉತ್ತರಿಸಬೇಕಿರುವುದರಿಂದ ಕಠಿಣ ಸವಾಲುಗಳು ಎದುರಾಗಿದ್ದವು. ರಾಷ್ಟ್ರಮಟ್ಟದ ಈ ಪರೀಕ್ಷೆಯಲ್ಲಿ ಮಣ್ಣು ವಿಜ್ಞಾನ ವಿಭಾಗದಲ್ಲಿ ಕೇವಲ ಐದು ಜನ ಆಯ್ಕೆಯಾಗಿದ್ದೇವೆ. ಹೈದರಾಬಾದ್‌ನಲ್ಲಿ ತರಬೇತಿ ಮುಗಿದ ಬಳಿಕ ದೇಶದ ಯಾವುದಾದರೊಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿ ಹುದ್ದೆ ದೊರೆಯಲಿದೆ’ ಎಂದು ತಮ್ಮ ಸಾಧನೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಖುಷಿ ಹಂಚಿಕೊಂಡರು.

‘ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಇಂತಹ ರಾಷ್ಟ್ರಮಟ್ಟದ ಹುದ್ದೆಗಳಿಗೆ ದೆಹಲಿ, ಬಿಹಾರದಂತಹ ಉತ್ತರ ಭಾರತದ ಅಭ್ಯರ್ಥಿಗಳೇ ಹೆಚ್ಚಾಗಿ ಆಯ್ಕೆಯಾಗುತ್ತಾರೆ. ದಕ್ಷಿಣ ಭಾರತದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ತಾಂಡಾದಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು ಇಂತಹ ಹುದ್ದೆ ಪಡೆಯುವುದು ಅಪರೂಪದ ವಿದ್ಯಮಾನ. ಸತತ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಮೇನ್ಸ್ ಪರೀಕ್ಷೆ ಹಾಗೂ ಸಂದರ್ಶನಕ್ಕೆ ತಯಾರಾಗುವಾಗ ನಿತ್ಯ ಮೂರರಿಂದ ನಾಲ್ಕು ಗಂಟೆಯಷ್ಟೇ ನಿದ್ದೆ ಮಾಡುತ್ತಿದ್ದೆ. ಬಿ.ಎಸ್ಸಿ, ಎಂ.ಎಸ್ಸಿ.ಗೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಓದುತ್ತಿದ್ದೆ’ ಎಂದು ತಮ್ಮ ಸಾಧನೆಯ ಹಿಂದಿನ ಶ್ರಮವನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT