ಮಂಗಳವಾರ, ಜನವರಿ 31, 2023
19 °C

ಕಲಬುರಗಿ: ನವ ಸಂವತ್ಸರಕ್ಕೆ ಸಡಗರದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: 2022ರ ಕ್ಯಾಲೆಂಡರ್ ವರ್ಷದ ಕೊನೆಯ ದಿನವಾದ ಶನಿವಾರದ ಗಡಿಯಾರದ ಮುಳ್ಳು ಮಧ್ಯರಾತ್ರಿ 12ರ ಗಂಟೆ ಹಾದು ಹೋಗುತ್ತಿದ್ದಂತೆ ನಗರದಲ್ಲಿ ಹೊಸ ವರ್ಷದ ಸಂಭ್ರಮದ ಅಲೆಯಲ್ಲಿ ಯುವಕರು, ಯುವತಿಯರು, ಮಕ್ಕಳು–ವೃದ್ಧರು ತೇಲಿದರು. 

ಹೊಸ ವರ್ಷದ ಮುನ್ನದಿನವಾದ ಶನಿವಾರ ಸಂಜೆ ಇಡೀ ನಗರ ಯಾವುದೋ ಹಬ್ಬದ ದಿಬ್ಬಣಕ್ಕೆ ಹೊರಟಂತೆ ಸೂಪರ್ ಮಾರ್ಕೆಟ್ ರಸ್ತೆ, ಶರಣಬಸವೇಶ್ವ ದೇವಸ್ಥಾನ ರಸ್ತೆ, ಕೇಂದ್ರ ಬಸ್ ನಿಲ್ದಾಣದ ರಸ್ತೆ, ಎಸ್‌ವಿಪಿ ವೃತ್ತಗಳಲ್ಲಿ ಹೆಚ್ಚು ಜನಸಂದಣಿ ಕಂಡುಬಂತು.

ಬೇಕರಿ, ತಿನಿಸುಗಳ ಮಳಿಗೆಗಳ ಮುಂದೆ ಶಾಮಿಯಾನ ಹಾಕಿ, ವಿದ್ಯುತ್ ದೀಪಾಲಂಕಾರ, ಬಣ್ಣ–ಬಣ್ಣದ ಬಲೂನ್‌ಗಳನ್ನು ಕಟ್ಟಿ ಕೇಕ್, ಬಗೆಬಗೆಯ ಸಿಹಿ ತಿನಿಸುಗಳನ್ನು ಮಾರಾಟ ಮಾಡಲಾಯಿತು. ವಿದ್ಯಾರ್ಥಿಗಳು, ಯುವತಿಯರು, ಯುವಕರು, ಕುಟುಂಬದ ಸದಸ್ಯರು ಸೇರಿದಂತೆ ಬಹುತೇಕರು ಕೇಕ್ ಖರೀದಿಸಿದರು.

ಕೋವಿಡ್ ನಿಯಮಾವಳಿಗಳ ಆತಂಕಗಳ ನಡುವೆ ಬೇಕರಿ ವರ್ತಕರು ಕೇಕ್ ತಯಾರಿಕೆಗೆ ಎರಡು ದಿನ ಮುಂಚಿತವಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆಕರ್ಷಕ ರಿಯಾಯಿತಿ, ಉಚಿತ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆದವು. ಕೆಲವು ಬೇಕರಿಗಳು ಸಾಮಾನ್ಯ ದಿನಗಳ ದರಕ್ಕಿಂತ ಶೇ 10ರಿಂದ 15ರಷ್ಟು ಕಡಿತ ಮಾಡಿದ್ದವು.

‘ವೆಲ್‌ಕಮ್ 2023’ ಹ್ಯಾಪಿ ನ್ಯೂ ಇಯರ್, ಹೊಸ ವರ್ಷದ ಶುಭಾಷಯಗಳು ಎಂದು ಬರೆದಿದ್ದ ತರಹೇವಾರಿ ಕೇಕ್‌ಗಳು ಗಮನ ಸೆಳೆದವು. ಅರ್ಧ ಕೆ.ಜಿ.ಯಿಂದ 15 ಕೆ.ಜಿ.ವರೆಗೆ ಕ್ರೀಮ್‌ ಕೇಕ್‌, ಬಟರ್ ಸ್ಕಾಚ್ ಕೇಕ್, ಬ್ಲ್ಯಾಕ್‌ ಫಾರೆಸ್ಟ್, ಪಿಸ್ತಾ, ಚಾಕೋಲೆಟ್, ಮಾಂಗೊ, ಸ್ಟ್ರಾಬರಿ, ಬಾದಾಮ್, ಪೈನಾಪಲ್, ಗ್ರೀನ್ ಆ್ಯಪಲ್ ಸೇರಿದಂತೆ 25 ಬಗೆಯ ಕೇಕ್‌ಗಳು ಮಾರಾಟ ಆದವು.

ಕಾಲೇಜು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು, ಕೆಲವು ಯುವಕರು ಮತ್ತು ಕುಟುಂಬ ಸದಸ್ಯರು ಮನೆಯ ತಾರಸಿ, ಹೋಟೆಲ್, ಧಾಬಾ, ರೆಸ್ಟೋರೆಂಟ್, ತೋಟಗಳಲ್ಲಿ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ತಿನಿಸಿ ಶುಭಾಶಯಗಳ ವಿನಿಮಯಗಳೊಂದಿಗೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

‘ಕೋವಿಡ್ ಬಳಿಕ ಕಳೆಗುಂದಿದ್ದ ಕೇಕ್ ಮಾರಾಟ ಈ ವರ್ಷ ಚೇತರಿಸಿಕೊಂಡಿದೆ. ಸುಮಾರು 2.5 ಕ್ವಿಂಟಲ್‌ನಷ್ಟು ನಾನಾ ಬಗೆಯ ಕೇಕ್‌ಗಳು ಮಾರಾಟ ಆಗಿವೆ. ಎರಡು ದಿನಗಳಿಂದ ಪ್ರಿ ಆರ್ಡರ್ ಬಂದಿದ್ದು, ಶನಿವಾರ ಸಂಜೆ 5ರ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಖರೀದಿ ಕಂಡುಬಂದಿದೆ’ ಎಂದು ಶ್ರೀನಿವಾಸ್ ಅಯ್ಯಂಗಾರ್‍ಸ್‌ ಬೇಕರಿ ಮಾಲೀಕ ಭರತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸಿಹಿ ಖಾದ್ಯಗಳ ಘಮಲು

ನಗರದ ಸ್ವೀಟ್‌ ಮಾರ್ಟ್‌, ಬೇಕರಿ, ಆಹಾರ ಮಳಿಗೆಗಳ ಮುಂದೆ ಗ್ರಾಹಕರ ಸಿಹಿ ಖಾದ್ಯಗಳ ಖರೀದಿ ಭರಾಟೆ ಕಂಡುಬಂತು.

ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಇರುವ ಮಹಾರಾಜ ಸ್ವೀಟ್ಸ್, ಮಾಮು ಪುರಿ ಸ್ವೀಟ್ಸ್, ದಿಲ್ಲಿವಾಲಾ ಸ್ವೀಟ್ಸ್, ಮಿಶ್ರಾ ಫೇಡಾ, ಮಾತೇಶ್ವರಿ ಸ್ವೀಟ್ಸ್, ಅಗರವಾಲ್ ಸ್ವೀಟ್ಸ್‌ಗಳಲ್ಲಿ ವಹಿವಾಟು ಕಂಡುಬಂತು.

ಬದಾಮಿ, ಗೊಡಂಬಿ, ಅಡುಗೆ ಎಣ್ಣೆ, ಹಾಲು, ತುಪ್ಪ, ಸಕ್ಕರೆ, ಮೈದಾ ಹಿಟ್ಟು, ಹೆಸರು, ತೊಗರಿ, ಉದ್ದಿನ ಬೆಳೆ ಸೇರಿದಂತೆ ವೈವಿಧ್ಯಮಯ ಲಡ್ಡು, ಗುಲಾಬ್ ಜಾಮೂನ್, ಬರ್ಫಿ, ಜಹಾಂಗೀರ್, ಹಲ್ವಾ, ಪೇಡಾ, ಮೈಸೂರ್‌ ಪಾಕ್, ಜಿಲೇಬಿ, ಬರ್ಫಿ, ಕರದಂಟು, ಬದಾಮಿ ಚಿಕ್ಕಿ, ಬಾದುಶಾ, ಕಾಜುಕಾಟ್ಲಿ, ಶಂಕರ ಪೋಳಿ, ಸೋನಪಾಪಡಿ, ಮ್ಯಾಂಗೋ ಜೀಜು, ಆ್ಯಪಲ್ ಸ್ಟೀಟ್‌, ಮಾಲ್‌ ಪುರಿ, ಖವಾ, ಅಂಜೂರ್‌ ಬರ್ಫಿ ಸೇರಿದಂತೆ ಬಾಯಲ್ಲಿ ನೀರು ಉಕ್ಕಿಸುವ ತರಹೇವಾರಿ ಸಿಹಿ ತಿನಿಸುಗಳು ಮಾರಾಟ ಆದವು.

ಪ್ರಮುಖ ವೃತ್ತಗಳಲ್ಲಿ ವಾಹನ ದಟ್ಟಣೆ

ಸಂಜೆ ಆಗುತ್ತಿದ್ದಂತೆ ಜನರು ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರಿಂದ ಬಹುತೇಕ ರಸ್ತೆಗಳು, ವೃತ್ತಗಳು ವಾಹನ ದಟ್ಟಣೆಯಿಂದ ಕೂಡಿದವು. ಸಂಚಾರ ಅಸ್ತವ್ಯಸ್ತಗೊಂಡು ಚಾಲಕರು, ಪ್ರಯಾಣಿಕರು ಬಸವಳಿದರು.

ಕಾಲೇಜು ತರಗತಿ, ಕಚೇರಿ, ಇತರೆ ಕೆಲಸ ಮುಗಿಸಿಕೊಂಡು ಬಂದ ನೌಕರರು ಮತ್ತು ವಿದ್ಯಾರ್ಥಿಗಳು ಹೊಸ ವರ್ಷದ ಖರೀದಿಗೆ ಮಾರುಕಟ್ಟೆ, ಶಾಪಿಂಗ್ ಮಾಲ್‌ಗಳಿಗೆ ತೆರಳಿದರು. ಸೂಪರ್ ಮಾರ್ಕೆಟ್‌, ಕಪಡಾ ಬಜಾರ್, ಶಾಪಿಂಗ್‌ ಮಾಲ್‌ಗಳು ಸೇರಿದಂತೆ ಹಲವೆಡೆ ಸಾಮಗ್ರಿಗಳ ಖರೀದಿಯಲ್ಲಿ ನಿರತವಾದರು.

ಸಾಮಗ್ರಿ ಖರೀದಿಸಿ ರಾತ್ರಿ ವೇಳೆ ಮನೆಗೆ ವಾಪಸ್ ಆಗುವಾಗ ಜಗತ್ ವೃತ್ತ, ಖರ್ಗೆ ಪೆಟ್ರೋಲ್ ಬಂಕ್, ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ, ಆನಂದ್ ವೃತ್ತ, ಗೋವಾ ಹೋಟೆಲ್ ವೃತ್ತ, ಹಳೆ ಜೇವರ್ಗಿ ಕ್ರಾಸ್ ಸೇರಿದಂತೆ ಹಲವೆಡೆ ವಾಹನಗಳ ದಟ್ಟಣೆ ಕಂಡುಬಂತು. ಇದರಿಂದ ಸಾಲುಗಟ್ಟಿ ವಾಹನಗಳು ನಿಂತಿದ್ದವು.

ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು