ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳು ಉಪದೇಶಕ್ಕಲ್ಲ; ಜೀವನ ಹಸನಾಗಿಸಲು: ಅಲ್ಲಮಪ್ರಭು ಸ್ವಾಮೀಜಿ ಅಭಿಮತ

‘ಅರಿವಿನ ಮನೆ–619’ನೇ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಲ್ಲಮಪ್ರಭು ಸ್ವಾಮೀಜಿ ಅಭಿಮತ
Last Updated 24 ಡಿಸೆಂಬರ್ 2019, 12:36 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬಸವಾದಿ ಶರಣರು ಕಾಲವಾಗಿ 900 ವರ್ಷಗಳು ಕಳೆದ ಮೇಲೂ ವಚನಗಳ ಆಂತರ್ಯ ಸತ್ವ ಕುಗ್ಗದೇ ಇರುವುದು ವಿಶೇಷ. ಇದರ ಬಗ್ಗೆ ನಾವು ವಿಶೇಷವಾಗಿ ಜಗತ್ತಿನ ಗಮನ ಸೆಳೆಯಬೇಕಿದೆ. ಸರ್ವಕಾಲಕ್ಕೂ ದಾರಿದೀಪ ಆಗಬಹುದಾದ ವಚನಗಳನ್ನು ಶರಣರು ನೀಡಿದ್ದಾರೆ’ ಎಂದು ಬೆಂಗಳೂರಿನ ಬಸವ ಯೋಗಾಶ್ರಮದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಭಾನುವಾರ ವೀರಭದ್ರಪ್ಪ ಬಸವಲಿಂಗಪ್ಪ ನಿಷ್ಠಿ ಸ್ಮರಣಾರ್ಥ ನಡೆದ ‘ಅರಿವಿನ ಮನೆ–619’ನೇ ದತ್ತಿ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ಸಂದೇಶಗಳು’ ಕುರಿತು ಅವರು ಮಾತನಾಡಿದರು.

‘ಹನ್ನೆರಡನೆಯ ಶತಮಾನ ಸಮಸ್ತ ಮನುಕುಲಕ್ಕೆ ಅಧ್ಯಾತ್ಮವನ್ನು ತಿಳುಹಿಸಿ ಕೊಡುವಂತಹ ಕಾಲಮಾನವಾಗಿತ್ತು. ಬಸವಣ್ಣನವರು ವಚನಗಳ ಮೂಲಕ ಬಹು ದೊಡ್ಡ ಕ್ರಾಂತಿಯನ್ನು ಮಾಡಿದರು. ವಚನಗಳನ್ನು ಶರಣರು ತಮ್ಮ ಬೌದ್ಧಿಕ ಸಾಮರ್ಥ್ಯ ಪ್ರದರ್ಶಿಸಲು ಬರೆಯಲಿಲ್ಲ. ತಮ್ಮ ಹೃದಯಾಂತರಾಳದಲ್ಲಿ ಮೂಡಿದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಹೊಳಹುಗಳನ್ನು ವಚನಗಳ ಮೂಲಕ ಕಟ್ಟಿ ಕೊಟ್ಟಿದ್ದಾರೆ’ ಎಂದರು.

‘ಶರಣರು ವಚನಗಳನ್ನು ಬರೆಯುವಾಗ ಯಾವುದೇ ಬೌದ್ಧಿಕ ಪ್ರದರ್ಶನವನ್ನು ಮಾಡಲಿಲ್ಲ. ಆ ವಚನಗಳು ಶರಣರ ಅಂತರಂಗದಿಂದ ಮೂಡಿಬಂದ ಸ್ಫುರಣಗಳೆನ್ನಬಹುದು. ಹಿಂದೆ ಋಷಿ ಮುನಿಪುಂಗವರು ವೇದ, ಉಪನಿಷತ್ತುಗಳ ಮುಖಾಂತರ ಜ್ಞಾನವನ್ನು ಉಪದೇಶಿಸಿದರು. ಆದರೆ ಅದರಿಂದಾಗಿ ಒಂದು ಸಮಾಜ ನಿರ್ಮಾಣ ಆಗಲಿಲ್ಲ. ಹನ್ನೆರಡನೆಯ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸುತ್ತ ಸಮಾಜಕ್ಕೆ ಹೊಸ ಸಂದೇಶಗಳನ್ನು ನೀಡುತ್ತಾ ತನ್ಮೂಲಕ ಸಮಾಜದಲ್ಲಿ ಅಡಗಿದ್ದ ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಲಗಿಸಲು ಬಹುವಾಗಿ ಶ್ರಮಿಸಿದರು’ ಎಂದೂ ಸ್ವಾಮೀಜಿ ಹೇಳಿದರು.

ಬಸವ ದಿನಚರಿ–2020 ಅಲ್ಲಮಪ್ರಭು ಸ್ವಾಮೀಜಿ ಬಿಡುಗಡೆಗೊಳಿಸಿದರು. ವೇದಿಕೆಯ ಮೇಲೆ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿದೇರ್ಶಕರಾದ ಡಾ.ವೀರಣ್ಣ ದಂಡೆ, ದತ್ತಿ ದಾಸೋಹಿಗಳಾದ ನೀಲಮ್ಮ ತಾಯಿ ನಿಷ್ಠಿ, ಶರಣಬಸಪ್ಪ ನಿಷ್ಠಿ ಇದ್ದರು.

ಗುರುಶಾಂತಯ್ಯ ಸ್ಥಾವರಮಠ ನಡೆಸಿಕೊಟ್ಟ ವಚನಸಂಗೀತ ಎಲ್ಲರ ಗಮನ ಸೆಳೆಯಿತು. ಪ್ರಧಾನ ಕಾರ್ಯದರ್ಶಿ ಎಚ್. ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT