ಸೋಮವಾರ, ಆಗಸ್ಟ್ 8, 2022
24 °C

ಪ್ರತಿಭಾನ್ವಿತರು ಸಂಶೋಧನೆಯಲ್ಲಿ ನಿರತವಾಗಲಿ: ಬಿಡವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ‘ಬಹುಶಿಸ್ತೀಯ ಸಂಶೋಧನೆಯಲ್ಲಿ ಇತ್ತೀಚಿನ ಆವಿಷ್ಕಾರಗಳು’ ಕುರಿತ ರಾಷ್ಟ್ರೀಯ ಸಮ್ಮೇಳನ ಭಾನುವಾರ ಸಂಪನ್ನವಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ  ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಕುಮಾರ್ ಬಿಡವೆ, ‘ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಸುಮಾರು 12 ವಿಭಾಗಗಳಲ್ಲಿ 110ಕ್ಕೂ ಹೆಚ್ಚು ಸೆಷನ್‌ಗಳು ನಡೆದವು. ವಿವಿಧ ಕ್ಷೇತ್ರಗಳ ಪರಿಣಿತರಿಂದ 500ಕ್ಕೂ ಹೆಚ್ಚು ಪ್ರಬಂಧಗಳು ಮಂಡನೆಯಾದವು. ಅದರಲ್ಲಿ 150 ಪ್ರಬಂಧಗಳು ಗುಣಮಟ್ಟದಿಂದ ಕೂಡಿದ್ದವು’ ಎಂದು ವಿವರಿಸಿದರು.

‘ಡಾ. ಶರಣಬಸಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಎಸ್‌.ಅಪ್ಪ ಮತ್ತು ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಬಸವರಾಜ ದೇಶಮುಖರ ಮಾರ್ಗದರ್ಶನ ಮತ್ತು ಉಪಕುಲಪತಿ ಡಾ. ನಿರಂಜನ್ ನಿಷ್ಠಿ ಅವರ ಪ್ರೋತ್ಸಾಹದಿಂದಾಗಿ ಈ ಸಮ್ಮೇಳನ ಫಲಪ್ರದವಾಗಿದೆ. ಶಿಕ್ಷಕರು, ಸಂಶೋಧನಾ ವಿದ್ವಾಂಸರು, ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಯಿತು. ಮುಂಬರುವ ನವೆಂಬರ್ ತಿಂಗಳಿನಲ್ಲಿ ಮತ್ತೊಂದು ಸಮ್ಮೇಳನಕ್ಕೆ ಇದು ಅಡಿಪಾಯವಾಗಿದೆ’ ಎಂದರು.

‘ದೇಶ ಮತ್ತು ರಾಜ್ಯದ ವಿವಿಧ ಭಾಗಗಳ ವಿಶ್ವವಿದ್ಯಾಲಯ, ಐಐಟಿಯ ಖಾಸಗಿ ವಿಶ್ವವಿದ್ಯಾಲಯಗಳಿಂದ ವಿದ್ವಾಂಸರು ಮತ್ತು ತಜ್ಞರು ತಮ್ಮ ಪ್ರಬಂಧಗಳನ್ನು ಮಂಡಿಸಿದರು. ವಿದ್ಯಾರ್ಥಿಗಳಿಗೆ ಸಂಶೋಧನಾ ಅವಕಾಶಗಳನ್ನು ಒದಗಿಸಿ, ಅವರನ್ನು ಪ್ರೋತ್ಸಾಹಿಸಿದರು’ ಎಂದು ಅವರು ಹೇಳಿದರು.

‘ಶರಣಬಸವ ವಿಶ್ವವಿದ್ಯಾಲಯವು ಯುವ ವಿದ್ಯಾರ್ಥಿಗಳನ್ನು ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಗುಣಮಟ್ಟದ ಸಂಶೋಧನೆ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಭಾಷಾ ವಿಷಯಗಳ ಮುಖ್ಯಸ್ಥ ಡಾ. ಎಸ್.ಜಿ ಡೊಳ್ಳೇಗೌಡರು ಮಾತನಾಡಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಾಣಿಜ್ಯ ಮಹಾವಿದ್ಯಾಲಯದ ದಶರಥ ಮೇತ್ರಿ, ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಬಸವರಾಜ ಮಠಪತಿ, ಡಾ.ಶಿವದತ್ತ ಹೊನ್ನಳ್ಳಿ, ಡಾ.ಶಿವಕುಮಾರ್ ಜವಳಗಿ, ಡಾ. ಶ್ರೀಕಾಂತ ಪಾಟೀಲ, ಶಿವಕುಮಾರ್ ರಾಚೋಟಿ, ವಾಣಿಶ್ರೀ ಸಿ ಟಿ, ನಾಗಬಸವಣ್ಣ ಗುರಗೋಳ, ಶರಣಬಸಪ್ಪ ಮಡಿವಾಳ ಸೇರಿ ಹಲವರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು