ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಿ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ
Published 23 ಏಪ್ರಿಲ್ 2024, 4:56 IST
Last Updated 23 ಏಪ್ರಿಲ್ 2024, 4:56 IST
ಅಕ್ಷರ ಗಾತ್ರ

ಕಲಬುರಗಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿ ನಗರದಲ್ಲಿ ಸೋಮವಾರ ಬಿಜೆಪಿ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದವು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಠಾಧೀಶರು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸರ್ದಾರ್ ವಲ್ಲಭಭಾಯಿ ಪಟೇಲ್ (ಎಸ್‌ವಿಪಿ) ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಡಿಸಿ ಕಚೇರಿ ಒಳ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು.

ಈ ವೇಳೆ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ, ‘ಹಿಂದೂ ಧರ್ಮದ ಯುವತಿ, ಯುವಕರ ಕೊಲೆ ಬದಲು ಅನ್ಯಧರ್ಮೀಯರದ್ದು ಆಗಿದ್ದರೆ ಬುದ್ಧಿಜೀವಿಗಳು, ಸಾಹಿತಿಗಳು ಮೇಣದ ಬತ್ತಿ ಹಿಡಿದು ಬೀದಿಗೆ ಬರುತ್ತಿದ್ದರು. ಈಗ ಒಬ್ಬರೂ ಬಾಯಿ ಬಿಡುತ್ತಿಲ್ಲ’ ಎಂದರು.

‘ತಾಯಿ ಎದುರೇ ಮಗಳ ಕೊಲೆಯಾಗಿದೆ. ಹಿಂದೂಗಳು ಕಾನೂನು ಕೈಗೆ ಎತ್ತಿಕೊಳಬಾರದು ಎಂದು ತಾಳ್ಮೆಯಿಂದ ಇದ್ದಾರೆ. ನಮ್ಮ ತಾಳ್ಮೆಯನ್ನು ಕಾಂಗ್ರೆಸ್ಸಿಗರು ಪರೀಕ್ಷಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕರ್ನಾಟಕ ರಾಜ್ಯ ಜಮ್ಮು ಮತ್ತು ಕಾಶ್ಮೀರದಂತೆ ಆಗುತ್ತದೆ. ಹುಬ್ಬಳಿಯಂತಹ ಘಟನೆ ಕಲಬುರಗಿಯಲ್ಲೂ ಸಂಭವಿಸಬಹುದು’ ಎಂದು ಹೇಳಿದರು.

‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಸರ್ಕಾರದಲ್ಲಿ ಹಿಂದೂಗಳ ರಕ್ಷಣೆ ಆಗುವುದಿಲ್ಲ. ನಮ್ಮ ರಕ್ಷಣೆ
ನಾವೇ ಮಾಡಿಕೊಳ್ಳಬೇಕು. ವಿಧಾನಸೌಧದಲ್ಲಿ ದಮ್ಮು, ತಾಕತ್ತು ಎನ್ನುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ ಎಲ್ಲಿಗೆ ಹೋಗಿದ್ದಾರೆ? ಬಸವಣ್ಣನ ತತ್ವ ಪ್ರತಿಪಾದಿಸುವ ವೀರಶೈವ ಲಿಂಗಾಯತ ಸಮುದಾಯದವರೂ ಆಗಿರುವ ಸಚಿವ ಡಾ.ಶರಣಪ್ರಕಾಶ ಪಾಟೀಲರ ಹೇಳಿಕೆ ಸಮಂಜಸವಲ್ಲ’ ಎಂದರು.

ಡಾ.ಉಮೇಶ ಜಾಧವ ಮಾತನಾಡಿ, ‘ನೇಹಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ಖಂಡನೀಯ. ಈ ಕೊಲೆಯಿಂದಾಗಿ ಹೆಣ್ಣು ಮಕ್ಕಳಿರುವ ಕುಟುಂಬಸ್ಥರಿಗೆ ಆಘಾತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಕಪ್ಪು ದಿನ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ರೇವಣ್ಣಸಿದ್ದ ಶಿವಾಚಾರ್ಯರು, ಪಾಲಿಕೆಯ ಮೇಯರ್ ವಿಶಾಲ ದರ್ಗಿ, ಉಪ ಮೇಯರ್ ಶಿವಾನಂದ ಪಿಸ್ತಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮುಖಂಡರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಾಬುರಾವ ಚವ್ಹಾಣ್, ದತ್ತಾತ್ರೇಯ ಪಾಟೀಲ ರೇವೂರ, ಶಿವಯೋಗಿ ನಾಗನಹಳ್ಳಿ, ಜಯಶ್ರೀ ಮತ್ತಿಮಡು ಸೇರಿ ಇತರರು ಪಾಲ್ಗೊಂಡಿದ್ದರು.

ನೇಹಾ ಹಿರೇಮಠ ಕೊಲೆ ಖಂಡಿಸಿ ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಎಸ್‌ವಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು
ನೇಹಾ ಹಿರೇಮಠ ಕೊಲೆ ಖಂಡಿಸಿ ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಎಸ್‌ವಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು

ಲವ್ ಒಪ್ಪಂದ ಗೃಹ ಸಚಿವರ ಮನೆಯಲ್ಲಿ ಆಗಿತ್ತಾ?’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಲೆಗೆ ವೈಯಕ್ತಿಕ ಕಾರಣ ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಇಬ್ಬರ ನಡುವೆ ಪ್ರೀತಿ ಇತ್ತು ಎಂದು ಹೇಳಿಕೆ ಕೊಡುತ್ತಿದ್ದಾರೆ. ಈ ಇಬ್ಬರ ಪ್ರೀತಿಯ ಒಪ್ಪಂದ ಗೃಹ ಸಚಿವರ ಮನೆಯಲ್ಲಿ ಆಗಿತ್ತಾ’ ಎಂದು ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರಶ್ನಿಸಿದರು. ‘ಮಗಳನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿ ಇದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಸಾಂತ್ವಾನದ ಬದಲು ನೋವಿನ ಹೇಳಿಕೆ ಕೊಡುತ್ತಿದ್ದಾರೆ. ಕೂಗುಮಾರಿ ಮಂತ್ರಿ ‍ಪ್ರಿಯಾಂಕ್ ಖರ್ಗೆ ಅವರು ಘಟನೆಯನ್ನು ಖಂಡಿಸಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವೀರಶೈವ ಲಿಂಗಾಯತ ಹಿಂದೂ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದರು.

ವಾಹನ ದಟ್ಟಣೆ: ಪ್ರಯಾಣಿಕರ ಪರದಾಟ ಸುಮಾರು ಒಂದೂವರೆ ಗಂಟೆ ಕಾಲ ನಡೆದ ಪ್ರತಿಭಟನೆಯಿಂದಾಗಿ ಎಸ್‌ವಿಪಿ–ಸೂಪರ್ ಮಾರ್ಕೆಟ್ ರಸ್ತೆಯ ವಾಹನ ಸವಾರರು ಪರದಾಡಿದರು. ಎಸ್‌ವಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮನ್ನೆಚ್ಚರಿಕೆಯ ಕ್ರಮವಾಗಿ ವೃತ್ತದ ಸುತ್ತ ಬ್ಯಾರಿಕೇಡ್ ಹಾಕಿದ ಪೊಲೀಸರು ಬೇರೊಂದು ಕಡೆಗೆ ತೆರಳುವಂತೆ ವಾಹನಗಳ ಸವಾರರಿಗೆ ಸೂಚಿಸಿದರು. ಎಸ್‌ವಿಪಿ ಮತ್ತು ಡಿಸಿ ಕಚೇರಿ ಸುತ್ತಲಿನ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT